ರಾಯಚೋಟಿ/ಹುಬ್ಬಳ್ಳಿ: ಆಂಧ್ರಪ್ರದೇಶ ರಾಜ್ಯದ ರಾಯಚೋಟಿ ಕ್ಷೇತ್ರದ ಶ್ರೀ ವೀರಭದ್ರಸ್ವಾಮಿ ವಾರ್ಷಿಕ ರಥೋತ್ಸವ ಗುರುವಾರ ವಿವಿಧ ಜನಪದ ವಾದ್ಯ-ಮೇಳಗಳೊಂದಿಗೆ ಸಂಭ್ರಮದಿಂದ ಜರುಗಿತು.
ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಕಲಬುರ್ಗಿ, ಬೀದರ ಸೇರಿದಂತೆ ವಿವಿಧ ಜಿಲ್ಲೆಗಳ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ತಮ್ಮ ಶ್ರದ್ಧಾ-ಭಕ್ತಿಯ ಸೇವೆ ಸಲ್ಲಿಸಿದರು. ರಥ ಆರಂಭಗೊಳ್ಳುತ್ತಿದ್ದಂತೆ ಉತ್ತತ್ತಿ, ಬಾಳೆಹಣ್ಣು, ಲಿಂಬೆಹಣ್ಣುಗಳನ್ನು ರಥಕ್ಕೆ ಎಸೆದು ಭಕ್ತಿಯ ನಮನ ಸಲ್ಲಿಸಿದರು.
ಹರಹರ ಮಹಾದೇವ… ಶ್ರೀ ಭದ್ರಕಾಳಿ, ರಾಯಚೋಟಿ ವೀರಭದ್ರೇಶ್ವರ ಮಹಾರಾಜಕೀ ಜೈ ಜಯಘೋಷ ಮೊಳಗಿದವು. ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಅಲಂಕೃತ ರಥದ ಪೂಜಾ ಕೈಂಕರ್ಯ ಜರುಗಿತು. ಹುಬ್ಬಳ್ಳಿ ತಾಲೂಕು ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ತುಮಕೂರು ಜಿಲ್ಲೆ ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮಗಳೂರು ಜಿಲ್ಲೆ ಬೇರುಗಂಡಿ ಬ್ರಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ, ರಾಯಚೂರು ಜಿಲ್ಲೆ ಕಿಲ್ಲೆ ಸಾವಿರದೇವರ ಸಂಸ್ಥಾನ ಬ್ರಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಬೈಲಹೊಂಗಲ ತಾಲೂಕು ಸಂಪಗಾಂವ ಕಟಾಪುರಿ ಹಿರೇಮಠದ ಚೆನ್ನವೀರ ಶಿವಾಚಾರ್ಯ ಸ್ವಾಮೀಜಿ, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ನಂದ್ಯಾಲದ ಬೃಹ್ಮಶ್ರೀ ನಂದುಲಮಠದ ಶಶಿಭೂಷಣ ಸಿದ್ಧಾಂತಿಗಳು ಪಾಲ್ಗೊಂಡಿದ್ದರು.
9 ದಿನಗಳ ಸಂಭ್ರಮ: ಕಳೆದ 9 ದಿನಗಳ ಕಾಲ ಜರುಗಿದ ಜಾತ್ರಾ ಮಹೋತ್ಸವದಲ್ಲಿ ಅಂಕುರಾರೋಪಣ, ಮಹಾಗಣಪತಿ ಪೂಜಾ, ದೀಕ್ಷಾ ಕಂಕಣ ಧ್ವಜಾರೋಹಣ, ತ್ರಿಶೂಲ ಉತ್ಸವ, ಕಲ್ಯಾಣ ಉತ್ಸವ, ಪುರುಷಾಮೃಗೋತ್ಸವ, ಗಜವಾಹನೋತ್ಸವ, ಯಾಳಿ ವಾಹನೋತ್ಸವ, ಸಿಂಹವಾಹನೋತ್ಸವ, ಹುಲಿವಾಹನೋತ್ಸವ ಸೇರಿ ದಂತೆ ಮತ್ತಿತರ ಧಾರ್ಮಿಕ ಸೇವೆ ಜರುಗಿದವು.
ವೀರಭದ್ರೇಶ್ವರ ದೇವಾಲಯ ಟ್ರಸ್ಟ್ ಕಾರ್ಯ ನಿರ್ವಾಹಕ ಅಧಿಕಾರಿ ಟಿ.ಮಂಜುಳಾ, ಹುಬ್ಬಳ್ಳಿ ಮಹಾನಗರದ ವೀರಭದ್ರಸ್ವಾಮಿ ರಥೋತ್ಸವ ಸೇವಾ ಸಮಿತಿ ಗಿರೀಶಕುಮಾರ ಬುಡರಕಟ್ಟಿಮಠ, ರಮೇಶ ಉಳ್ಳಾಗಡ್ಡಿ, ಸಿ.ಎಂ.ಶಿವಶರಣಪ್ಪ ಕಲಬುರ್ಗಿ, ಪಿ.ಎಂ. ಚಿಕ್ಕಮಠ, ಪ್ರಕಾಶ ಅಂದಾನಿಮಠ, ಶಂಕರ ಕುರ್ತಕೋಟಿ, ಅನಿಲ ಉಳ್ಳಾಗಡ್ಡಿ, ರಾಚಯ್ಯ ಮಠಪತಿ, ಎಂ.ಐ. ದೇಶನೂರ, ಶಿವಾನಂದ ನಾಗಠಾಣ, ಗಂಗಾಧರ ಹಿರೇಮಠ, ರಮೇಶಕುಮಾರ ಬುಡರಕಟ್ಟಿಮಠ, ಗಂಗಾಧರ ನಾಗಠಾಣ, ಮಹೇಶ ಸೂಡಿ, ಮಲ್ಲಿಕಾರ್ಜುನ ಕುರ್ತಕೋಟಿ, ನಾಗನಗೌಡ ನೀರಲಗಿ ವಿವಿಧ ಸೇವಾ ಕೈಂಕರ್ಯಗಳಿಗೆ ಸಾಕ್ಷಿಯಾದರು.
ನಿರಂತರ ದಾಸೋಹ: ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರಿಕ್ಕೆ ಬೈಲಹೊಂಗಲದ ವೀರಯ್ಯ ಮುಪ್ಪಯ್ಯನಮಠ ಹಾಗೂ ನರಗುಂದದ ಚೆನ್ನಪ್ಪ ನಾಗಠಾಣ ನೇತೃತ್ವದಲ್ಲಿ ನಿರಂತರ ದಾಸೋಹ ನೆರವೇರಿತು. ಬುಧವಾರ ರಾತ್ರಿ ಜರುಗಿದ ವಿಶೇಷ ಸಮಾರಂಭದಲ್ಲಿ ವಿವಿಧ ದಾನಿ ಗಣ್ಯರನ್ನು ಹಾಗೂ ಎಲ್ಲ ಸೇವಾಕರ್ತರನ್ನು ದೇವಾಲಯ ಟ್ರಸ್ಟ್ ವತಿಯಿಂದ ಗೌರವಿಸಲಾಯಿತು.