Advertisement

ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ ಬೆಂಗಳೂರಿಗೆ 18 ರನ್‌ ಗೆಲುವು

12:25 AM Apr 20, 2022 | Team Udayavani |

ಮುಂಬಯಿ: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವು ಮಂಗಳವಾರದ ಐಪಿಎಲ್‌ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು 18 ರನ್ನುಗಳಿಂದ ಸೋಲಿಸಿದೆ. ಈ ಗೆಲುವಿನಿಂದ ಆರ್‌ಸಿಬಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ.

Advertisement

ಗೆಲ್ಲಲು 182 ರನ್‌ ತೆಗೆಯುವ ಗುರಿ ಪಡೆದ ಲಕ್ನೋ ತಂಡವು ಆರ್‌ಸಿಬಿಯ ನಿಖರ ದಾಳಿಗೆ ತತ್ತರಿಸಿತು. ಯಾವುದೇ ಹಂತದಲ್ಲೂ ಪ್ರತಿಹೋರಾಟ ನೀಡಲು ವಿಫ‌ಲವಾದ ಲಕ್ನೋ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟಿಗೆ 163 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಮೊದಲು ಆರ್‌ಸಿಬಿ ಪ್ಲೆಸಿಸ್‌ ಅವರ ಅಮೋಘ ಆಟದಿಂದಾಗಿ 6 ವಿಕೆಟಿಗೆ 181 ರನ್‌ ಗಳಿಸಿತ್ತು.

ಕೆಎಲ್‌ ರಾಹುಲ್‌ ಮತ್ತು ಕೃಣಾಲ್‌ ಪಾಂಡ್ಯ ಅವರನ್ನು ಹೊರತುಪಡಿಸಿ ಅಗ್ರ ಕ್ರಮಾಂಕದ ಉಳಿದ ಆಟಗಾರರೆಲ್ಲರೂ ಉತ್ತಮ ಆಟ ಪ್ರದರ್ಶಿಸಲು ವಿಫ‌ಲರಾದರು. ಹ್ಯಾಝೆಲ್‌ವುಡ್‌, ಮ್ಯಾಕ್ಸ್‌ವೆಲ್‌, ಹರ್ಷಲ್‌ ಪಟೇಲ್‌ ಮತ್ತು ಸಿರಾಜ್‌ ಅವರ ಉತ್ತಮ ಬೌಲಿಂಗ್‌ನಿಂದಾಗಿ ಆರ್‌ಸಿಬಿ ಗೆಲುವಿನ ನಗೆ ಚೆಲ್ಲಿತು. ಬಿಗು ದಾಳಿ ಸಂಘಟಿಸಿದ ಹ್ಯಾಝೆಲ್‌ವುಡ್‌ ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 25 ರನ್‌ ನೀಡಿ ನಾಲ್ಕು ವಿಕೆಟ್‌ ಹಾರಿಸಿದರು.

ಈ ಮೊದಲು ಜವಾಬ್ದಾರಿ ಯುತ ಆಟವಾಡಿದ ನಾಯಕ ಫಾ ಡು ಪ್ಲೆಸಿಸ್‌ ಅವರ ಅಮೋಘ 96 ರನ್‌ ಸಾಹಸದಿಂದ ರಾಯಲ್‌ ಚಾಲೆಂಜರ್ ಬೆಂಗಳೂರು 6 ವಿಕೆಟಿಗೆ 181 ರನ್‌ ಪೇರಿಸುವಲ್ಲಿ ಯಶಸ್ವಿಯಾಗಿತ್ತು.

