ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಯಾಗಿ ಹೊರ ಬಂದ ಕೆಲವೇ ಹೊತ್ತಿನಲ್ಲಿ ರೌಡಿಶೀಟರ್‌ನನ್ನು ಮಾರಕಾಸ್ತ್ರಗಳಿಂದ ಬರ್ಬರ ವಾಗಿ ಹತ್ಯೆ ಮಾಡಲಾಗಿದೆ. ಸಿದ್ದಾಪುರ ಮಹೇಶ್ ಹತ್ಯೆಯಾದ ರೌಡಿಶೀಟರ್.
ಮಹೇಶ್ ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಶುಕ್ರವಾರ ಜೈಲಿನಿಂದ ಬಿಡುಗಡೆಯಾಗಿ ಸ್ನೇಹಿತರ ಜತೆಗೆ ಜೈಲಿನಿಂದ ಕಾರಿನಲ್ಲಿ ಹೊರಟಿದ್ದ. ಮಾರ್ಗಮಧ್ಯೆ ಹೊಸ ರೋಡ್ ಜಂಕ್ಷನ್ ಬಳಿ ಎರಡು ಬೈಕ್‌ಗಳಲ್ಲಿ ಬಂದಿದ್ದ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ಮಹೇಶ್ ಮೇಲೆ ಮಾರಕಾಸ್ತ್ರ ಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಕುಖ್ಯಾತ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ವಿರೋಧಿ ಗ್ಯಾಂಗ್‌ನಲ್ಲಿ ಮಹೇಶ್ ಗುರುತಿಸಿ ಕೊಂಡಿದ್ದ. ವಿಲ್ಸನ್ ಗಾರ್ಡನ್ ನಾಗನ ಸಹಚರರಿಂದ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸಿಗ್ನಲ್ ಬೀಳುತ್ತಿದ್ದಂತೆ ಅಟ್ಯಾಕ್:
ಬನಶಂಕರಿಯಲ್ಲಿ ಮದನ್ ಎಂಬುವವನನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಮಹೇಶ್ ಬಂಧನಕ್ಕೊಳ ಗಾಗಿದ್ದ. ಹತ್ಯೆಯಾದ ಅರ್ಧಗಂಟೆಯ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರು- ಹೊಸೂರು ಮುಖ್ಯರಸ್ತೆಯ ಹೊಸರೋಡ್‌ನಲ್ಲಿ ಸ್ನೇಹಿತರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ. ಹೊಸರೋಡ್ ಬಳಿ ಸಿಗ್ನಲ್ ಬೀಳುತ್ತಿದ್ದಂತೆ ಮಹೇಶ್ ತೆರಳುತ್ತಿದ್ದ ಕಾರು ನಿಲುಗಡೆಯಾಗಿತ್ತು. ಇದೇ ಹೊತ್ತಿಗೆ ಕಾಯುತ್ತಿದ್ದ ದುಷ್ಕರ್ಮಿಗಳ ಗ್ಯಾಂಗ್ ಏಕಾಏಕಿ ಅಟ್ಯಾಕ್ ಮಾಡಿದೆ. ಆ ವೇಳೆ ಕಾರಿನಿಂದ ಇಳಿದು ಮಹೇಶ್ ಪರಾರಿಯಾಗಲು ಯತ್ನಿಸಿದರೂ ಬಿಡದ ಆರೋಪಿಗಳು ಆತನನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಹತ್ಯೆ ಮಾಡಿದ್ದಾರೆ.