Advertisement

ಮಾರ್ಗ ಮತ್ತು ದೇಸಿ

09:31 AM May 27, 2019 | Sriram |

ಜನಸಂಖ್ಯೆ ಅಧಿಕವಾಗಿ, ವಾಹನಗಳು ಹೆಚ್ಚಾಗಿ, ಓಡಾಡುವುದಕ್ಕೆ ಅಗಲ ಮಾರ್ಗಗಳು ಬೇಕೇಬೇಕೆಂಬಂಥ ಸ್ಥಿತಿ ಬಂದಿದೆ. ಅಭಿವೃದ್ಧಿಯ ಪಥದಲ್ಲಿ ಇವೆಲ್ಲ ಅನಿವಾರ್ಯವೇ. ಈಗ ಪೇಟೆ-ಪಟ್ಟಣಗಳಲ್ಲೆಲ್ಲ ರಸ್ತೆ ಅಗಲೀಕರಣದ್ದೇ ಮಾತು. “ಮಾರ್ಗ’ ವಿಸ್ತಾರವಾಗುತ್ತಿರುವಂತೆ “ದೇಸಿ’ ನಾಶವಾಗುತ್ತದೆ ! ಸ್ಥಳೀಯ ಸಂಸ್ಕೃತಿಯ ಭಾಗವಾಗಿದ್ದ ರಸ್ತೆಬದಿಯ ಸಾಲುಮರಗಳು ನಿರ್ದಯವಾಗಿ ನೆಲಕ್ಕುರುಳುತ್ತವೆ.ವಾಹನಗಳು,
ರಸ್ತೆಬದಿಯ ಮರ, ರಸ್ತೆ ಅಗಲೀಕರಣ

Advertisement

ರಸ್ತೆಬದಿಯ ಮರದ ನೆರಳಿನಲ್ಲಿ ತನ್ನಷ್ಟಕ್ಕೆ ತಾನು ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ಸಾಮಾನ್ಯಮನುಷ್ಯನಿಗೆ ಇನ್ನು ದುರ್ಭರ ಕಾಲ ! ಎಲ್ಲವನ್ನೂ ಬದಿಗೆ ತಳ್ಳಿ , ಊರುಕೇರಿ, ಜನ-ಜಾನುವಾರುಗಳನ್ನು ಹಿಂದಿಕ್ಕಿ ರಸ್ತೆ ಮುಂದೆ ಓಡುತ್ತಿದೆ.ಸಾಕಷ್ಟು ಮುಂದೆ ಬಂದಾಯಿತು. ರಸ್ತೆಯಲ್ಲಾದರೂ ಹಿಂದೆ ಚಲಿಸಬಹುದು, ಕಾಲ ಮಾತ್ರ ಯಾವತ್ತೂ ಒನ್‌ ವೇ!

