Advertisement

ಕುಟಿಲ ಪ್ರೇಮಕ್ಕೆ ರೌಡಿ ಬಲಿ

06:46 AM Mar 13, 2019 | |

ಬೆಂಗಳೂರು: ಕುಖ್ಯಾತ ರೌಡಿ ಲಕ್ಷ್ಮಣನ ಹತ್ಯೆಗೆ ಪ್ರಿಯಕರನ ಜತೆ ಸೇರಿಕೊಂಡು ಪರಿಚಯಸ್ಥ ಯುವತಿಯೊಬ್ಬಳು ಲಂಡನ್‌ನಲ್ಲೇ ಕುಳಿತು ಸಂಚು ರೂಪಿಸಿದ್ದಳು ಎಂಬುದು ಸಿಸಿಬಿ ಪೊಲೀಸರ ತನಿಖೆಯಿಂದ ಸಾಬೀತಾಗಿದ್ದು, ಕೊಲೆಗೆ ಹಳೇ ದ್ವೇಷ ಹಾಗೂ ಪ್ರೀತಿಗೆ ನಿರಾಕರಣೆಯೇ ಕಾರಣ ಎಂದು ತಿಳಿದು ಬಂದಿದೆ.

Advertisement

ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದ ರೌಡಿಶೀಟರ್‌ ಹೇಮಂತ್‌ ಅಲಿಯಾಸ್‌ ಹೇಮಿಯನ್ನು ಗುಂಡು ಹಾರಿಸಿ ಬಂಧಿಸಿರುವ ಸಿಸಿಬಿ ಪೊಲೀಸರು, ಭಾಗಿಯಾಗಿದ್ದ ಯುವತಿ ಸೇರಿ ಏಳು ಮಂದಿಯನ್ನು ಮಂಗಳವಾರ ಬಂಧಿಸಿದ್ದಾರೆ.

ಮರಿಯಪ್ಪನ ಪಾಳ್ಯದ ಜಗಜ್ಯೋತಿನಗರ ನಿವಾಸಿ ವರ್ಷಿಣಿ (21), ಆಕೆಯ ಪ್ರಿಯಕರ, ರೌಡಿಶೀಟರ್‌ ರೂಪೇಶ್‌ (25), ಹೇಮಂತ್‌ ಅಲಿಯಾಸ್‌ ಹೇಮಿ (32), ನಾಗರಭಾವಿ ನಿವಾಸಿ ದೇವರಾಜ ಅಲಿಯಾಸ್‌ ಕರಿಯ (24), ಮೂಡಲಪಾಳ್ಯದ ವರುಣ್‌ ಕುಮಾರ್‌ (24), ಮಾಗಡಿ ರಸ್ತೆಯ ಭೈರವೇಶ್ವರನಗರ ನಿವಾಸಿ ಮಧುಕುಮಾರ್‌ (21) ಮತ್ತು ಮದ್ದೂರು ತಾಲೂಕಿನ ಅಲೋಕ (24) ಬಂಧಿತರು.

ಪ್ರಮುಖ ಆರೋಪಿ ಕ್ಯಾಟರಾಜನನ್ನು ಶನಿವಾರವೇ ಮಹಾಲಕ್ಷ್ಮೀ ಲೇಔಟ್‌ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದರು. ಈ ಮೂಲಕ ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿದ್ದು, ವಿಚಾರಣೆಗಾಗಿ ಎಲ್ಲ ಆರೋಪಿಗಳನ್ನು ಹತ್ತು ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ. ತಲೆಮರೆಸಿಕೊಂಡಿರುವ ಆಕಾಶ ಅಲಿಯಾಸ್‌ ಮಳೆರಾಯನಿಗೆ ಬಲೆ ಬೀಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

ಆರೋಪಿ ವರ್ಷಿಣಿ ತಂದೆ ರೌಡಿಶೀಟರ್‌ ಹರೀಶ್‌ ಅಲಿಯಾಸ್‌ ಮೂಟೆ ಹರೀಶ್‌, ಲಕ್ಷ್ಮಣ ತಂಡದಲ್ಲಿ ಗುರುತಿಸಿಕೊಂಡಿದ್ದ. ಹರೀಶ್‌ ಪತ್ನಿ ಪದ್ಮಾ ಮದ್ದೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಪಕ್ಷದ ತಾಲೂಕು ಘಟಕ ಅಧ್ಯಕ್ಷೆಯಾಗಿದ್ದಾರೆ. ಅಲ್ಲದೆ, ಲಕ್ಷ್ಮಣನ ಮನೆ ಪಕ್ಕದಲ್ಲೇ ಹರೀಶ್‌ ಕುಟುಂಬ ವಾಸ್ತವ್ಯ. ಹೀಗಾಗಿ, ಇಬ್ಬರ ನಡುವೆ 20 ವರ್ಷಗಳ ಒಟನಾಟವಿತ್ತು. ಲಕ್ಷ್ಮಣ ಮತ್ತು ವರ್ಷಿಣಿ ನಡುವೆ ಆತ್ಮೀಯತೆಯಿತ್ತು.

