Advertisement

ನವೀನ್‌ ಡಿ’ಸೋಜಾ ಕೊಲೆ ಆರೋಪಿಗಳ ಸೆರೆ

06:10 AM Mar 10, 2018 | |

ಉಡುಪಿ: ಪಡುಬಿದ್ರಿ  ಠಾಣಾ ವ್ಯಾಪ್ತಿಯ ಸಾಂತೂರು ಗ್ರಾಮದ ಕಾಂಜರಕಟ್ಟೆಯಲ್ಲಿ ಫೆ.28ರ ರಾತ್ರಿ ಬಾರ್‌ ಎದುರು ನಡೆದಿರುವ ರೌಡಿಶೀಟರ್‌ ನವೀನ್‌ ಡಿ’ ಸೋಜಾ  ಕೊಲೆ ಪ್ರಕರಣದ ಎಲ್ಲ  ಐವರು ಆರೋಪಿಗಳನ್ನು  ಬಂಧಿಸಲಾಗಿದೆ.

Advertisement

ಇನ್ನಾದ ಕಿಶನ್‌ ಹೆಗ್ಡೆ (32), ಉಡುಪಿ ಗುಂಡಿಬೈಲಿನ ರಮೇಶ ಪೂಜಾರಿ (43), ಪಲಿಮಾರಿನ ಮಹೇಶ್‌ ಗಾಣಿಗ (31), ಪಡುಬಿದ್ರಿ ನಡಾಲಿನ ಮೋಹನಚಂದ್ರ ವಿ. ಶೆಟ್ಟಿ (23) ಮತ್ತು ಉಪ್ಪೂರಿನ ನಾಗರಾಜ ಪೂಜಾರಿ (18) ಬಂಧಿತರು. ಈ ಪೈಕಿ ಕಿಶನ್‌ ಹೆಗ್ಡೆ, ರಮೇಶ್‌ ಪೂಜಾರಿ ಮತ್ತು ಮೋಹನಚಂದ್ರ ಶೆಟ್ಟಿ ರೌಡಿಶೀಟರ್‌ಗಳಾಗಿದ್ದಾರೆ ಎಂದು ಉಡುಪಿ ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಹಣಕಾಸು ವಿವಾದ ಕಾರಣ
ನವೀನ್‌   ಮತ್ತು ಕಿಶನ್‌ ಹೆಗ್ಡೆ ನಡುವಿನ ಹಣಕಾಸು ವಿವಾದವೇ  ಕೊಲೆಗೆ ಕಾರಣ.  ಕಿಶನ್‌ ಹೆಗ್ಡೆಗೆ  ನವೀನ್‌ 4 ಲ.ರೂ. ಸಾಲ ನೀಡಿದ್ದ.  ಅದನ್ನು ಹಿಂದಿರುಗಿಸದ ಕಾರಣ   ಇವರೀರ್ವರ ನಡುವೆ ವೈಷಮ್ಯವಿತ್ತು. ಜತೆಗೆ ನವೀನ್‌  ಮತ್ತು ಮಹೇಶ್‌ ಗಾಣಿಗ ನಡುವೆಯೂ ದ್ವೇಷವಿದ್ದು, ಆಗಾಗ್ಗೆ ಗಲಾಟೆ ನಡೆದಿದ್ದವು. 

ಮೊದಲು ಸಿಕ್ಕಿದ್ದು ಮಹೇಶ್‌
ನವೀನ್‌   ಯಾರೊಂದಿಗೆ ಹೆಚ್ಚು ದ್ವೇಷ ಹೊಂದಿದ್ದ ಎಂಬ ಮಾಹಿತಿ ಕಲೆ ಹಾಕಿ ಸಾಕಷ್ಟು ತನಿಖೆ ನಡೆಸಿದಾಗ ಮಹೇಶ್‌ ಗಾಣಿಗನ ಹೆಸರು ಬಂತು. ಮಾ.8ರಂದು ಆತನನ್ನು ಮೂಲ್ಕಿ ಬಪ್ಪನಾಡು ಬಳಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು,  ಆತ  ನೀಡಿದ ಮಾಹಿತಿಯಂತೆ  ಉಳಿದವರನ್ನು ಮಾ.9ರಂದು ಪುಣೆ ಯಲ್ಲಿ ಬಂಧಿಸಲಾಯಿತು. 

ಮಹೇಶ್‌ ಗಾಣಿಗ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೊಲೆಯತ್ನ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಗಳು ದಾಖಲಾಗಿವೆ. ಈತ ಬಸ್‌ ಕಂಡಕ್ಟರ್‌.  ನಾಗರಾಜ ಪೂಜಾರಿ ಮೇಲೆ ಈ ಹಿಂದೆ ಯಾವುದೇ ಪ್ರಕರಣಗಳು ದಾಖ ಲಾಗಿಲ್ಲ. ಈತ ಹೊಟೇಲ್‌ ಕಾರ್ಮಿಕ ಎಂದು ಎಸ್‌ಪಿ ವಿವರಿಸಿದರು.