ಸಾಮ್ರಾಟ್‌ ಅಶೋಕನು ಮಾಡಿದ ಮಹತ್ಕಾರ್ಯಗಳೇನು ಎಂಬ ಪ್ರಶ್ನೆಗೆ ಉತ್ತರವಾಗಿ ಮೊದಲ ಸಾಲಿನಲ್ಲಿಯೇ “ಸಾಮ್ರಾಟ್‌ ಅಶೋಕನು ತನ್ನ ಸಾಮ್ರಾಜ್ಯದ ಪ್ರತಿಯೊಂದು ಮಾರ್ಗದ ಅಕ್ಕಪಕ್ಕದಲ್ಲಿಯೂ ಸಾಲುಮರಗಳನ್ನು ನೆಡಿಸಿದನು’ ಎಂದು ಮರೆಯದೆ ಬರೆಯುತ್ತಿದ್ದೆವು. ಒಂದು ರೀತಿಯಲ್ಲಿ ಸಾಲುಮರಗಳು ಎಂದೊಡನೆ ಮೊದಲು ನೆನಪಿಗೆ ಬರುವವನೇ ಸಾಮ್ರಾಟ್‌ ಅಶೋಕ. ಅವನೊಂದಿಗೆ ಕುಂದಾಪುರದವಳಾದ ನನಗೆ ಮಾತ್ರ ನೆನಪಿಗೆ ಬರುವ ಇನ್ನೊಂದು ಹೆಸರು ಕೋ. ಲ. ಕಾರಂತರದು. ಚಿಕ್ಕವರಿದ್ದಾಗ ನಮ್ಮೂರಿನ ಮಾರ್ಗಬದಿಯ ಮರಗಳನ್ನು ಯಾರು ನೆಟ್ಟರು, ಯಾವಾಗ ನೆಟ್ಟರು ಎಂಬ ಯಾವ ಗೋಚರವೂ ಇಲ್ಲದೆ ನಾವು ಮೈಲಿಗಟ್ಟಲೆ ಅವುಗಳ ನೆರಳಿನಲ್ಲಿ ನಡೆಯುತ್ತಿದ್ದೆವು. ಕೋಟೇಶ್ವರದ ಕೊಡಿಹಬ್ಬಕ್ಕೋ ಆನೆಗುಡ್ಡೆ ಉತ್ಸವಕ್ಕೋ ನಾವು ಶಾಲಾಗೆಳತಿಯರೆಲ್ಲ ಸೇರಿ ಗುಂಪುಗುಂಪಾಗಿ ಹೋಗುತ್ತಿದ್ದ ಬಂಗಾರದ ದಿನಗಳು ಅವು. ಸಾವಧಾನವಾಗಿ ಅಲ್ಲಾಡಿಕೊಂಡು ಮಾತಾಡಿಕೊಂಡು ನಗೆಯುತ್ತ ನೆಗೆಯುತ್ತ ಎಷ್ಟು ಸುಖವಾಗಿ ನಿರ್ಭಯವಾಗಿ ಹೋಗಿ ಬರುತ್ತಿದ್ದೆವು! ಆ ರಸ್ತೆಗಳು ನಮಗಾಗಿಯೇ, ಈ ನೆರಳುಗಳೂ ನಮಗಾಗಿಯೇ ಎಂದಿನಿಂದಲೂ ಎಂದೆಂದಿಗೂ ಇದ್ದೇ ಇರುವಂಥವು ಎಂಬಂತೆ ಇದ್ದೆವು. ಆ ಮರಗಳ ನೆರಳಲ್ಲೇ ನಡೆದಿದ್ದರೂ ಅವು ಕಾರಂತರ ಕೂಸುಗಳೆಂದು ಮಾತ್ರ ನಮಗೆ ತಿಳಿದೇ ಇರಲಿಲ್ಲ. ತಿಳಿದದ್ದು ದೊಡ್ಡವರಾದ ಮೇಲೆಯೇ. ಡಾ. ಶಿವರಾಮ ಕಾರಂತರ ಅಣ್ಣನಾದ, ಸಯನ್ಸ್‌ ಮಾಸ್ಟರು ಎಂದೇ ಪ್ರಸಿದ್ಧರಾದ, ಕೋ. ಲ. ಕಾರಂತರ ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು ಎಂಬ ಕೃತಿಯನ್ನು ಬರೆವ ಸಂದರ್ಭದಲ್ಲಿ ಕುಂದಾಪುರದಿಂದ ಸಾಲಿಗ್ರಾಮದವರೆಗೂ ತಾನು ದೇವದಾರು ಮರಗಳನ್ನು ನೆಡಿಸಿದ ವಿವರಗಳನ್ನು ಅವರು ಹೇಳುತ್ತಿದ್ದರೆ, ಗಾಳಿಮರಗಳನ್ನು ಕ್ರಯಕ್ಕೆ ಪಡೆದು ವಿವಿಧೆಡೆ ನೆಡಿಸಿದ್ದನ್ನು ತಿಳಿಸುತ್ತಿದ್ದರೆ ಅಚ್ಚರಿ ಕವಿದಿತ್ತು. ಅದೊಂದು ಸುದ್ದಿಯೇ ಅಲ್ಲವೆಂಬಂತೆ ಸದ್ದಿಲ್ಲದೆ ಅವರು ಬೀಜ ತಂದು ಗಿಡ ಮಾಡಿ, ಮಾರ್ಗದುದ್ದಕ್ಕೂ ಎರಡೂ ಕಡೆ ಸಾಲುಮರಗಳನ್ನು ನೆಟ್ಟದ್ದು, ಅವು ಜಾನುವಾರುಗಳ ಪಾಲಾಗದಂತೆ ಸುತ್ತ ಬೇಲಿಯನ್ನೂ ನಿರ್ಮಿಸಿ ಪೋಷಿಸಿದ್ದು ಇತ್ಯಾದಿಗಳ ಕತೆ ಅದು. ಇದನ್ನೆಲ್ಲ ನಾನು ಹೇಳಿಕೊಳ್ಳಬೇಕೆಂಬ ಅಸೆಯಿಂದ ಹೇಳುತ್ತಿಲ್ಲ. ಒಂದು ಬಗೆಯಿಂದ ನೋಡಿದರೆ ಪ್ರಜೆಯಾದವನು ಸಮಾಜದ ಋಣ ತೀರಿಸಲಿಕ್ಕಾಗಿ ಏನನ್ನಾದರೂ ಮಾಡುತ್ತಲೇ ಇರಬೇಕಾಗುತ್ತದೆ. ಸಮಾಜದ ಋಣ ಹೇಗೆ ತೀರಿಸಿಯೇನು ಎಂಬುದು ಎಲ್ಲರನ್ನೂ ಕಾಡಬೇಕಾದ ಪ್ರಶ್ನೆ ಎಂಬ ಮಾತನ್ನೂ ಕೋ. ಲ. ಕಾರಂತರು ಆ ಅಧ್ಯಾಯದ ಕೊನೆಯಲ್ಲಿ ದಾಖಲಿಸಿದ್ದಾರೆ. ಕಾರಂತರಂಥವರಿಗೆ ಸಮಾಜ ಎನ್ನುವುದು ತಮ್ಮ ಮನೆಯದೇ ವಿಸ್ತರಣೆ. ತಮ್ಮ ಕುಟುಂಬದ್ದೇ ಮುಂದರಿದ ಭಾಗ. ಹಾಗೆ ಪರಿಭಾವಿಸಿದವರಿಗಷ್ಟೇ ಅವರಂತೆ ಅತಿ ಸಹಜವಾಗಿ ಕ್ರಿಯಾಶೀಲರಾಗಲು ಸಾಧ್ಯ. ತಮ್ಮದೇ ಮನೆಯಲ್ಲಿ ಕಣ್ಣಿಗೆ ಬಿದ್ದ ಕೆಲಸಗಳನ್ನು ಸಮಸ್ಯೆಗಳನ್ನು ಯಾರೂ ಮಾಡೆಂದು, ಎತ್ತಿಕೋ ಎಂದು ಹೇಳದೆಯೂ ಮನೆಯ ಸದಸ್ಯನೊಬ್ಬ ತನ್ನ ಹೆಗಲಿಗೇರಿಸಿ ನಿಭಾಯಿಸಿಕೊಂಡು ಹೋಗುವ ತೆರದಲ್ಲಿ ತತ್ಪರರಾಗಲು ಸಾಧ್ಯ. ಸ್ವ ಮತ್ತು ಪರ ಎಂಬ ಯಾವ ಭೇದವಿಲ್ಲದೆ ದುಡಿವ ತಾದಾತ್ಮ$Âದ ವಿಚಾರದಲ್ಲಿ ಕೋ. ಲ. ಕಾರಂತರಿಗೆ ಸಾಟಿ ಯಾರು?
ದೇವದಾರುವೆಂದರೆ ದೇವ ದಾರು !