Advertisement

ಈ ಮಧ್ಯೆ ನೃತ್ಯ ಶಾಲೆಯೊಂದಕ್ಕೆ ಹೋಗುತ್ತಿದ್ದ ವರ್ಷಿಣಿ ಮತ್ತು ರೂಪೇಶ್‌ ನಡುವೆ ಪ್ರೇಮಾಂಕುರವಾಗಿತ್ತು. ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ತಿಳಿದ ವರ್ಷಿಣಿ ಪೋಷಕರು ಪುತ್ರಿಗೆ ಬುದ್ಧಿ ಹೇಳಿದ್ದರು. ಆದರೂ ಇಬ್ಬರು ಸಲುಗೆಯಿಂದ ಇದ್ದರು. ಇದರಿಂದ ಆಕ್ರೋಶಗೊಂಡ ಪದ್ಮಾ ಈ ವಿಚಾರವನ್ನು ಲಕ್ಷ್ಮಣನಿಗೆ ತಿಳಿಸಿ, ರೂಪೇಶ್‌ಗೆ ಎಚ್ಚರಿಕೆ ನೀಡುವಂತೆ ಸೂಚಿಸಿದ್ದರು ಎಂದು ಸಿಸಿಬಿ ಪೊಲೀಸರು ಹೇಳಿದರು.

ಶಾಸಕರ ಮನೆಯಲ್ಲಿ ಕಳ್ಳತನ: ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ಮೂಲದವನಾದ ರೂಪೇಶ್‌ ರಾಜಾರಾಜೇಶ್ವರಿ ನಗರದಲ್ಲಿ ವಾಸವಾಗಿದ್ದ. 2018ರಲ್ಲಿ ಜ್ಞಾನಭಾರತಿಯಲ್ಲಿರುವ ಮಳವಳ್ಳಿ ಜೆಡಿಎಸ್‌ ಶಾಸಕ ಅನ್ನದಾನಿ ಅವರ ಮನೆಯಲ್ಲಿ ಕಳ್ಳತನ ಮಾಡಿ ಜೈಲು ಸೇರಿದ್ದ. ಕಳ್ಳತನಕ್ಕೆ ಅನ್ನದಾನಿ ಅವರ ಮನೆಯ ಕೀಯನ್ನು ವರ್ಷಿಣಿ ಮನೆಯಿಂದಲೇ ರೂಪೇಶ್‌ ಪಡೆದುಕೊಂಡಿದ್ದ. ಆದರೆ, ಪ್ರಕರಣದಲ್ಲಿ ರೂಪೇಶ್‌ ಮಾತ್ರ ಜೈಲು ಸೇರಿದ್ದ. ಇದೇ ವೇಳೆ ಬೇರೆ ಬೇರೆ ಪ್ರಕರಣಗಳಲ್ಲಿ ಜೈಲು ಸೇರಿದ್ದ ಹೇಮಂತ್‌, ಕ್ಯಾಟ್‌ರಾಜ ಹಾಗೂ ಇತರರನ್ನು ರೂಪೇಶ್‌ ಪರಿಚಯಿಸಿಕೊಂಡಿದ್ದ.

ಬಳಿಕ ಜಾಮೀನು ಪಡೆದು ಹೊರಬಂದ ರೂಪೇಶ್‌, ಪ್ರೇಯಸಿ ವರ್ಷಿಣಿ ಜತೆ ಸುತ್ತಾಡುತ್ತಿದ್ದ. ಈ ವಿಚಾರ ತಿಳಿದ ಲಕ್ಷ್ಮಣ ಕ್ಲಬ್‌ವೊಂದಕ್ಕೆ ರೂಪೇಶ್‌ನನ್ನು ಕರೆಸಿಕೊಂಡು ಹಿಗ್ಗಾಮುಗ್ಗಾ ಥಳಿಸಿ, ವರ್ಷಿಣಿ ಜತೆ ಸೇರದಂತೆ ಎಚ್ಚರಿಕೆ ನೀಡಿದ್ದ. ಈ ಘಟನೆ ನಂತರ ರೂಪೇಶ್‌ ತಲೆಮರೆಸಿಕೊಂಡಿದ್ದ. ಮತ್ತೂಂದೆಡೆ ಬಿಎಸ್ಸಿ ಪದವಿ ಮುಗಿಸಿದ್ದ ವರ್ಷಿಣಿಯನ್ನು ಸೈಕಾಲಜಿ ಎಂ.ಎಸ್‌. ವ್ಯಾಸಂಗಕ್ಕಾಗಿ ಲಂಡನ್‌ಗೆ ಕಳುಹಿಸಲಾಗಿತ್ತು.

