ಬೆಂಗಳೂರು: ನಗರದಲ್ಲಿ ಮತ್ತೆ ಪೊಲೀಸರ ಗುಂಡಿನ ಸದ್ದು ಕೇಳಿ ಬಂದಿದ್ದು, ಪೊಲೀಸರ ಮೇಲೆಯೇ ಕಲ್ಲಿನಿಂದ ಹಲ್ಲೆ ನಡೆಸಿದ ರೌಡಿಶೀಟರ್ ಮೇಲೆ ಕೆಂಗೇರಿ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಜ್ಞಾನಭಾರತಿ ನಿವಾಸಿ ರೌಡಿಶೀಟರ್ ಅರುಣ್ (28) ನನ್ನು ಬಂಧಿತ, ಆರೋಪಿ ಎಡಗಾಲಿಗೆ ಗುಂಡೇಟು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿಯ ಹಲ್ಲೆಯಿಂದ ಪೇದೆ ಪ್ರಕಾಶ್ ತಲೆಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗೆ ದಾಖಲಾಗಿದ್ದಾರೆ.
ಹತ್ಯೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅರುಣ್ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ಅರುಣ ಸೇರಿ ಆರೋಪಿಗಳು ಕನಕಪುರ ರಸ್ತೆಯ ಜರಗನಹಳ್ಳಿ ಬಳಿಯ ಕ್ಲಾಸಿಕ್ ಕಂಫರ್ಟ್ ಲಾಡ್ಜ್ನಲ್ಲಿ ಅವಿತುಕೊಂಡಿರುವ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದರು. ಮಂಗಳವಾರ ಮುಂಜಾನೆ ಪಿಎಸ್‌ಐ ಮಲ್ಲಿಕಾರ್ಜುನ್ ನೇತೃತ್ವದ ತಂಡ ದಾಳಿ ನಡೆಸಿ ಅರುಣ್, ಸಹೋದರ ಕಿರಣ್ ಸ್ನೇಹಿತರಾದ ಮಹೇಶ್, ದಿಲೀಪ್ ಅವರನ್ನು ಬಂಧಿಸಲಾಯಿತು.
ಮತ್ತೂಬ್ಬ ಆರೋಪಿ ಕೆಂಚ ಎಂಬಾತನನ್ನೂ ಬಂಧಿಸಲು ಪಿಎಸ್‌ಐ ಮಲ್ಲಿಕಾರ್ಜುನ್ ಮತ್ತು ಪೇದೆ ಪ್ರಕಾಶ್ ಹಾಗೂ ಮುಖ್ಯ ಪೇದೆ ರವಿ ಅರುಣ್‌ನನ್ನು ಕೆಂಗೇರಿ ಠಾಣಾ ವ್ಯಾಪ್ತಿಯ ವಿಶ್ವೇಶ್ವರಯ್ಯ ಲೇಔಟ್ ಮಾರ್ಗದಲ್ಲಿ ಕರೆದೊಯ್ದುತ್ತಿದ್ದರು.
ಈ ವೇಳೆ ಅರುಣ್ ಜೀಪ್‌ನ ಹಿಂದಿನ ಬಾಗಿಲು ತೆರೆದು ಓಡಿ ಹೋಗಲು ಯತ್ನಿಸಿದ್ದಾನೆ. ಆಗ ಪಿಎಸ್‌ಐ ಮಲ್ಲಿಕಾರ್ಜುನ್ ಹಾಗೂ ಪೇದೆ ಪ್ರಕಾಶ್ ನಿಲ್ಲುವಂತೆ ಸೂಚಿಸಿದರೂ ಆರೋಪಿ ತಪ್ಪಿಸಿಕೊಳ್ಳಲು ಮುಂದಾಗಿದಲ್ಲದೆ, ಪೇದೆ ಪ್ರಕಾಶ್ ಮೇಲೆ ಕಲ್ಲಿನಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದಾನೆ.
ಈ ವೇಳೆ ಪಿಎಸ್‌ಐ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆರೋಪಿ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗೆ ಎಡಗಾಲಿಗೆ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಅರುಣ್ ವಿರುದ್ಧ ಜೆ.ಪಿ.ನಗರ, ತಾವರೆಕೆರೆ, ಜ್ಞಾನಭಾರತಿ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ ಹಾಗೂ ದರೋಡೆ ಸೇರಿ ಒಟ್ಟು ಎಂಟು ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಜೆ.ಪಿ.ನಗರ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿದೆ ಎಂದು ಪೊಲೀಸರು ಹೇಳಿದರು.