ಆರ್‌ಸಿಬಿ ಆರಂಭ ಅತ್ಯಂತ ಆಘಾತಕಾರಿಯಾಗಿತ್ತು. ದುಷ್ಮಂತ ಚಮೀರ ಪಂದ್ಯದ ಪ್ರಥಮ ಓವರ್‌ನಲ್ಲೇ ಸತತ ಎಸೆತಗಳಲ್ಲಿ ಅವಳಿ ಹೊಡೆತವಿಕ್ಕಿದರು. 5ನೇ ಎಸೆತದಲ್ಲಿ ಅನುಜ್‌ ರಾವತ್‌ (4) ಉದುರುವುದರೊಂದಿಗೆ ಆರ್‌ಸಿಬಿಯ ಓಪನಿಂಗ್‌ ದೌರ್ಬಲ್ಯ ಮತ್ತೊಮ್ಮೆ ಸಾಬೀತಾಯಿತು. ಮುಂದಿನ ಎಸೆತದಲ್ಲೇ ವಿರಾಟ್‌ ಕೊಹ್ಲಿ ಬ್ಯಾಕ್‌ವರ್ಡ್‌ ಪಾಯಿಂಟ್‌ನಲ್ಲಿದ್ದ ಹೂಡಾಗೆ ಕ್ಯಾಚ್‌ ನೀಡಿ “ಗೋಲ್ಡನ್‌ ಡಕ್‌’ ಸಂಕಟಕ್ಕೆ ಸಿಲುಕಿದರು. ಕೊಹ್ಲಿ ಐಪಿಎಲ್‌ನಲ್ಲಿ ಮೊದಲ ಎಸೆತಕ್ಕೇ ಔಟಾದ 4ನೇ ನಿದರ್ಶನ ಇದಾಗಿದೆ. ಇದಕ್ಕೂ ಮೊದಲು ಕೊಹ್ಲಿಗೆ ಇಂಥದೊಂದು ಆಘಾತವಿಕ್ಕಿದವರು ಆಶಿಷ್‌ ನೆಹ್ರಾ, ಸಂದೀಪ್‌ ಶರ್ಮ ಮತ್ತು ನಥನ್‌ ಕೋಲ್ಟರ್‌ ನೈಲ್‌.

Advertisement

ಗ್ಲೆನ್‌ ಮ್ಯಾಕ್ಸ್‌ವೆಲ್‌ ಬಿರುಸಿನಿಂದಲೇ ಬ್ಯಾಟಿಂಗಿಗೆ ಇಳಿದರು. ಚಮೀರ ಅವರಿಗೆ ಸತತ 2 ಫೋರ್‌, ಒಂದು ಸಿಕ್ಸರ್‌ ರುಚಿ ತೋರಿಸಿದರು. ಮಿಂಚಿನ ಆರಂಭ ಪಡೆದರೂ ಇದನ್ನು ಬಿಗ್‌ ಇನ್ನಿಂಗ್ಸ್‌ ಆಗಿ ಪರಿವರ್ತಿಸಲು ಅವರಿಂದ ಸಾಧ್ಯವಾಗಲಿಲ್ಲ. ಕೃಣಾಲ್‌ ಪಾಂಡ್ಯ ಈ ಬಹುಮೂಲ್ಯ ವಿಕೆಟ್‌ ಉಡಾಯಿಸಿದರು. ಮ್ಯಾಕ್ಸ್‌ವೆಲ್‌ ಗಳಿಕೆ 11 ಎಸೆತಗಳಿಂದ 23 ರನ್‌ (4 ಬೌಂಡರಿ, 1 ಸಿಕ್ಸರ್‌). ಪವರ್‌ ಪ್ಲೇ ಒಳಗಾಗಿ 47 ರನ್ನಿಗೆ ಆರ್‌ಸಿಬಿಯ 3 ದೊಡ್ಡ ವಿಕೆಟ್‌ ಉರುಳಿದವು. ನಾಯಕ ಫಾ ಡು ಪ್ಲೆಸಿಸ್‌ ಮಾತ್ರ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡು ನಿಂತಿದ್ದರು.