ಪ್ರೇಮಿಗಳ ಸಂಚು: ಲಂಡನ್‌ಗೆ ಹೋಗಿದ್ದ ವರ್ಷಿಣಿಗೆ ಲಕ್ಷ್ಮಣ ಆಗಾಗ್ಗೆ ವಾಟ್ಸ್‌ಆ್ಯಪ್‌ ಕರೆ ಮಾಡುತ್ತಿದ್ದ. ಒಂದು ವೇಳೆ ವರ್ಷಿಣಿ ಕರೆ ಬ್ಯೂಸಿ ಬಂದರೆ, ಕೂಡಲೇ ರೂಪೇಶ್‌ಗೆ ಕರೆ ಮಾಡುತ್ತಿದ್ದ. ಹೀಗೆ ವರ್ಷಿಣಿ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ. ಇದರಿಂದ ಬೇಸತ್ತಿದ್ದ ವರ್ಷಿಣಿ ಕೆಲ ತಿಂಗಳ ಹಿಂದೆ ಬೆಂಗಳೂರಿಗೆ ಬಂದಾಗ ಪ್ರಿಯಕರ ರೂಪೇಶ್‌ನನ್ನು ಭೇಟಿಯಾಗಿ ಲಕ್ಷ್ಮಣನ ಕೊಲೆ ಬಗ್ಗೆ ಪ್ರಸ್ತಾಪಿಸಿದ್ದಳು ಎನ್ನಲಾಗಿದೆ.

ಇದರಿಂದ ಉತ್ತೇಜಿತನಾದ ರೂಪೇಶ್‌ ಜೈಲಿನಲ್ಲಿದ್ದ ಯುವಕರು ಸಾಥ್‌ ನೀಡಿದರೆ ಕೆಲಸ ಸುಗಮ ಎಂದು ಭಾವಿಸಿ,ಇಬ್ಬರು ಕೊಲೆಗೆ ಸಂಚು ರೂಪಿಸಿದ್ದರು. ಜೈಲಿನಲ್ಲಿದ್ದ ಹೇಮಂತ್‌ ಹಾಗೂ ಮಚ್ಚ ಮಂಜನ ಕೆಲ ಶಿಷ್ಯಂದಿರನ್ನು ರೂಪೇಶ್‌ ಭೇಟಿಯಾಗಿ ಸಹಕಾರ ಕೇಳಿದ್ದ ಎಂದು ಸಿಸಿಬಿ ಪೊಲೀಸರು ಹೇಳಿದರು.

ವಾಟ್ಸ್‌ಆ್ಯಪ್‌ ಕಾಲ್‌ನಸುಳಿವು: ಆಗ್ಗಿಂದಾಗ್ಗೆ ವಾಟ್ಸ್‌ಆ್ಯಪ್‌ ಮೂಲಕ ವರ್ಷಿಣಿಗೆ ಕರೆ ಮಾಡುತ್ತಿದ್ದ ಲಕ್ಷ್ಮಣ ಆಕೆ ಜತೆ ಏಕಾಂತವಾಗಿರಲು ಬಯಸಿದ್ದ. ಈ ವಿಚಾರ ತಿಳಿದ ರೂಪೇಶ್‌, ಲಕ್ಷ್ಮಣ ಹತ್ಯೆಗೆ ಸಿದ್ಧನಾದ. ನಂತರ ಮಾರ್ಚ್‌ ಮೊದಲ ವಾರದಲ್ಲಿ ಲಕ್ಷ್ಮಣನಿಗೆ ಕರೆ ಮಾಡಿದ ವರ್ಷಿಣಿ ಮಾ.7ರಂದು ಬೆಂಗಳೂರಿಗೆ ಬರುತ್ತಿದ್ದು, ಒಂಟಿಯಾಗಿ ಸಿಗುವಂತೆ ಹೇಳಿದ್ದಳು. ಇದು ಪೋಷಕರಿಗೂ ತಿಳಿದಿರಲಿಲ್ಲ ಎಂದು ಪೊಲೀಸರು ಹೇಳಿದರು.

