ಮಂಗಳೂರು: ಮತೀಯ ಕಲಹಗಳು ರಾಷ್ಟ್ರದ ಭಾವೈಕ್ಯ ಹಾಗೂ ಅಖಂಡತೆಗೆ ತೊಂದರೆ ನೀಡುತ್ತಿವೆ. ಇಂತಹ ಸಂದರ್ಭದಲ್ಲಿ ಶಿಸ್ತುಬದ್ಧವಾದ ರೋವರ್ಸ್- ರೇಂಜರ್ಸ್ ಸಂಘಟನೆಯು ಯುವ ಸಮುದಾಯದ ಮೂಲಕ ಮನುಷ್ಯರ ನಡುವೆ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಗಟ್ಟಿಗೊಳಿಸಲು ಶ್ರಮಿಸುತ್ತಿದೆ. ರಾಷ್ಟ್ರೀಯ ಭಾವೈಕ್ಯ ಸಾಧನೆಯಲ್ಲಿ ರೋವರ್ಸ್ – ರೇಂಜರ್ಸ್ ಪಾತ್ರ ಶ್ಲಾಘನೀಯ ಎಂದು ಸಚಿವ ಬಿ. ರಮಾನಾಥ ರೈ ಹೇಳಿದರು.
ಗುರುವಾರ ಮಂಗಳೂರಿನ ಸಂತ ಅಲೋಶಿಯಸ್ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರ ಮಟ್ಟದ ರೋವರ್ಸ್ -ರೇಂಜರ್ಸ್ ಸಮಾ ವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾವೇಶ ಜ. 1ರ ವರೆಗೆ ನಡೆಯಲಿದೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಷ್ಟ್ರೀಯ ಆಯುಕ್ತ ಅನಲೇಂದ್ರ ಶರ್ಮಾ ಮಾತನಾಡಿ, ಸಮಾವೇಶದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿರುವ ರೋವರ್ಸ್ ಮತ್ತು ರೇಂಜರ್ಸ್ ಪ್ರತಿನಿಧಿಗಳು ಸಾಹಸ ಕ್ರೀಡೆಗಳ ಜತೆ ವೃತ್ತಿಪರ ಮಾರ್ಗ ದರ್ಶನ ಪಡೆಯಲಿದ್ದು, ವಿಪತ್ತು ನಿರ್ವಹಣೆ, ಟ್ರೆಕ್ಕಿಂಗ್ ಮೊದಲಾದ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದಾರೆ ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಆಯುಕ್ತ ಡಾ| ಎನ್.ಜಿ. ಮೋಹನ್ ಸ್ವಾಗತಿಸಿ, “ವಿ.ಪಿ. ದೀನ್‌ದಯಾಳ್ ನಾಯ್ಡು ಅವರ ಶತಮಾನೋತ್ಸವ ಸ್ಮರಣಾರ್ಥ ಈ ಸಮಾವೇಶ ನಡೆಯುತ್ತಿದೆ. ದ.ಕ. ಜಿಲ್ಲೆಯ ವ್ಯಾಪ್ತಿಯಲ್ಲಿ ಸಂತ ಅಲೋಶಿಯಸ್‌ನಲ್ಲಿ 1921ರಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಆರಂಭಗೊಂಡಿತ್ತು. ಪ್ರಸ್ತುತ ಜಿಲ್ಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ನಡಿ 45,745 ಪ್ರತಿನಿಧಿಗಳಿದ್ದಾರೆ ಎಂದರು.
ವಿ.ಪಿ. ದೀನ್‌ದಯಾಳ್ ನಾಯ್ಡು ಶತಮಾನೋತ್ಸವ ಸಂಭ್ರಮದ ಸಂಚಾಲಕ ಎಂ.ಎ. ಚೆಳ್ಳಯ್ಯ ಪ್ರಸ್ತಾವನೆಗೈದರು. ಭಾರತ್ ಸ್ಕೌಟ್ಸ್‌ನ ರಾಷ್ಟ್ರೀಯ ಆಯುಕ್ತರಾಗಿ ನೇಮಕ ಗೊಂಡಿರುವ ಎಂ.ಎ. ಖಾಲಿದ್ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಉಪಾಧ್ಯಕ್ಷ ಕೆ.ಬಿ. ಷಣ್ಮುಖಪ್ಪ ಅವರನ್ನು ಸಮ್ಮಾನಿಸಲಾಯಿತು. ಶಾಸಕ ಜೆ.ಆರ್. ಲೋಬೋ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿ.ವಿ. ರಿಜಿಸ್ಟ್ರಾರ್ ಯು. ಪ್ರಕಾಶ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಐರಿನ್ ಡಿ’ಕುನ್ಹಾ, ರಾಧಾ ವೆಂಕಟೇಶ್, ರಾಮಲತಾ, ವಾಸು ದೇವ ಬೋಳೂರು ಮುಂತಾದವರು ಉಪಸ್ಥಿತರಿದ್ದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಕಾರ್ಯದರ್ಶಿ ಯು. ಗೋಪಾಲಕೃಷ್ಣ ಭಟ್ ವಂದಿಸಿದರು. ಡಾ| ಮಾಧವ ಭಟ್ ಕಾರ್ಯಕ್ರಮ ನಿರೂಪಿಸಿದರು.
14 ರಾಜ್ಯಗಳ 739 ಪ್ರತಿನಿಧಿಗಳು
ಮಂಗಳೂರು ಮತ್ತೂಮ್ಮೆ ರಾಷ್ಟ್ರೀಯ ಸಮಾವೇಶಕ್ಕೆ ಸಾಕ್ಷಿಯಾಗಿದೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನಡಿ ರೋವರ್ಸ್ ಮತ್ತು ರೇಂಜರ್ಸ್ ರಾಷ್ಟ್ರೀಯ ಸಮಾವೇಶ ಗುರುವಾರದಿಂದ ಜ. 1ರ ವರೆಗೆ ನಗರದ ಸಂತ ಅಲೋಶಿಯಸ್ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿದ್ದು, ಇದರಲ್ಲಿ ದೇಶದ ವಿವಿಧ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಗುರುವಾರ ಸಂಜೆಯವರೆಗೆ ದೇಶದ 14 ರಾಜ್ಯಗಳ 739 ರೋವರ್ಸ್ ಮತ್ತು ರೇಂಜರ್ಸ್ ಆಗಮಿಸಿದ್ದಾರೆ. ಬಿಹಾರ, ಮಣಿಪುರ ಹಾಗೂ ಛತ್ತೀಸ್‌ಗಢದ ಪ್ರತಿನಿಧಿಗಳು ಕೂಡ ಭಾಗವಹಿಸುತ್ತಿದ್ದಾರೆ.