ಕುಂದಾಪುರದಲ್ಲಿ ನಮ್ಮ ಮನೆಯ ರಸ್ತೆ ಪಕ್ಕದಲ್ಲಿಯೇ, ಮನೆಯ ಎದುರೇ ಬಲಭಾಗದಲ್ಲಿ ಅಗಲವಾಗಿ ಹರಡಿ ನಿಂತ ಒಂದು ದೊಡ್ಡ ದೇವದಾರು ಮರವಿತ್ತು. ಅವುಗಳ ಗುಲಾಬಿ ಕುಸುಮಕುಸುಮ ಹೂವುಗಳೇನು, ಕೋಡುಗಳು ಪಟಕ್ಕಂತ ಸಶಬ್ದ ಕೆಳಕ್ಕೆ ಬೀಳುವುದನ್ನೇ ಕಾಯುತ್ತ ಓಡಿ ಹೋಗಿ ಬಾಯಿಹಾಕಿ ಧ್ಯಾನಸ್ಥವಾಗಿ ಜಗಿಯುವ ಜಾನು ವಾರುಗಳ ಸಂಭ್ರಮವೇನು, ನಾವು ಶಾಲೆಯಿಂದ ಮನೆಗೆ ಹಿಂದಿರುಗುವಾಗ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಬಿದ್ದಿರುತ್ತಿದ್ದ ದೇವದಾರು ಕೋಡುಗಳನ್ನೆಲ್ಲ ಹೆಕ್ಕಿ ಒಟ್ಟುಮಾಡುತ್ತಿದ್ದೆವು. ಮನೆ ತಲುಪಿದ್ದೇ ಹಟ್ಟಿಗೆ ಓಡಿ, ಅಲ್ಲಿ ನಾವು ಕೋಡು ತಂದೇ ತರುವೆವೆಂಬ ಗ್ಯಾರಂಟಿಯಿಂದ ಮೊಗ ಅಲ್ಲಾಡಿಸುತ್ತ ನಮಗಾಗಿಯೇ ದಾರಿಕಾಯುತ್ತಿದ್ದ ದನಕರುಎಮ್ಮೆಗಳ ಬಾಯಿಗೆ ಒಡ್ಡುತ್ತಿದ್ದೆವು. ಅವುಗಳ ಮುಂದಿನ ಬಾನಿಗೆ ಸುರಿಯುತ್ತಿದ್ದೆವು. ಒಡ್ಡಲೂ ಬಿಡುವು ಕೊಡದೆ ಸರಕ್ಕನೆ ಅವು ಬಾಯೊಡ್ಡಿ ಕೈಯಿಂದ ಎಳೆದುಕೊಳ್ಳುವ ಭರವೆಂದರೆ! ಪರಮಾನ್ನ ದೊರೆತಂತೆ ಆ ಕೋಡುಗಳನ್ನು ಅವು ಮೆಲ್ಲುವಾಗ ಅಂತಿಂಥಲ್ಲದ ಸಂತಸ ನಮ್ಮನ್ನು ಆವರಿಸುತಿತ್ತು.