ಮಾ.7ರಂದು ಬೆಳಗ್ಗೆ 9 ಗಂಟೆಗೆ ಲಂಡನ್‌ನಿಂದಲೇ ಕರೆ ಮಾಡಿದ ವರ್ಷಿಣಿ, ತಾನು ಯಶವಂತಪುರದಲ್ಲಿದ್ದು, ಒಂಟಿಯಾಗಿ ಬಂದು ಕರೆದುಕೊಂಡು ಹೋಗುವಂತೆ ಹೇಳಿದ್ದಳು. ಹೀಗಾಗಿ 10.30ಕ್ಕೆ ಇಸ್ಕಾನ್‌ ದೇವಾಲಯ ಸಮೀಪದ ಆರ್‌.ಜಿ ಪ್ಯಾಲೇಸ್‌ ಹೋಟೆಲ್‌ನಲ್ಲಿ ರೂಂ ಬುಕ್‌ ಮಾಡಿದ ಲಕ್ಷ್ಮಣ, ತನ್ನ ಇನೋವಾ ಕಾರಿನಲ್ಲಿ ಒಬ್ಬನೇ ಹೋಗುತ್ತಿದ್ದ.

ವರ್ಷಿಣಿಯಿಂದ ಈ ವಿಚಾರ ತಿಳಿದ ರೂಪೇಶ್‌ ಕೂಡಲೇ ಸಹಚರರ ಜತೆ ಎರಡು ಕಾರುಗಳಲ್ಲಿ ಲಕ್ಷ್ಮಣನನ್ನು ಹಿಂಬಾಲಿಸಿ ನಡುರಸ್ತೆಯಲ್ಲೇ ಬರ್ಬರವಾಗಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ಹೇಳಿದರು. ಅಷ್ಟೇ ಅಲ್ಲದೆ, ಕೊಲೆ ಸಂಬಂಧ ಪ್ರಕರಣ ದಾಖಲಿಸಿದ್ದ ಲಕ್ಷ್ಮಣ ಪತ್ನಿ ಚೈತ್ರಾ ಕೂಡ ವರ್ಷಿಣಿ ಮಾ.7ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಪತಿಗೆ ವಾಟ್ಸ್‌ಆ್ಯಪ್‌ ಕರೆ ಮಾಡಿದ್ದಳು ಎಂದು ಆರೋಪಿಸಿದ್ದರು.

ಮಾ.8ರಂದು ಬಂದ ವರ್ಷಿಣಿ: ಮಾ.7ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ರೂಪೇಶ್‌ನಿಂದ ಲಕ್ಷ್ಮಣನ ಸಾವಿನ ಸುದ್ದಿ ತಿಳಿದ ವರ್ಷಿಣಿ ಅತ್ತ ಲಂಡನ್‌ನಿಂದ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಲು ಸಿದ್ಧತೆ ನಡೆಸಿದ್ದಳು. ಮಾ.8ರಂದು ತಡರಾತ್ರಿ 11.30ರ ಸುಮಾರಿಗೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವರ್ಷಿಣಿ, ನೇರವಾಗಿ ಶ್ರೀಗಂಧಕಾವಲುನಲ್ಲಿರುವ ಸಹೋದರಿಯ ಮನೆಗೆ ಹೋಗಿದ್ದಳು. ಇದಕ್ಕೂ ಮೊದಲು ಲಕ್ಷ್ಮಣನಿಂದ ಪಡೆದಿದ್ದ ಒಂದು ಲಕ್ಷ ರೂ. ಅನ್ನು ವರ್ಷಿಣಿ ಪ್ರಿಯಕರ ರೂಪೇಶ್‌ ಖಾತೆಗೆ ವರ್ಗಾಹಿಸಿದ್ದಳು ಎಂದು ಪೊಲೀಸರು ಹೇಳಿದರು.