Advertisement

ಸಿಸಿಟಿವಿಯಿಂದ ಕಾರು ಪತ್ತೆ
ಕೊಲೆ ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲಿದ್ದ ಸಿಸಿಟಿವಿ ಸಹಾಯದಿಂದ ಕಾರನ್ನು ಪತ್ತೆ ಹಚ್ಚಲಾಗಿತ್ತು ಎಂದು ಎಸ್‌ಪಿ ತಿಳಿಸಿದರು. 

ಕೊಳಲಗಿರಿಯಿಂದ ವಾಪಸ್‌
ಕೊಲೆ  ಬಳಿಕ ಆರೋಪಿಗಳು ಕಾರಿನಲ್ಲಿ  ಪರಾರಿಯಾಗಿದ್ದರು. ಬೆಳ್ಮಣ್‌, ಸೂಡ ಮಾರ್ಗವಾಗಿ ಆತ್ರಾಡಿ, ಕೊಳಲಗಿರಿವರೆಗೆ ಕಾರು ಚಲಾಯಿಸಿಕೊಂಡು ಹೋಗಿದ್ದ ಮಹೇಶ್‌ ಅಲ್ಲಿಂದ ವಾಪಸ್‌ ಬಂದಿದ್ದ. ಅನಂತರ ಕಿಶನ್‌ ಹೆಗ್ಡೆ ಮುಂಬಯಿ ಕಡೆಗೆ ಚಲಾಯಿಸಿಕೊಂಡು ಹೋಗಿದ್ದ. ಕೃತ್ಯಕ್ಕೆ ಬಳಸಿದ 4 ತಲವಾರುಗಳು, ಮಾರುತಿ ಸ್ವಿಫ್ಟ್ ಕಾರು ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ವಿವರಿಸಿದರು.
 
ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ ಮತ್ತು ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಕುಮಾರಚಂದ್ರ  ಮಾರ್ಗದರ್ಶನದಂತೆ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್‌ ಅಧೀಕ್ಷಕ ಋಷಿಕೇಷ್‌ ಸೋನಾವನೆ  ಸೂಚನೆಯಂತೆ ಕಾಪು ಸಿಪಿಐ ವಿ.ಎಸ್‌.ಹಾಲಮೂರ್ತಿ ರಾವ್‌, ಡಿಸಿಐಬಿ ಇನ್‌ಸ್ಪೆಕ್ಟರ್‌ ಸಂಪತ್‌ ಕುಮಾರ್‌, ಉಪನಿರೀಕ್ಷಕ ಸತೀಶ್‌ ಎಂ.ಪಿ., ಎಎಸ್‌ಐ ರವಿ, ಸಿಬಂದಿ ವರ್ಗದ ಸುರೇಶ, ಸಂತೋಷ್‌, ರಾಮು ಹೆಗ್ಡೆ, ಕಾಪು ವೃತ್ತ ನಿರೀಕ್ಷಕರ ತಂಡದ  ವಿಲ್ಫೆ†ಡ್‌ ಡಿ’ಸೋಜಾ, ರವಿ ಕುಮಾರ್‌, ಸುಧಾಕರ, ರಾಜೇಶ್‌, ಪ್ರವೀಣ್‌, ಸಂದೀಪ್‌, ಶರಣಪ್ಪ, ಹರೀಶ್‌ ಬಾಬು, ಜಿಲ್ಲಾ ಪೊಲೀಸ್‌ ಕಚೇರಿಯ ಶಿವಾನಂದ, ನಿತಿನ್‌ ರಾವ್‌, ದಿನೇಶ ಮತ್ತು ಚಾಲಕ ರಾಘವೇಂದ್ರ ಜೋಗಿ, ಜಗದೀಶ್‌ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
 
8 ದಿನಗಳಲ್ಲಿ ಪ್ರಕರಣವನ್ನು  ಭೇದಿಸಿದ  ತಂಡದ ಕಾರ್ಯಾ ಚರಣೆಯನ್ನು ಎಸ್‌ಪಿ  ಅವರು ಶ್ಲಾ ಸಿದರು. 