ರಸ್ತೆ ಕಾಯುವ ಧಾಂಡಿಗರಂತೆ ಹರವಾಗಿ ನೆರಳು ಚೆಲ್ಲಿ ಬಿಸಿಲಿಗೆ ಸವಾಲೊಡ್ಡಿ ಹರಡಿ ನಿಂತಿದ್ದ ಕಾರಂತರು ನೆಟ್ಟ, ಹೂ ಬಿಡುವ, ಕೋಡು ಬಿಡುವ ಜನ-ದನ ಎಲ್ಲರಿಗೂ ಭೇದವಿಲ್ಲದೆ ನೆರಳು ಹೊದೆಸುವ ಆ ದೇವದಾರು ವೃಕ್ಷಗಳು-ದೇವ ವೃಕ್ಷಗಳು- ಈಗ ಎಲ್ಲಿವೆ?

Advertisement

ರಸ್ತೆಗಳು ಹಿಗ್ಗುವವು, ಏಕಪಥವಿದ್ದವು, ದ್ವಿಪಥವಾಗುವವು ಚತುಷ್ಪಥವಾಗುವವು ಎಂಬ ಸುದ್ದಿ ಬರುವಾಗ ಸರಿಯೇ. ಈ ನಮೂನೆ ವಾಹನ ಮತ್ತು ಜನ ಸಂಚಾರ ವಲ್ಲ, ಓಡಾಟ ಇರುವಲ್ಲಿ ಇದು ಆಗಲೇಬೇಕು, ಸಂತೋಷ- ಅನಿಸಿದ್ದು ಹೌದು. ಆದರೆ, ಅದರರ್ಥ ಈ ಎಲ್ಲ ಸಾಲುಮರಗಳು ಉರುಳುವ ಕಾಲ ಸನ್ನಿಹಿತವಾಯಿತು, ಇವುಗಳ ಕಾಲವೇ ಮುಗಿಯಿತು ಎಂದು ನಮಗೆ ಅರಿವಾಗಲೇ ಇಲ್ಲವಲ್ಲ. ರಸ್ತೆವೈಶಾಲ್ಯದ ಕೆಲಸ ಆರಂಭವಾಯಿತು. ಯಾರು ನೆಟ್ಟರು, ಬೆಳೆಸಿದರು ಎಂಬ ಯಾವ ಭಾವ, ಭಯವಿಲ್ಲದೆ ಅಡ್ಡವಿರುವ ಸಾಲುಮರಗಳನ್ನು ಕಣ್ಣಲ್ಲಿ ರಕ್ತವಿಲ್ಲದಂತೆ ಕರ್ರ ಕತ್ತರಿಸಿ ಉರುಳಿಸುವುದೊಂದೇ ಯಜ್ಞದೋಪಾದಿಯಲ್ಲಿ ನಡೆಯಿತು. ಯಾವಾಗ ಆಧುನಿಕ ಕಟ್ಟರ್‌ಗಳು ಈ ಮರಗಳನ್ನು ಒಂದೊಂದಾಗಿ ಕತ್ತರಿಸಿ ಕತ್ತರಿಸಿ ಒಗೆಯತೊಡಗಿದವೋ, ಆಗ ಮಂದಮತಿಗಳಾದ ನಮಗೆ ವಿಶಾಲ ಮಾರ್ಗ ಎಂದರೆ ಮರಗಳ ಮಾರಣಹೋಮ ಎಂಬ ಸಮೀಕರಣ ಮನೋಗತವಾಯಿತು. ಯಾರನ್ನು ಕೇಳಿದಿರಿ? ಯಾರ ಆದೇಶ? ಈ ಮರಗಳನ್ನು ಉರುಳಿಸಿ ಎಲ್ಲಿಗೆ ಒಯ್ಯುತ್ತಿರುವಿರಿ? ಎದ್ದ ಪ್ರಶ್ನೆಗಳು ಅಲ್ಲಲ್ಲೇ ಕಲ್ಲಾದವು. ಅಡ್ಡ ಬರುವ ಸಾಲು ಮರಗಳನ್ನು ಕಡಿಯುವುದೊಂದೇ ರಸ್ತೆವಿಸ್ತರಣೆಯ ಸೂತ್ರ ಎಂಬಂತೆ ನಂಬಿತವೂ ಬಿಂಬಿತವೂ ಆಯಿತು. ದೈತ್ಯಾಕಾರದ ವೃಕ್ಷಗಳು ಹೇಳಕೇಳುವವರಿಲ್ಲದ ಅನಾಥ ವೃದ್ಧರಂತೆ ಸೋತು ಮಣಿದು ಉರುಳಿ ದಾರಿಗಳಿಗೆ ದಾರಿ ಮಾಡಿಕೊಟ್ಟವು. ಅವು ದಾರಿ ಮಾಡಿಕೊಟ್ಟದ್ದು ದಾರಿಗಳಿಗೆ ಮಾತ್ರವೇ ಏನು?

