Advertisement

ರೌಡಿಶೀಟರ್‌, ಗೂಂಡಾಗಳ ಮೇಲೆ ಕಟ್ಟೆಚ್ಚರ

07:38 AM Mar 16, 2019 | |

ಹುಣಸೂರು: ರೌಡಿಶೀಟರ್‌ ಹಾಗೂ ಗೂಂಡಾಗಳ ಬಗ್ಗೆ ನಿಗಾ ಇಡಬೇಕು. ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗುವಂತಹವರನ್ನು ಗಡಿಪಾರಿಗೆ ಶಿಫಾರಸು ಮಾಡುವಂತೆ ದಕ್ಷಿಣ ವಯಲದ ಐಜಿಪಿ ಉಮೇಶ್‌ಕುಮಾರ್‌ ಆದೇಶಿಸಿದರು.

Advertisement

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ತಾಲೂಕಿನ ಅತೀಸೂಕ್ಷ್ಮ ಮತಗಟ್ಟೆಗಳಾದ ಹಳೇಬೀಡು, ಬನ್ನಿಕುಪ್ಪೆ ಹಾಗೂ ನಗರದ ಶಬ್ಬೀರ್‌ನಗರಕ್ಕೆ ಎಸ್‌ಪಿ ಅಮಿತ್‌ಸಿಂಗ್‌, ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ ಮತ್ತಿತರ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಮಾರ್ಶಿಸಿದ ನಂತರ ನಗರದ ಡಿವೈಎಸ್ಪಿ ಕಚೇರಿಯಲ್ಲಿ ಹುಣಸೂರು ಉಪವಿಭಾಗದ ಪಿರಿಯಾಪಟ್ಟಣ, ಎಚ್‌.ಡಿ.ಕೋಟೆ, ಹುಣಸೂರು ತಾಲೂಕುಗಳ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

ವಸ್ತುಸ್ಥಿತಿ ಅರಿಯಿರಿ: ಹುಣಸೂರು, ಎಚ್‌.ಡಿ. ಕೋಟೆ, ಪಿರಿಯಾಪಟ್ಟಣ, ನಾಗರಹೊಳೆ ಉದ್ಯಾನವನ, ಕೇರಳ ಗಡಿಯಂಚಿನಲ್ಲಿ ಹಾಗೂ ಹೆದ್ದಾರಿಗೆ ಹೊಂದಿಕೊಂಡಿದ್ದು, ನಕ್ಸಲೈಟ್‌ ಚಟುವಟಿಕೆ ಬಗ್ಗೆಯೂ ನಿಗಾ ಇಡಬೇಕು. ಚುನಾವಣೆ ಪೂರ್ವದಲ್ಲಿ ಹಾಗೂ ನಂತರದಲ್ಲಿ ಯಾವುದೇ ಅಹಿತಕರ ಘಟನೆ ಹಾಗೂ ಅಕ್ರಮಕ್ಕೆ ಅವಕಾಶ ನೀಡದಂತೆ ಕಟ್ಟೆಚ್ಚರವಹಿಸಬೇಕು.

ಪ್ರತಿ ಠಾಣೆ ವ್ಯಾಪ್ತಿಯ ರೌಡಿಶೀಟರ್‌, ಗೂಂಡಾಗಳ ಮೇಲೆ ನಿಗಾ ಇಡುವ ಜೊತೆಗೆ 107ರಡಿ ಪ್ರಕರಣ ದಾಖಲಿಸಬೇಕು. ಎಲ್ಲಾ ಹಳ್ಳಿಗಳಲ್ಲೂ ವಸ್ತುಸ್ಥಿತಿಯನ್ನು ಅರಿಯಬೇಕು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು. 

ಮದ್ಯ ನಿಷೇಧ: ಜಾಮೀನು ರಹಿತ ವಾರೆಂಟ್‌ ಪ್ರಕರಣದ ಆರೋಪಿಗಳ ಪತ್ತೆಗೆ ವಿಶೇಷ ಶ್ರಮ ಹಾಕಿ, ಅಂತವರ ಮನೆಗಳಿಗೆ ಭೇಟಿ ನೀಡಿ, ಸಿಗದಿದ್ದಲ್ಲಿ ಮತದಾನ ಮಾಡಲು ಬರುವ ವೇಳೆ ಅವರ ಮೇಲೆ ಗಮನವಿಡಿ. ನಗರ ಪ್ರದೇಶದಿಂದ ಹಳ್ಳಿಗಳಿಗೆ ಮದ್ಯ ಸರಬರಾಜು ಆಗದಂತೆ ನೋಡಿಕೊಳ್ಳಿ ಎಂದರು.

Advertisement

ಎಸ್‌ಪಿ.ಅಮಿತ್‌ ಸಿಂಗ್‌ ಮಾತನಾಡಿ, ಪ್ರತಿ ಗ್ರಾಮದ ರಾಜಕೀಯ ಸ್ಥಿತಿಯನ್ನು ಅರಿಯಬೇಕು. ಒಂದೇ ಕೋಮಿನ ಹೆಚ್ಚು ಜನಸಂಖ್ಯೆ ಇರುವ ಗ್ರಾಮದ ಮೇಲೆ ಹೆಚ್ಚಿನ ನಿಗಾವಹಿಸಬೇಕು. ಗ್ರಾಮಗಳಲ್ಲಿನ ಮುಖಂಡರ ಪಟ್ಟಿಮಾಡಿಕೊಳ್ಳಬೇಕು. ಆಗ್ಗಿಂದಾಗ್ಗೆ ಅಪ್‌ಡೇಟ್‌ ಮಾಡುತ್ತಿರಬೇಕು, ಒಟ್ಟಾರೆ ಚುನಾವಣೆ ಶಾಂತಿಯುತವಾಗಿ ಜರುಗಲು ಎಲ್ಲಾ ರೀತಿಯ ಕ್ರಮವಹಿಸಿ ಎಂದು ತಾಕೀತು ಮಾಡಿದರು.

ಇದೇ ವೇಳೆ ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ, ತಹಶೀಲ್ದಾರ್‌ ಬಸವರಾಜು, ಡಿವೈಎಸ್ಪಿ ಭಾಸ್ಕರ ರೈ, ವೃತ್ತ ನಿರೀಕ್ಷಕರಾದ ಶಿವಕುಮಾರ್‌, ಪ್ರದೀಪ್‌ ಸೇರಿದಂತೆ ವಿವಿಧ ಠಾಣೆಗಳು ಠಾಣಾಧಿಕಾರಿಗಳು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next