ಕಲಬುರಗಿ: ಚರಂಡಿ ವಿಷಯವಾಗಿ ಜಿಲ್ಲಾ ಮೀಸಲು ಪಡೆಯ ಪೊಲೀಸ್ ಅಧಿಕಾರಿ ಮತ್ತು ಆತನ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದ್ದು, ಹಾಡಹಗಲೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿವೆ.
ಇಲ್ಲಿನ ಮಿಸ್ಬಾ ನಗರದಲ್ಲಿ ವಾಸವಾಗಿರುವ ಜಿಲ್ಲಾ ಮೀಸಲು ಪೊಲೀಸ್ ಪಡೆಯಲ್ಲಿ ಎಎಸ್ಐ ಆಗಿರುವ ಖಾಜಾ ಪಟೇಲ್ ಮತ್ತು ಆತನ ಪತ್ನಿ ಹಾಗೂ ಮಕ್ಕಳ ಮೇಲೆ ಗುಂಪೊಂದು ದಾಳಿ ಮಾಡಿದೆ. ಇದರಲ್ಲಿ ಖಾಜಾ ಪಟೇಲ್ ಹಾಗೂ ಆತನ ಕುಟುಂಬದವರು ತೀವ್ರವಾಗಿ ಗಾಯಗೊಂಡಿದ್ದಾರೆ. ರವಿವಾರ ಸಂಜೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಖಾಜಾ ಪಟೇಲ್ ಕೆಲ ದಿನಗಳ ಹಿಂದೆ ಮನೆ ಕಟ್ಟಿಸಿದ್ದು, ಕಂಪೌಂಡ್ ಕಟ್ಟುವ ಉದ್ದೇಶದಿಂದ ಮೂರು ಅಡಿ ಜಾಗವನ್ನು ಬಿಟ್ಟಿದ್ದಾರೆ. ಆದರೆ, ಆ ಜಾಗದಲ್ಲಿ ಪಕ್ಕದ ಮನೆಯ ರುಕ್ಸಾನಾ ಬೇಗಂ ಎಂಬುವರು ಚರಂಡಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ರುಕ್ಸಾನಾ ಬೇಗಂ ಪುಡಿ ರೌಡಿಗಳಿಗೆ ಹೇಳಿ, ಖಾಜಾ ಪಟೇಲ್ ಕಟುಂಬದ ಮೇಲೆ ದಾಳಿ ಮಾಡಿಸಿದ್ದಾರೆ ಎಂದು ಹೇಳಲಾಗಿದೆ.
ಹಲವು ಪುಡಿರೌಡಿಗಳು ಬಂದು ಖಾಜಾ ಪಟೇಲ್ ಮನೆಗೆ ನುಗ್ಗಿ ಮನೆಯಲ್ಲಿದ್ದವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮಾರಕಾಸ್ತ್ರಗಳ ಹಿಡಿದುಕೊಂಡು ಮನೆ ಮುಂದೆ ದೊಡ್ಡ ಗಲಾಟೆ ಮಾಡಿದ್ದಾರೆ. ಎಲ್ಲ ದುಷ್ಕರ್ಮಿಗಳು ತಲೆ ಮರೆಸಿಕೊಂಡಿದ್ದಾರೆ.
ಈ ಘಟನೆ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.