ಮರಗಳನ್ನು ಅಮರವಾಗಿಸುವ ಪ್ರಯತ್ನವೇಕಿಲ್ಲ !
ಎಂಥ ದೈತ್ಯ ಮರಗಳನ್ನು ಕೊಯ್ಯಲೂ ಕತ್ತರಿಸಲೂ ಆಧುನಿಕವಾದ ಉಪಕರಣಗಳು ಇರುವಂತೆ, ಬೇರು ಸಮೇತ ಬಿಡಿಸಿ ಬೇರೆಡೆಗೆ ಸುರಕ್ಷಿತವಾಗಿ ಒಯ್ಯಲೂ ನೆಟ್ಟು ಜೀವಬರಿಸಲೂ ಉಪಾಯ ಮತ್ತು ಉಪಕರಣಗಳು ಇರುತ್ತವೆ. ಇದೇನು ತಿಳಿಯದ ವಿಚಾರವೆ? ತಿಳಿದೂ ಯಾಕೆ ಮರಗಳನ್ನು ತುಂಡರಿಸಿದರು? ಒಂದೇ ಒಂದು ಮರವನ್ನಾದರೂ ಉಳಿಸಿದ ಉದಾಹರಣೆ ಮದ್ದಿಗಾದರೂ ಉಂಟೆ? ಯಾರ್ಯಾರ ಜೇಬು ತುಂಬಿತು? ಕೊಲೆ ಎಂದರೆ ಮನುಷ್ಯರನ್ನು ಕೊಂದಲ್ಲಿ ಮಾತ್ರವೆ? ಮರಳು ಮಾಫಿಯಾ, ಮರದ ಮಾಫಿಯಾ ವಿವಿಧ ಬಗೆಯ ಮಾಫಿಯಾ ಜಗತ್ತು ಇಂದು ಕಟುಕ ಮನಸ್ಸುಗಳನ್ನು ಸೃಷ್ಟಿಸಿದೆ. ಇಂಥ ಮನಸ್ಸುಗಳೇ ಸಮಾಜದ ಸ್ವಾಸ್ಥ್ಯವನ್ನು ಕೆಡಿಸಿವೆ. ಹೆಣ್ಣನ್ನು ವಸ್ತುವನ್ನಾಗಿ ನೋಡುವ ಕಣ್ಣುಗಳ ಕಾರಣವೂ ಇವೇ. ಅವುಗಳನ್ನು ಯಾರೂ ಪ್ರಶ್ನಿಸಲಾಗದು, ದೂಷಿಸಲಾಗದು, ಕಾಲ ಹೀಗಿದೆ, ಇದೆಲ್ಲ ಇನ್ಮುಂದೆ ಹೀಗೆಯೇ; ಸುಮ್ಮನೆ ಒಪ್ಪಿಕೋ ಎನ್ನುತ್ತಿವೆ.