ಕಾಲಿಗೆ ಗುಂಡು: ಮಾ.11 ರಂದು ಸಂಜೆ 4.30ರಲ್ಲಿ ರೂಪೇಶ್‌ ಸೇರಿ ಐವರು ಆರೋಪಿಗಳನ್ನು ಕುಣಿಗಲ್‌ ರೈಲ್ವೆ ನಿಲ್ದಾಣ ಬಳಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ಆರೋಪಿಗಳ ವಿಚಾರಣೆ ವೇಳೆ ಹೇಮಂತ್‌ ಬಗ್ಗೆ ಮಾಹಿತಿ ಸಿಕ್ಕಿತ್ತು. ಅದರಂತೆ ಸಿಸಿಬಿ ಪೊಲೀಸರು ಅನ್ನಪೂರ್ಣೇಶ್ವರಿನಗರದ ಹನುಮಗಿರಿ ದೇವಾಲಯದ ಬಳಿ ಹೇಮಂತ್‌ನನ್ನು ಪತ್ತೆ ಹಚ್ಚಿ ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಕಾನ್‌ಸ್ಟೆàಬಲ್‌ ಆನಂದ್‌ ಮೇಲೆ ಆರೋಪಿ ಮಚ್ಚಿನಿಂದ ಹಲ್ಲೆ ನಡೆಸಿದ್ದ. ಆಗ ಸಿಸಿಬಿ ಇನ್‌ಸ್ಪೆಕ್ಟರ್‌ ಹರೀಶ್‌ ಆತ್ಮರಕ್ಷಣೆಗಾಗಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಲಕ್ಷ್ಮಣ ಪತ್ನಿ ಆರೋಪ: ವರ್ಷಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸುತ್ತಿದ್ದಂತೆ, ತಮ್ಮ ಮದುವೆ ಸಂದರ್ಭದಲ್ಲಿ ವರ್ಷಿಣಿ ಜತೆ ತೆಗೆಸಿಕೊಂಡ ಫೋಟೋಗಳನ್ನು ತಮ್ಮ ಫೇಸ್‌ಬುಕ್‌ ಖಾತೆಗೆ ಅಪ್‌ಲೋಡ್‌ ಮಾಡಿರುವ ಲಕ್ಷ್ಮಣನ ಪತ್ನಿ ಚೈತ್ರಾ, ” ಅಂಕಲ್‌, ಅಂಕಲ್‌ ಅಂತಾ ಅನ್ಕೊಂಡೆ ಮಗಳಿಗಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದ ನನ್ನ ಗಂಡನಿಗೆ ಗುಂಡಿ ತೋಡಿ ಮುಚ್ಚಿಬಿಟ್ರಾ ಅಮ್ಮ, ಮಗಳು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಪ್ಪೋಪ್ಪಿಕೊಂಡ ವರ್ಷಿಣಿ: ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಆರೋಪಿ ವರ್ಷಿಣಿ ತಪ್ಪೊಪ್ಪಿಕೊಂಡಿದ್ದಾಳೆ. ” ತಾನು ಇತ್ತೀಚೆಗೆ ಸೈಕಾಲಜಿ ಎಂ.ಎಸ್‌.ವ್ಯಾಸಂಕ್ಕಾಗಿ ಲಂಡನ್‌ನಲ್ಲಿ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದೆ. ಈ ಪ್ರಕರಣದ ಆರೋಪಿ ರೂಪೇಶ್‌ ಎಂಬಾತನನ್ನು ಪ್ರೀತಿಸುತ್ತಿದದ್ದು ನಿಜ. ಲಕ್ಷ್ಮಣನ ಚಲನವಲನಗಳ ಮಾಹಿತಿಯನ್ನು ರೂಪೇಶ್‌ಗೆ ಮೊಬೈಲ್‌ ಮೂಲಕ ನೀಡುತ್ತಿದ್ದದ್ದು ನಿಜ’ ಎಂದು ಹೇಳಿದ್ದಾಳೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಡಿ.ಸಿ. ತಮ್ಮಣ್ಣ ಕರೆ ವದಂತಿ: ಪ್ರಕರಣದ ತನಿಖೆ ವೇಳೆ ವರ್ಷಿಣಿ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ತನಿಖಾಧಿಕಾರಿಗೆ ಕರೆ ಮಾಡಿದ್ದರು ಎಂಬ ವದಂತಿಗೆ ಸಿಸಿಬಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಸ್ಪಷ್ಟನೆ ನೀಡಿದ್ದು, ಪ್ರಕರಣದ ತನಿಖೆ ವೇಳೆ “ನನಗಾಗಲಿ ನಮ್ಮ ಅಧಿಕಾರಿಗಳಿಗಾಗಲಿ ಯಾವುದೇ ರಾಜಕೀಯ ವ್ಯಕ್ತಿಯಿಂದ ಕರೆ ಬಂದಿಲ್ಲ. ನಮಗೆ ಯಾವುದೇ ರಾಜಕೀಯ ಒತ್ತಡ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next