ಸುಯಶ್‌ ಪ್ರಭುದೇಸಾಯಿ ಹತ್ತರ ಗಡಿಗೆ ಆಟ ಮುಗಿಸಿದರು. ಜೇಸನ್‌ ಹೋಲ್ಡರ್‌ ತಮ್ಮ ಮೊದಲ ಓವರ್‌ನಲ್ಲೇ ವಿಕೆಟ್‌ ಬೇಟೆಯಾಡಿದರು. 10 ಓವರ್‌ ಅಂತ್ಯಕ್ಕೆ ಸ್ಕೋರ್‌ 87ಕ್ಕೆ ಏರಿತು. ಡು ಪ್ಲೆಸಿಸ್‌-ಶಬಾಜ್‌ ಅಹ್ಮದ್‌ ಇನ್ನಿಂಗ್ಸ್‌ ಕಟ್ಟತೊಡಗಿದರು. ಈ ನಡುವೆ ಡು ಪ್ಲೆಸಿಸ್‌, ಬಿಷ್ಣೋಯಿ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿ ಅರ್ಧ ಶತಕ ಪೂರೈಸಿದರು. ಈ ಜೋಡಿ 5ನೇ ವಿಕೆಟಿಗೆ 48 ಎಸೆತಗಳಿಂದ 70 ರನ್‌ ಪೇರಿಸಿ ತಂಡದ ಸವಾಲಿನ ಮೊತ್ತಕ್ಕೆ ನೆರವಾಯಿತು. ಇದರಲ್ಲಿ ಶಬಾಜ್‌ ಗಳಿಕೆ 26 ರನ್‌.

ಡೆತ್‌ ಓವರ್‌ಗಳಲ್ಲಿ ಡು ಪ್ಲೆಸಿಸ್‌-ದಿನೇಶ್‌ ಕಾರ್ತಿಕ್‌ ಜತೆಗೂಡಿದಾಗ ಪಂದ್ಯದ ಕುತೂಹಲ ಸಹಜವಾಗಿಯೇ ಹೆಚ್ಚಿತು. ಜತೆಗೆ ಡು ಪ್ಲೆಸಿಸ್‌ ಅವರ ಸೆಂಚುರಿಗಾಗಿಯೂ ಆರ್‌ಸಿಬಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು. ಆದರೆ ಇದಕ್ಕೆ ನಾಲ್ಕೇ ರನ್‌ ಕೊರತೆ ಎದುರಾಯಿತು. ಅಂತಿಮ ಓವರ್‌ನ 5ನೇ ಎಸೆದಲ್ಲಿ ಶತಕದ ಧಾವಂತದಲ್ಲಿದ್ದ ಅವರು ಸ್ಟೋಯಿನಿಸ್‌ಗೆ ಕ್ಯಾಚ್‌ ನೀಡಿ ನಿರಾಸೆ ಅನುಭವಿಸಿದರು. ಡು ಪ್ಲೆಸಿಸ್‌ ಅವರ 96 ರನ್‌ 64 ಎಸೆತಗಳಿಂದ ಬಂತು. ಸಿಡಿಸಿದ್ದು 11 ಬೌಂಡರಿ, 2 ಸಿಕ್ಸರ್‌. ದಿನೇಶ್‌ ಕಾರ್ತಿಕ್‌ 13 ರನ್‌ ಬಾರಿಸಿ ಔಟಾಗದೆ ಉಳಿದರು (8 ಎಸೆತ, 1 ಸಿಕ್ಸರ್‌). ಕೊನೆಯ 5 ಓವರ್‌ಗಳಲ್ಲಿ 51 ರನ್‌ ಒಟ್ಟುಗೂಡಿತು.

ಸ್ಕೋರ್‌ ಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು
ಅನುಜ್‌ ರಾವತ್‌ ಸಿ ರಾಹುಲ್‌ ಬಿ ಚಮೀರ 4
ಫಾ ಡು ಪ್ಲೆಸಿಸ್‌ ಸಿ ಸ್ಟೋಯಿನಿಸ್‌ ಬಿ ಹೋಲ್ಡರ್‌ 96
ವಿರಾಟ್‌ ಕೊಹ್ಲಿ ಸಿ ಹೂಡಾ ಬಿ ಚಮೀರ 0
ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿ ಹೋಲ್ಡರ್‌ ಬಿ ಪಾಂಡ್ಯ 23
ಪ್ರಭುದೇಸಾಯಿ ಸಿ ಪಾಂಡ್ಯ ಬಿ ಹೋಲ್ಡರ್‌ 10
ಶಬಾಜ್‌ ಅಹ್ಮದ್‌ ರನೌಟ್‌ 26
ದಿನೇಶ್‌ ಕಾರ್ತಿಕ್‌ ಔಟಾಗದೆ 13
ಹರ್ಷಲ್‌ ಪಟೇಲ್‌ ಔಟಾಗದೆ 0
ಇತರ 9
ಒಟ್ಟು (6 ವಿಕೆಟಿಗೆ) 181
ವಿಕೆಟ್‌ ಪತನ: 1-7, 2-7, 3-44, 4-62, 5-132, 6-181.
ಬೌಲಿಂಗ್‌:
ದುಷ್ಮಂತ ಚಮೀರ 3-0-31-2
ಆವೇಶ್‌ ಖಾನ್‌ 4-0-33-0
ಕೃಣಾಲ್‌ ಪಾಂಡ್ಯ 4-0-29-1
ರವಿ ಬಿಷ್ಣೋಯಿ 4-0-47-0
ಜೇಸನ್‌ ಹೋಲ್ಡರ್‌ 4-0-25-2
ಮಾರ್ಕಸ್‌ ಸ್ಟೋಯಿನಿಸ್‌ 1-0-14-0

