ಬೆಂಗಳೂರು: ಎರಡು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿ ಸತ್ತು ಹೋಗಿರುವುದಾಗಿ ಎಲ್ಲರನ್ನೂ ನಂಬಿಸಿ 2 ವರ್ಷಗಳಿಂದ ತಲೆ ಮರೆಸಿಕೊಂಡು ಊರೂರು ಸುತ್ತುತ್ತಿದ್ದ ರೌಡಿ ಕೊನೆಗೂ ಸಿಸಿಬಿ ಬಲೆಗೆ ಬಿದ್ದಿದ್ದಾನೆ.
ವೈಟ್ ಫೀಲ್ಡ್ ಪೊಲೀ ಸ್ ಠಾಣೆಯ ರೌಡಿ ಶೀಟರ್ ಮಲ್ಲಿಕಾರ್ಜುನ ಅಲಿ ಯಾಸ್ ಮಲ್ಲಿ ಬಂಧಿತ.
ಈತ ರಾಜಾನುಕುಂಟೆ ಠಾಣೆಯ ಕೊಲೆ ಪ್ರಕರಣ ಹಾಗೂ ಕಾಡು ಬೀಸನಹಳ್ಳಿ ಚಾಲಕ ಸೋಮನ ಕೊಲೆ ಪ್ರಕರಣದ ಆರೋಪಿಯಾಗಿದ್ದ. ಈ ಪ್ರಕರಣಗಳಲ್ಲಿ ಪೊಲೀಸರ ಬಲೆಗೆ ಬೀಳದಂತೆ ಮುನ್ನೆಚ್ಚರಿಕೆ ವಹಿಸಿದ್ದ. ಆದರೂ, ಒಂದಲ್ಲ ಒಂದು ದಿನ ಪೊಲೀಸರು ಬಂಧಿಸುತ್ತಾರೆ ಎಂದು ಆತನಿಗೆ ಗೊತ್ತಿತ್ತು.
ಹೀಗಾಗಿ ತಾನು ಸತ್ತು ಹೋಗಿರುವುದಾಗಿ ನಕಲಿ ದಾಖಲೆ ತಯಾರಿಸಿ ಕುಟುಂಬಸ್ಥರಿಗೆ ಕೊಟ್ಟು ನಡೆದ ಘಟನೆ ವಿವರಿಸಿ ಪೊಲೀಸರು ಹುಡುಕಿಕೊಂಡು ಬಂದರೆ ಸತ್ತು ಹೋಗಿರುವುದಾಗಿ ಹೇಳುವಂತೆ ಸೂಚಿಸಿದ್ದ. ಅಲ್ಲದೇ, ಎಲ್ಲೆಡೆ ತಾನು ಸತ್ತು ಹೋಗಿರುವ ಸುದ್ದಿ ಹಬ್ಬಿಸಿದ್ದ. ಕಳೆದ ಎರಡು ವರ್ಷಗಳಿಂದ ಈತ ಪೊಲೀಸರ ಕಣ್ಣು ತಪ್ಪಿಸಿಕೊಂಡು ಊರೂರು ತಿರುಗಾಡುತ್ತಿದ್ದ. ಆತನ ಮನೆ ಬಳಿ ಪೊಲೀಸರು ವಿಚಾರಿಸಿದಾಗ ಮಲ್ಲಿಕಾರ್ಜುನ್ ಸತ್ತು ಹೋಗಿದ್ದಾನೆ ಎಂದು ಕುಟುಂಬದವರು ಹೇಳಿದ್ದರು. ಇನ್ನು ಸಿಸಿಬಿ ಪೊಲಿಸರು ಮಲ್ಲಿಕಾರ್ಜುನನ ಗೆಳೆಯರು, ಪರಿಚಿತರನ್ನು ವಿಚಾರಿಸಿದಾಗ ಅವರೂ ಸಹ ಆತ ಮೃತಪಟ್ಟಿದ್ದಾನೆ ಎಂದಿದ್ದರು. ಆದರೆ, ಆತನ ಮೃತಪಟ್ಟಿರುವುದಕ್ಕೆ ಸಂಬಂಧಿಸಿದ ಸೂಕ್ತ ಬಲವಾದ ದಾಖಲೆಗಳು, ಚಿತ್ರಗಳು ಕುಟುಂಬಸ್ಥರು ಹಾಗೂ ಸ್ನೇಹಿತರ ಬಳಿ ಇರಲಿಲ್ಲ. ಹೀಗಾಗಿ ಈ ಬಗ್ಗೆ ಅನುಮಾನಗೊಂಡ ಪೊಲೀಸರು, ಇತ್ತೀಚೆಗೆ ಮಲ್ಲಿಕಾರ್ಜುನ್‌ಗೆ ಇನ್ನಷ್ಟು ಶೋಧ ನಡೆಸಿದಾಗ ಆತ ಅಮೃತಳ್ಳಿ ಬಳಿ ಸುತ್ತಾಡುತ್ತಿರುವುದು ಗೊತ್ತಾಗಿತ್ತು. ಕೂಡಲೇ ಆತನನ್ನು ಲಾಕ್ ಮಾಡಿ ಜೈಲಿಗಟ್ಟಿದ್ದಾರೆ.