ಕಿಶನ್‌  ವಾಂಟೆಡ್‌ ಆರೋಪಿ
ಕಿಶನ್‌ ಹೆಗ್ಡೆ ಪಡುಬಿದ್ರಿ  ಠಾಣೆಯ ರೌಡಿಶೀಟರ್‌ ಆಗಿದ್ದಾನೆ. ಪಡುಬಿದ್ರಿ ಠಾಣೆಯಲ್ಲಿ ಕೊಲೆಯತ್ನ, ಮಣಿಪಾಲದಲ್ಲಿ ಶಸ್ತ್ರಾಸ್ತ್ರ ಕಾಯಿದೆ ಪ್ರಕರಣ ಮತ್ತು ಬೆಂಗಳೂರಿನ ಬಾಣಸವಾಡಿ ಠಾಣೆಯಲ್ಲಿ ಕೊಲೆಯತ್ನ ಪ್ರಕರಣದ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದ. ಈತ ಪುಣೆಯಲ್ಲಿ ಹೊಟೇಲ್‌ ಉದ್ಯಮ ನಡೆಸುತ್ತಿದ್ದ. 

ರಮೇಶ್‌  ದರೋಡೆಕೋರ 
ರಮೇಶ್‌ ಪೂಜಾರಿ ಶಿರ್ವ, ಮಣಿಪಾಲ ಮತ್ತು ಉಡುಪಿ ನಗರ ಠಾಣೆಯಲ್ಲಿ ರೌಡಿಶೀಟರ್‌. ಈತನ ವಿರುದ್ಧ ಶಿರ್ವ, ಕಾಪು, ಬ್ರಹ್ಮಾವರ, ಮಣಿಪಾಲ ಮತ್ತು ಉಡುಪಿ ನಗರ ಠಾಣೆಯಲ್ಲಿ ಒಟ್ಟು 9 ದರೋಡೆ ಪ್ರಕರಣಗಳು, ಕಾರ್ಕಳ ಗ್ರಾಮಾಂತರದಲ್ಲಿ ಹಲ್ಲೆ ಹೀಗೆ ಒಟ್ಟು 17 ಪ್ರಕರಣಗಳಿವೆ. 

ಮೋಹನಚಂದ್ರ ಶೆಟ್ಟಿ ರೌಡಿ
ಮೋಹನಚಂದ್ರ ಶೆಟ್ಟಿ ಪಡುಬಿದ್ರಿ ಠಾಣೆಯ ರೌಡಿ ಶೀಟರ್‌. ಈತನ ವಿರುದ್ಧ ದೊಂಬಿ ಮತ್ತು ಹಲ್ಲೆ ಪ್ರಕರಣಗಳಿವೆ. 

ಕೊಲೆಯಾಗುವ  ಭೀತಿಯಿಂದ ಹತ್ಯೆ!
ಕಿಶನ್‌ ಹೆಗ್ಡೆ ಮತ್ತು ಮಹೇಶ್‌ ಗಾಣಿಗರನ್ನು ಕೊಲ್ಲುವುದಾಗಿಯೂ ನವೀನ್‌ ಹೇಳಿದ್ದ. ಈ ಹಿನ್ನೆಲೆಯಲ್ಲಿ ಕಿಶನ್‌  ಮತ್ತು ಮಹೇಶ್‌  ಸೇರಿ  ನವೀನ್‌ ಕೊಲೆಗೆ ಸಂಚು ರೂಪಿಸಿದರು. ಇದಕ್ಕಾಗಿ ರಮೇಶ್‌ ಪೂಜಾರಿ, ಮೋಹನಚಂದ್ರ ಶೆಟ್ಟಿ ಮತ್ತು ನಾಗರಾಜನನ್ನು ಕರೆಸಿ ಅವರಿಗೆ 2 ಲ.ರೂ.  ಮತ್ತು ಪುಣೆಯಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದರು. 
ಯೋಜನೆಯಂತೆ  ಐವರು ಕಿಶನ್‌ಹೆಗ್ಡೆಯ ಕಾರಿನಲ್ಲಿ ತಲವಾರುಗಳೊಂದಿಗೆ ಹೊರಟು ಗ್ಲೋರಿಯಾ ಬಾರ್‌ ಬಳಿ ಕಾದು ಕುಳಿತರು. ನವೀನ್‌ ಬಾರ್‌ನಿಂದ ಹೊರ ಬಂದು ಮಿತ್ರರಾದ ಗಿರೀಶ್‌ ಮತ್ತು ನಾಗೇಶ್‌ ಜತೆ ಬೈಕ್‌ನಲ್ಲಿ ಹೊರಟಾಗ ಮಹೇಶ್‌ ಗಾಣಿಗ ಬೈಕ್‌ಗೆ ಕಾರನ್ನು ಢಿಕ್ಕಿ ಹೊಡೆಸಿದ. ಕೆಳಕ್ಕೆ ಬಿದ್ದ ನವೀನ್‌  ಮೇಲೆ ಕಿಶನ್‌ ಹೆಗ್ಡೆ, ರಮೇಶ್‌ ಪೂಜಾರಿ, ಮೋಹನಚಂದ್ರ ಶೆಟ್ಟಿ ಮತ್ತು ನಾಗರಾಜ ತಲವಾರಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಎಸ್‌ಪಿ ವಿವರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next