ಲಕ್ನೋ ಸೂಪರ್‌ ಜೈಂಟ್ಸ್‌
ಕ್ವಿಂಟನ್‌ ಡಿ ಕಾಕ್‌ ಸಿ ಮ್ಯಾಕ್ಸ್‌ವೆಲ್‌ ಬಿ ಹ್ಯಾಝೆಲ್‌ವುಡ್‌ 3
ಕೆಎಲ್‌ ರಾಹುಲ್‌ ಸಿ ಕಾರ್ತಿಕ್‌ ಬಿ ಹರ್ಷಲ್‌ 30
ಮನೀಷ್‌ ಪಾಂಡೆ ಸಿ ಹರ್ಷಲ್‌ ಬಿ ಹ್ಯಾಝೆಲ್‌ವುಡ್‌ 6
ಕೃಣಾಲ್‌ ಪಾಂಡ್ಯ ಸಿ ಶಾಬಾಜ್‌ ಬಿ ಮ್ಯಾಕ್ಸ್‌ವೆಲ್‌ 42
ದೀಪಕ್‌ ಹೂಡಾ ಸಿ ಪ್ರಭುದೇಸಾಯಿ ಬಿ ಸಿರಾಜ್‌ 13
ಆಯುಷ್‌ ಬದೋನಿ ಸಿ ಕಾರ್ತಿಕ್‌ ಬಿ ಹ್ಯಾಝೆಲ್‌ವುಡ್‌ 13
ಸ್ಟೋಯಿನಿಸ್‌ ಬಿ ಹ್ಯಾಝೆಲ್‌ವುಡ್‌ 24
ಜೇಸನ್‌ ಹೋಲ್ಡರ್‌ ಸಿ ಸಿರಾಜ್‌ ಬಿ ಹರ್ಷಲ್‌ 16
ದುಷ್ಮಂತ ಚಮೀರ ಔಟಾಗದೆ 1
ರವಿ ಬಿಷ್ಣೋಯಿ ಔಟಾಗದೆ 0
ಇತರ: 15
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 163
ವಿಕೆಟ್‌ ಪತನ: 1-17, 2-33, 3-64, 4-100, 5-108, 6, 135, 7-148, 8-163
ಬೌಲಿಂಗ್‌:
ಮೊಹಮ್ಮದ್‌ ಸಿರಾಜ್‌ 4-0-31-1
ಗ್ಲೆನ್‌ ಮ್ಯಾಕ್ಸ್‌ವೆಲ್‌ 2-0-11-1
ಜೋಶ್‌ ಹ್ಯಾಝೆಲ್‌ವುಡ್‌ 4-0-25-4
ಶಾಬಾಜ್‌ ಅಹ್ಮದ್‌ 4-0-25-0
ಹರ್ಷಲ್‌ ಪಟೇಲ್‌ 4-0-47-2
ವನಿಂದು ಹಸರಂಗ 2-0-20-0

ಪಂದ್ಯಶ್ರೇಷ್ಠ: ಫಾ ಡು ಪ್ಲೆಸಿಸ್‌

Advertisement

Udayavani is now on Telegram. Click here to join our channel and stay updated with the latest news.

Next