ಬೆಂಗಳೂರು: ಹಳೆ ವೈಷಮ್ಯಕ್ಕೆ ರೌಡಿಶೀಟರ್ ಭರತ್ ಅಲಿಯಾಸ್ ಕೋಗಿಲು ಭರತ್ (28) ಎಂಬಾತನನ್ನು ದುಷ್ಕರ್ಮಿಗಳ ಗುಂಪು ಕೊಲೆಮಾಡಿರುವ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಸಂಪಿಗೆಹಳ್ಳಿ ಪೊಲೀಸರು ತನಿಖೆ ನಡೆಸಿದ್ದು, ಹಳೆ ವೈಷಮ್ಯಕ್ಕೆ ಎದುರಾಳಿ ಗುಂಪು ಭರತ್‌ನನ್ನು ಹತ್ಯೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದ್ದು ಆರೋಪಿಗಳ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಲಹಂಕ ಠಾಣೆಯ ರೌಡಿಶೀಟರ್ ಆಗಿರುವ ಭರತ್ ಸೋಮವಾರ ರಾತ್ರಿ ತನ್ನ ಸ್ನೇಹಿತ ನರಸಿಂಹ ಎಂಬಾತನ ಜತೆ ಅಗ್ರಹಾರ ಲೇಔಟ್‌ನ ಚೌಡೇಶ್ವರಿಗೆ ಬಾರ್‌ಗೆ ತೆರಳಿದ್ದು, ಬಾರ್ ಮುಂಭಾಗ ಇಬ್ಬರೂ ಮದ್ಯಸೇವನೆ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಗುಂಪು ಏಕಾಏಕಿ ಇಬ್ಬರ ಮೇಲೂ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ.
ಪ್ರಾಣಭೀತಿಯಿಂದ ನರಸಿಂಹ ಹಾಗೂ ಭರತ್ ಇಬ್ಬರೂ ತಪ್ಪಿಸಿಕೊಳ್ಳಲು ಕೆಲ ದೂರ ಓಡಿದ್ದಾರೆ. ಆದರೆ, ಭರತ್‌ನನ್ನು ಬೆನ್ನಟ್ಟಿದ್ದ ಗುಂಪು ಆತನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದೆ. ದಾಳಿಯಿಂದ ತಪ್ಪಿಸಿಕೊಂಡಿದ್ದ ನರಸಿಂಹ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಕೂಡಲೇ ಸ್ಥಳಕ್ಕೆ ತೆರಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಭರತ್‌ನನ್ನು ಆಸ್ಪತ್ರೆಗೆ ದಾಖಲಿಸಿದೆ. ಆದರೆ, ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಭರತ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.