ಬೆಂಗಳೂರು: ಕೊಲೆ, ಕೊಲೆ ಯತ್ನ ಸೇರಿ ವಿವಿಧ ಅಪರಾಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ರೌಡಿಶೀಟರ್‌ನನ್ನು ಸಿಸಿಬಿಯ ಪೂರ್ವ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾಸರಹಳ್ಳಿ ನಿವಾಸಿ ಮಂಜುನಾಥ್ ಅಲಿಯಾಸ್ ಮಟ್ಕಾ ಮಂಜ(40) ಬಂಧಿತ.
ಆರೋಪಿ ಸಂಪಿಗೆಹಳ್ಳಿ ಠಾಣೆಯ ರೌಡಿ ಶೀಟರ್ ಆಗಿದ್ದು, ಈತನ ವಿರುದ್ಧ ಯಲ ಹಂಕ ಠಾಣೆಯಲ್ಲಿ ಕೊಲೆ ಯತ್ನ, ಸಂಪಿಗೆ ಹಳ್ಳಿ ಠಾಣೆಯಲ್ಲಿ ಕೊಲೆ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಪ್ರಕರಣವೊಂದರಲ್ಲಿ ಜಾಮೀನು ಪಡೆದುಕೊಂಡು ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿ ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹೀಗಾಗಿ ಕೋರ್ಟ್ ಈತನ ವಿರುದ್ಧ ವಾರೆಂಟ್ ಮತ್ತು ಪ್ರೊಕ್ಲಮೇಷನ್ ಜಾರಿಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಖಾಸಗಿ ಬಸ್ ಕ್ಲೀನರ್!: ಯಲಹಂಕ ರೌಡಿಶೀಟರ್ ಕ್ಯಾಟ್ ಮಂಜನ ಸಹಚರನಾಗಿರುವ ಮಟ್ಕಾ ಮಂಜು, ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿ ಕೊಂಡಿದ್ದ. ಮಾಗಡಿ-ಕುಣಿಗಲ್ ಮಾರ್ಗವಾಗಿ ಸಂಚರಿಸುವ ಖಾಸಗಿ ಬಸ್‌ನ ಕ್ಲೀನರ್ ಆಗಿದ್ದು, ಬಸ್ ನಲ್ಲಿಯೇ ಮಲಗುತ್ತಿದ್ದ. ಜತೆಗೆ ಮೊಬೈಲ್ ಬಳಸುತ್ತಿರಲಿಲ್ಲ. ಹೀಗಾಗಿ ಆರೋಪಿ ಸಿಕ್ಕಿರಲಿಲ್ಲ. ಆರು ತಿಂಗಳಿಂದ ಆರೋಪಿಯ ಚಲನವಲನಗಳ ಮೇಲೆ ನಿಗಾವಹಿಸಿ ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.