ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್‌ನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ಸಂಜೆ ನಡೆದಿದೆ.
ಬೆಂಗಳೂರು ದಕ್ಷಿಣ ವಲಯದ ಕುಖ್ಯಾತ ರೌಡಿಶೀಟರ್ ಸೈಕಲ್ ರವಿ ಸಹಚರ ಕುಮಾರ್ ಅಲಿಯಾಸ್ ಪಿಚ್ಚು
ಕುಮಾರ (30) ಕೊಲೆಯಾದವ. ಬೇಕರಿ ರಘು ತಂಡದಲ್ಲಿಯೂ ಗುರುತಿಸಿಕೊಂಡಿದ್ದ ಕುಮಾರ, 2016ರಲ್ಲಿ ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ರೌಡಿಶೀಟರ್, ಫೈನಾನ್ಸಿಯರ್ ಅವಿನಾಶ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರಬಂದಿದ್ದ ಕುಮಾರ್‌ನನ್ನು, ಅವಿನಾಶ್ ಕೊಲೆಗೆ ಪ್ರತೀಕಾರವಾಗಿ ಹತ್ಯೆಗೈದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಸೋಮವಾರ ಸಂಜೆ ಯಲಚೇನಹಳ್ಳಿ ಮೆಟ್ರೋ ನಿಲ್ದಾಣ ಬಳಿ ಬೈಕ್‌ನಲ್ಲಿ ಬಂದ ಐವರು ದುಷ್ಕರ್ಮಿಗಳು, ಮಾರಕಾಸ್ತ್ರಗಳನ್ನು ಹಿಡಿದು ಕುಮಾರನನ್ನು ರಸ್ತೆಗಳಲ್ಲಿ ಅಟ್ಟಾಡಿಸಿದ್ದಾರೆ. ಪ್ರಾಣ ಭೀತಿಯಿಂದ ಸುಮಾರು ಒಂದು ಕಿ.ಮೀ. ಓಡಿದ ಕುಮಾರನನ್ನು ಮೆಟ್ರೋ ನಿಲ್ದಾಣ ಬಳಿ ಅಡ್ಡಗಟ್ಟಿ ಮನಸೋ ಇಚ್ಚೆ ಹಲ್ಲೆ ನಡೆಸಿ ಹತ್ಯೆಗೈದು ಪರಾರಿಯಾಗಿದ್ದಾರೆ.
ಹಫ್ತಾ ವಸೂಲಿ: ರೌಡಿಶೀಟರ್‌ಗಳಾದ ಸೈಕಲ್ ರವಿ, ಬೇಕರಿ ರಘು ಹೆಸರಿನಲ್ಲಿ ಪಿಚ್ಚು ಕುಮಾರ ಮಾರುಕಟ್ಟೆ ಹಾಗೂ ಇತರೆಡೆ ಹಫ್ತಾ ವಸೂಲಿ ಮಾಡುತ್ತಿದ್ದ. ಈತನ ವಿರುದ್ಧ ಬನಶಂಕರಿಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು. ಎಂಟು ತಿಂಗಳ ಹಿಂದೆ ಫೈನಾನ್ಸಿಯರ್ ಅವಿನಾಶ್ ಕೊಲೆ ಪ್ರಕರಣದಲ್ಲಿ ಈತನೂ ಆರೋಪಿ ಯಾಗಿದ್ದು, ಸೈಕಲ್ ರವಿ ತಲೆಮರೆಸಿಕೊಂಡಿದ್ದಾನೆ. ಇನ್ನು ಬೇಕರಿ ರಘು ರಾಮನಗರ ಜೈಲಿನಲ್ಲಿದ್ದಾನೆ. ಬೇಕರಿ ರಘು ಹತ್ಯೆಗೆ ಸಂಚು ರೂಪಿಸಿದ್ದ ಅವಿನಾಶ್ ಸಹಚರರೇ ಕುಮಾರನನ್ನು ಕೊಲೆ ಮಾಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಪ್ರತ್ಯೇಕ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ವಾರ ಮೊದಲೇ ನಡೆದಿತ್ತು ಸಂಚು: ಕಳೆದೊಂದು ವಾರದಿಂದಲೇ ಕುಮಾರನ ಕೊಲೆಗೆ ದುಷ್ಕರ್ಮಿಗಳು ಸಂಚು ರೂಪಿಸಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಅವಿನಾಶ್ ಬೆಂಬಲಿಗರು ಮಾತ್ರವಲ್ಲದೇ, ಹರೀಶ್ ಮತ್ತು ಕುಳ್ಳ ರಿಜ್ವಾನ್ ತಂಡ ಕೂಡ ಈ ಕೃತ್ಯದಲ್ಲಿ ಕೈಜೋಡಿಸಿದೆ. ಕುಮಾರ ಜೈಲಿನಿಂದ ಹೊರಬರುತ್ತಿದ್ದಂತೆ ಆರೋಪಿಗಳು ಈತನ ಚಲವಲನಗಳ ಮೇಲೆ ನಿಗಾ ಇಟ್ಟು ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