ನಾವು ಆರಿಸಿದ ಪ್ರತಿನಿಧಿಗಳಿದ್ದಾರೆ, ಅವರಿಂದ ನಡೆಯುವ ಸರಕಾರವಿದೆ, ಆರಿಸಿ ಕಳಿಸಿದ ಮೇಲೆ ಅವರು ನಮಗೆ ವಂಚನೆ ಮಾಡಲಾರರು ಎಂದು ದಿನನಿತ್ಯದ ತಲೆಬಿಸಿಗಳಲ್ಲಿ ಮುಳುಗಿರುವ ನಾವು ಪ್ರಜೆಗಳು ಒಂದು ಬಾರಿ ತಲೆ ಎತ್ತಿನೋಡಿದೆವೆಂದರೆ ಅಲ್ಲಿ ಏನುಂಟು? ಪ್ರಖರ ಬಿಸಿಲು, ತಂಪಿಲ್ಲದ ದಾರಿ, ಮಾಯವಾದ ಮರಗಳು, ವಾಹನಗಳ ಭರಾಟೆ. ಕೊನೆಗೆ ನಿಶ್ವಿ‌ಂತೆಯಿಂದ ನಡೆಯಲೂ ಸಾಧ್ಯವಾಗದ ಕಾಲುದಾರಿಗಳು. ಎಲ್ಲಿಂದ ಯಾವುದು ಎಂತೆಲ್ಲ ಎರಗುವುದೋ ಎಂಬ ಭೀತಿ; ಹೊರಗೆ ಹೋದವರು ಸಾಬೀತಿಯಿಂದ ಮರಳಿದರೆ ಸಾಕು ಎಂಬ ಭಯ. ಕಾಲ್ನಡಿಗೆಗಳು ತತ್ತರಿಸುತ್ತವೆ. ಕಾಲ್ನಡಿಗೆಯ ಮತ್ತು ಕಾಲುಹಾದಿಯ ಅಧ್ಯಾಯವೇ ಮುಗಿಯಿತೇ ಹೇಗೆ!

ಮರ ಕೊಯ್ಯುವುದು ಮಹಾಪಾಪ !
ಒಂದು ಕಾಲದಲ್ಲಿ ಮರ ಕೊಯ್ಯುವುದೆಂದರೆ ಪಾಪ ಎಂಬ ಭಾವನೆಯಿತ್ತು. ಕೊಯ್ಯಲೇ ಬೇಕಾಗಿ ಬಂದಾಗ ಮೊದಲು “ವೃಕ್ಷದೇವತೆಯೇ ಕ್ಷಮಿಸು’ ಎಂಬಂತೆ ಅದಕ್ಕೆ ಕೈ ಮಗಿದು ಕೊಡಲಿ ಪೆಟ್ಟು ಹಾಕುತ್ತಿದ್ದರಂತೆ. ಅದೂ ಉಪಯೋಗಕ್ಕೆ ಎಷ್ಟು ಬೇಕೋ ಅಷ್ಟೇ ಮರಗಳಿಗೆ- ಈಗಿದನ್ನು ಹೇಳಿದರೆ ಎದುರಿನವರಿಗೆ ನಗು ಬರುತ್ತದೆ. ಎಲ್ಲಿದ್ದೀರಿ ನೀವು?- ಪ್ರಶ್ನೆ ಬರುತ್ತದೆ.

ಎಲ್ಲಿದ್ದೇವೆಂದು ನಾವಾದರೂ ಹೇಳುವುದು ಹೇಗೆ?
ಹೀಗೆಲ್ಲ ಹೇಳುತ್ತಿದ್ದಂತೆ ಇದು ಪೂರ್ತಿ ನೆನಪು ಹಳವಂಡಗಳ ಯುಗವೇನು ಎಂದು ಬೆಚ್ಚಿ ಬೀಳುವಂತಾಗುತ್ತಿದೆ. ಬದಲಾವಣೆ ಪರಿವರ್ತನೆ ಸೃಷ್ಟಿಯ ನಿಯಮ ನಿಜ. ಆದರೆ, ಇಷ್ಟು ವಿಧದ, ಎಷ್ಟೆಲ್ಲ ಬಗೆಯಲ್ಲಿನ ಮತ್ತು ಇಷ್ಟು ವೇಗದ ಪರಿವರ್ತನೆ ! ಸಹಿಸುವುದೆಂತು? ನಮ್ಮ ಕಾಲದ್ದೇ ಆದ ಅತಿವೇಗ ಜನರ ಬಾಯಿ ಮುಚ್ಚಿಸುತ್ತದೆ, ಅವಾಕ್ಕಾಗಿಸುತ್ತದೆ. ಕಣ್ಣು ಕಣ್ಣು ಬಿಟ್ಟು ನೋಡುತ್ತ ನಿಲ್ಲುವಂತೆ ಮಾಡುತ್ತದೆ. ಸ್ತಬ್ಧಗೊಳಿಸುತ್ತದೆ. ನಾವೆಲ್ಲಿ ಎಂದು ನಾವೇ ಹುಡುಕುವಂತಾಗುತ್ತದೆ. ನಮ್ಮ ಕಣ್ಣೆದುರಿಗೇ ಬೃಹತ್‌ ವೃಕ್ಷಗಳು ಉರುಳುತ್ತಿದ್ದರೆ ನಾವು ನೋಡುತ್ತ ನಿಲ್ಲುತ್ತಿದ್ದೇವೆ. ಹುಸಿಕಾಳಜಿಯಲ್ಲಿ ನಮ್ಮನ್ನು ನಾವೇ ಮೋಸಗೊಳಿಸಿದ್ದೇವೆ. ಮರಗಳನ್ನು ಅಪ್ಪಿ ಹಿಡಿದು ಉಳಿಸಿದವರ ಕತೆಗಳು ರೋಮಾಂಚಕ ಕತೆಗಳಷ್ಟೇ ಆಗಿ ಉಳಿದಿವೆ.

