ಬೆಂಗಳೂರು: ಚೆನ್ನೈ ವಿರುದ್ಧ ಬೃಹತ್ ಮೊತ್ತ ಪೇರಿಸಿಯೂ ಆಘಾತಕಾರಿ ಸೋಲನ್ನು ಕಂಡಿದ್ದ ರಾಯಲ್ ಚಾಲೆಂಜರ್ ಬೆಂಗಳೂರು ತಂಡವು ರವಿವಾರದ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ ತಂಡವನ್ನು ಎದುರಿಸಲಿದ್ದು ಗೆಲುವಿಗಾಗಿ ಹಾತೊರೆಯಲಿದೆ.
ತೀವ್ರ ಪೈಪೋಟಿ ನೀಡುತ್ತಿದ್ದರೂ ಆರ್‌ಸಿಬಿ ಗೆಲುವಿನಿಂದ ದೂರವೇ ಉಳಿದಿದೆ. ಆಡಿದ ಆರು ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಜಯ ಸಾಧಿಸಿರುವ ಆರ್‌ಸಿಬಿ ಆರನೇ ಸ್ಥಾನದಲ್ಲಿದ್ದರೆ ಕೆಕೆಆರ್ ತಂಡವು ಮೂರು ಗೆಲುವು ನಾಲ್ಕು ಸೋಲಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಎರಡೂ ತಂಡಗಳು ಈ ಹಿಂದಿನ ಪಂದ್ಯದಲ್ಲಿ ಎದುರಾಳಿಯೆದುರು ಆಘಾತಕಾರಿ ಸೋಲನ್ನು ಕಂಡಿವೆ. ಬೆಂಗಳೂರು ತಂಡವು ಧೋನಿ ಅವರ ಸ್ಫೋಟಕ ಆಟದಿಂದಾಗಿ ಚೆನ್ನೈಗೆ ಶರಣಾದರೆ ಕೋಲ್ಕತಾ ತಂಡವು ಶುಕ್ರವಾರದ ಪಂದ್ಯದಲ್ಲಿ ಡೆಲ್ಲಿಗೆ 55 ರನ್ನುಗಳಿಂದ ಸೋತಿತ್ತು. ಹಾಗಾಗಿ ಎರಡೂ ತಂಡಗಳಿಗೆ ಪ್ಲೇ ಆಫ್ಗೆ ತೇರ್ಗಡೆಯಾಗಲು ಗೆಲುವು ಅನಿವಾರ್ಯವಾಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ಈ ಪಂದ್ಯ ನಡೆಯುತ್ತಿದೆ. ಚೆನ್ನೈ ವಿರುದ್ಧದ ಸೋಲನ್ನು ಮರೆತು ಕೊಹ್ಲಿ ಪಡೆ ಹೊಸ ಉತ್ಸಾಹದಿಂದ ಕೆಕೆಆರ್ ತಂಡವನ್ನು ಎದುರಿಸಲು ಸನ್ನದ್ಧವಾಗಬೇಕಾಗಿದೆ. ಈ ಹಿಂದೆ ಉಭಯ ತಂಡಗಳು ಮುಖಾಮುಖೀಯಾಗಿದ್ದಾಗ ಕೆಕೆಆರ್ ಜಯಭೇರಿ ಬಾರಿಸಿತ್ತು. ಸುನೀಲ್ ನಾರಾಯಣ್ 19 ಎಸೆತಗಳಿಂದ ಅರ್ಧಶತಕ ಸಿಡಿಸಿದ್ದರಿಂದ ನೂತನ ನಾಯಕ ದಿನೇಶ್ ಕಾರ್ತಿಕ್ ತಂಡ 177 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು. ನಾರಾಯಣ್, ಕುಲದೀಪ್ ಮತ್ತು ಚಾವ್ಲಾ ಕೆಕೆಆರ್‌ನ ಗೆಲುವಿನಲ್ಲಿ ತಮ್ಮ ಕೊಡುಗೆ ಸಲ್ಲಿಸಿದ್ದರು.
ಡಿ’ವಿಲಿಯರ್ ಪ್ರಚಂಡ ಫಾರ್ಮ್
ಎಬಿ ಡಿ’ವಿಲಿಯರ್ ಅವರ ಪ್ರಚಂಡ ಫಾರ್ಮ್ನಿಂದ ಆರ್‌ಸಿಬಿಗೆ ವರದಾನವಾಗಿದೆ. ಚೆನ್ನೈ ವಿರುದ್ಧ ಅವರು 30 ಎಸೆತಗಳಿಂದ 68 ರನ್ ಸಿಡಿಸಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದರು. ಅದಕ್ಕಿಂತ ಮೊದಲಿನ ಪಂದ್ಯದಲ್ಲಿ ಡಿ’ವಿಯರ್ ಏಕಾಂಗಿಯಾಗಿ ಹೋರಾಡಿ ಡೆಲ್ಲಿ ತಂಡವನ್ನು ಮುಳುಗಿಸಿದ್ದರು. ಆ ಪಂದ್ಯದಲ್ಲಿ ಡೆಲ್ಲಿ ದಾಳಿಯನ್ನು ಪುಡಿಗಟ್ಟಿದ್ದ ಅವರು 39 ಎಸೆತಗಳಿಂದ 90 ರನ್ ಸಿಡಿಸಿ ತಂಡಕ್ಕೆ ಸುಲಭ ಜಯ ತಂದುಕೊಟ್ಟಿದ್ದರು.
57 ಮತ್ತು ಅಜೇಯ 92 ರನ್ ಗಳಿಸಿದ್ದ ನಾಯಕ ವಿರಾಟ್ ಕೊಹ್ಲಿ ಚೆನ್ನೈ ವಿರುದ್ಧ ಸಿಡಿಯಲು ವಿಫಲರಾಗಿದ್ದರು. ಕಠಿನ ಪರಿಸ್ಥಿತಿಯಲ್ಲಿ ವಿಶೇಷ ಇನ್ನಿಂಗ್ಸ್ ಆಡಲು ಕೊಹ್ಲಿ ಉತ್ಸುಕರಾಗಿದ್ದಾರೆ. ಆರಂಭಿಕ ಕ್ವಿಂಟನ್ ಡಿ ಕಾಕ್ ಒಟ್ಟಾರೆ 165 ರನ್ ಗಳಿಸಿದ್ದು ಮಿಂಚುವ ಸಾಧ್ಯತೆಯಿದೆ. ಕೋರಿ ಆ್ಯಂಡರ್ಸನ್, ಮನ್‌ದೀಪ್ ಸಿಂಗ್ ಕೂಡ ಮಿಂಚಬೇಕಾಗಿದೆ.