ಪಡುಬಿದ್ರಿ: ರೌಡಿಶೀಟರ್ ನವೀನ್ ಡಿ’ ಸೋಜಾ(38)ನ ಮೇಲೆ ಬುಧವಾರ ರಾತ್ರಿ ತಂಡವೊಂದು ತಲವಾರುಗಳಿಂದ ದಾಳಿ ನಡೆಸಿ ಕೊಚ್ಚಿ ಕೊಲೆಗೈದಿದೆ. ಪಡುಬಿದ್ರಿ-ಕಾರ್ಕಳ ಹೆದ್ದಾರಿಯ ಕಾಂಜರಕಟ್ಟೆ ಸಮೀಪದ ಬಾರ್ ಎದುರು ಈ ಕೃತ್ಯ ನಡೆದಿದೆ. ನವೀನ್ ತನ್ನ ಇತರ ಇಬ್ಬರು ಗೆಳೆಯರೊಂದಿಗೆ ಬಾರ್‌ಗೆ ಹೋಗಿ ಕುಡಿದು ರಾತ್ರಿ 10 ಗಂಟೆ ಸುಮಾರಿಗೆ ಹೊರಗೆ ಬಂದು ಬೈಕ್ ಏರಲು ತಯಾರಿ ನಡೆಸುತ್ತಿದ್ದಾಗ ಕಾದು ಕುಳಿತಿದ್ದ ತಂಡ ಏಕಾಏಕಿ ದಾಳಿ ನಡೆಸಿದೆ. ಆಗ ಜತೆಗಿದ್ದ ಇಬ್ಬರು ಓಡಿ ತಪ್ಪಿಸಿಕೊಂಡಿದ್ದಾರೆ.
ಇದೊಂದು ಪೂರ್ವ ದ್ವೇಷದ ಮತ್ತು ಪೂರ್ವ ಯೋಜಿತ ಕೊಲೆ ಎಂಬಂ ತಿದ್ದು, ನವೀನ್‌ನ ಚಲನವಲನದ ಮೇಲೆ ನಿಗಾ ಇರಿಸಿ ಕೃತ್ಯ ಎಸಗಲಾ ಗಿದೆ. ತಂಡದಲ್ಲಿ ಮೂರರಿಂದ ನಾಲ್ಕು ಮಂದಿ ಇದ್ದ ಬಗ್ಗೆ ಶಂಕೆ ಇದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬ. ನಿಂಬರಗಿ ತಿಳಿಸಿದ್ದಾರೆ.
ಆರೋಪಿಗಳು ಯದ್ವಾತದ್ವಾ ಕಡಿದಿದ್ದು, ನವೀನ್ ಸ್ಥಳದಲ್ಲಿಯೇ ಸಾವಿಗೀಡಾದ. ಆತನ ಕಿವಿಯೊಂದು ತುಂಡಾಗಿ ಸ್ಥಳದಲ್ಲಿ ಬಿದ್ದಿತ್ತು.
ರಾಜಕೀಯ ಪಕ್ಷವೊಂದರ ನಾಯಕ ಸಹಿತ ಹಲವು ಮಂದಿಗೆ ಹಲ್ಲೆ ನಡೆಸಿದ ಪ್ರಕರಣಗಳು ಈತನ ಮೇಲಿವೆ. ಕಾರ್ಕಳ, ಪಡುಬಿದ್ರಿ ಮಾತ್ರವಲ್ಲದೆ ಬೆಂಗಳೂರಿನಲ್ಲಿಯೂ ಈತನ ವಿರುದ್ಧ ಕೇಸು ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಿಂದೆ ಪಡುಬಿದ್ರಿಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕೆಲವು ಸಮಯ ಬಾರ್‌ನಲ್ಲಿಯೂ ನೌಕರಿ ನಡೆಸಿದ್ದ. ಕಳೆದ ವರ್ಷ ನಡೆದಿದ್ದ ಫಿಲಿಪ್ ಕೊಲೆ ಪ್ರಕರಣದಲ್ಲೂ ಈ ಓರ್ವ ಆರೋಪಿಯಾಗಿದ್ದ. ಬಾರ್‌ನಲ್ಲಿ ಕುಡಿದು ಆಗಾಗ್ಗೆ ಮಿತ್ರರೊಂದಿಗೂ ಗಲಾಟೆ ನಡೆಸುತ್ತಿದ್ದು, ಅವರೊಳಗೂ ವೈರತ್ವ ಕಟ್ಟಿಕೊಂಡಿದ್ದ ಎಂದು ತಿಳಿದು ಬಂದಿದೆ.
ನಿರ್ಜನ ಪ್ರದೇಶ
ಈ ಹಿಂದೆ ಹೆದ್ದಾರಿ ಬದಿಯಲ್ಲಿಯೇ ಇದ್ದ ಬಾರ್ ಸರಕಾರದ ಹೊಸ ಕಾನೂನಿನ ಬಳಿಕ ಸ್ವಲ್ಪ ದೂರಕ್ಕೆ ಇತ್ತೀಚೆಗೆ ಸ್ಥಳಾಂತರಗೊಂಡಿತ್ತು. ಈ ಪರಿಸರದಲ್ಲಿ ಜನರ ಓಡಾಟ ವಿರಳವಾಗಿದೆ.
ನವೀನ್ ಮೃತದೇಹವನ್ನು ಮಣಿಪಾಲ ಶವಾಗಾರಕ್ಕೆ ಸ್ಥಳಾಂ ತರಿಸಲಾಗಿದೆ.
ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ, ಡಿಸಿಐಬಿ ಇನ್‌ಸ್ಪೆಕ್ಟರ್ ಸಂಪತ್ ಕುಮಾರ್, ಕಾಪು ವೃತ್ತ ನಿರೀಕ್ಷಕ ಹಾಲಮೂರ್ತಿ ರಾವ್, ಪಡುಬಿದ್ರಿ ಪಿಎಸ್‌ಐ ಸತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.