ಅನಿವಾರ್ಯತೆ ಒಂದೆಡೆ ನಮ್ಮ ಬಾಯಿ ಕಟ್ಟಿಸಿದೆ ಎನ್ನುತ್ತೇವೆ. ಹೌದು, ಆ ಕಾಲವೇ ಬೇರೆ, ವಿರಳ ವಾಹನಗಳು, ವಿರಳ ಜನರು, ವಿರಳ ಪ್ರಯಾಣಗಳು. ಹೊರಗೆ ಹೊರಟರೆ ಹೆಜ್ಜೆಗೊಬ್ಬರು ಪರಿಚಿತರು ಸಿಕ್ಕಿ ಎರಡು ಮಾತಾಡಿ, ಮುಂದರಿವ ಸಂಜೆರಸ್ತೆಗಳು. ಊರಿಗೆ ಊರೇ ಪರಸ್ಪರ ಗುರುತಿನವರು. ಊರೆಂದರೆ ಅವರವರ ಕಾರ್ಯಕ್ಷೇತ್ರ ಧರ್ಮಕ್ಷೇತ್ರದಲ್ಲಿ ದುಡಿಯುತ್ತ ಮರ್ಯಾದೆಯಿಂದ ಒಟ್ಟಾಗಿ ಬಾಳುವ, ಭೂಮ್ಯಾಕಾಶ ಗಡಿ ಇದ್ದೂ ಗಡಿ ಮೀರಿದ, ಒಂದು ಅಮೂರ್ತ ರೂಪ. ಆಗಕ್ಕೆ ಅಂಗೈಯಗಲ ರಸ್ತೆ ಸಾಕಿತ್ತು. ನಡಿಗೆಯಲ್ಲೇ ಸಾಗುವ ರೂಢಿಯಿದ್ದ ಕಾಲದಲ್ಲಿ ಸಾಲು ಮರಗಳ ಕಲ್ಪನೆಗೆ ಬೇಕಾದಷ್ಟು ಎಡೆ ಇತ್ತು. ಆದರೆ ಈಗ ಕಾಲ ಬದಲಾಗಿದೆ. ವಾಹನಗಳ ದಟ್ಟಣೆ, ಜನ ದಟ್ಟಣೆ. ಹೇಳಿಯಪ್ಪ ನೀವೇ. ಇವತ್ತು, ಕಾಲ್ನಡಿಗೆಯಲ್ಲಿ ಯಾರು ಹೋಗುತ್ತಾರೆ? ಹೋಗುವವರಾದರೂ ಎಷ್ಟು ದೂರ? ಓ ಅಲ್ಲೇ ಆಟೋ ಸಿಗುತ್ತದೆ, ನಿಲ್ಲಿಸಿದರನ, ಹತ್ತಿದರನ. ದುಡ್ಡಿಗೆ ಹೆದರುವ ಕಾಲವೆ ಇದು? ದುಡ್ಡಿಲ್ಲದವರು ಯಾರು ಇವತ್ತು? ಎಲ್ಲರ ಹತ್ತಿರವೂ ದುಡ್ಡಿದೆ, ದ್ವಿಚಕ್ರವಿದೆ, ಕಾರಿದೆ, ಕಾಲ್ನಡಿಗೆಯ ಕಾಲವೇ ಮುಗಿಯುತ್ತ ಬಂದಿದೆ. ಮಕ್ಕಳಾದರೂ ನಡೆಯುತ್ತಾರೆಯೆ? ಎಲ್ಲಿ, ತೋರಿಸಿ ನೋಡುವ. ಬಿಸಿಲ ಭಯವಾದರೂ ಯಾರಿಗೆ?- ಹೀಗೆಲ್ಲ ಆಡಿಸುವುದು ಯಾವುದೆನ್ನುವಿರಿ? ಪ್ರಪಂಚದಲ್ಲಿ ಇರುವುದು ತಾವು ಮತ್ತು ತಮ್ಮಂಥವರು ಮಾತ್ರ. ಬಿಟ್ಟರೆ ಬೇರೆ ಜನಗಳಿಲ್ಲ, ಸಂಕಟಗಳಿಲ್ಲ ಹೊಟ್ಟೆಗೂ ಗತಿಯಿಲ್ಲದವರು ಇವತ್ತು ಯಾರ್ಯಾರೂ ಇಲ್ಲ ಎಂಬ ಹುಂಬ ನಂಬಿಕೆಯ ಠೇಂಕಾರ ಆಡಿಸುವ ಉಡಾಪು ಇದು, ಹೀಗೆ!

ಹೊಳೆಯಲ್ಲಿ ನೀರಿಲ್ಲ, ಬರೀ ಕಲ್ಲು ಮುಳ್ಳು
ಹಾದಿಬದಿ ಮರವಿಲ್ಲ, ಬರಿ ಉರೀ ಬಿಸಿಲು
ನಮ್ಮ ಉಡಾಪು ಜಾಸ್ತಿಯಾಯಿತು, ಪ್ರಕೃತಿ ನೋಡುತ್ತ ಸುಮ್ಮನೆ ಇರುತ್ತದೆಯೆ? ನೀರು ಆರಿತು. ಜಲದೊಡಲು ಬರಿದಾಯಿತು. ಬೀಳುವ ಮಳೆಯ ಬಗ್ಗೆಯೇ ನಮಗೆ ಅಹಂಕಾರವಿತ್ತು. ಅದಕ್ಕೂ ಪೆಟ್ಟು ಬಿತ್ತು. ಬಿದ್ದಮಳೆಯ ನೀರು, ಅಂತರ್ಜಲವಾಗದೆ ಅಂತರ್ಧಾನವಾಗಿದ್ದು ಅರಿವಿಗೇ ಬಾರದೇ ಹೋಯ್ತು. ನೀರಿನ ಬರಕ್ಕೆ ನೂರಾರು ಕಾರಣಗಳೊಂದಿಗೆ ಎಗ್ಗಿಲ್ಲದೆ ಮರಗಳನ್ನು ಕಡಿದದ್ದೂ ಕಾರಣವೇ ಅಷ್ಟೆ? ಕಡಿದಷ್ಟೇ ಮರ ನೆಡುವ ವ್ರತವನ್ನಾದರೂ ಕೈಗೊಂಡಿದ್ದರೆ ಇಂಥ ಕಠಿಣ ಶಿಕ್ಷೆಗೆ ಒಳಗಾಗುವ ಅಪಾಯ ತಪ್ಪುತಿತ್ತು. ಈಗವೋ ನೀರಿಲ್ಲದ ಬವಣೆ, ನಾಳೆ ನೀರಿಲ್ಲದ, ಮುಂದೆ ಅದಕ್ಕೆ ಕೊಂಡಿಯಾಗಿ ವಿದ್ಯುತ್ತಿಗೂ ತತ್ವಾರವಾಗುವ ದಿನಗಳ ವಾರಸುದಾರರಾಗಲು ನಾವೀಗ ಹೊರಟಿದ್ದೇವೆ. ಮೇಲೆ ಕಾಯುವ ಉರಿ ಬಿಸಿಲು. ಕಾಪಿಡುವ ಪ್ರಕೃತಿ ಕಾಸಿ ಬರೆಹಾಕುತ್ತಿದೆ. ಓಡಲೆಲ್ಲಿ? ಎಚ್ಚತ್ತುಕೊಳ್ಳದೆ ಇದ್ದಲ್ಲಿ ನಂದನವನವು ನಂದಿದ ವನವಾಗುವ ದಿನ ದೂರವಿಲ್ಲ.

ಸಾಲುಮರದ ತಿಮ್ಮಕ್ಕ ನೆಟ್ಟ ಮರಗಳಾದರೂ ಭವಿಷ್ಯದಲ್ಲಿ ಉಳಿಯುತ್ತವೆಯೆ ಅಥವಾ ಅಭಿವೃದ್ಧಿಯ ಫಾರ್ಸ್‌ಗೆ ಮಣಿದು ಅವುಗಳೂ ಅಸು ನೀಗುತ್ತವೆಯೇ? ಆ ಪ್ರಶ್ನೆಯೂ ಬೇಡ, ದೃಶ್ಯವೂ ಬೇಡ. ಊಹೆಯೇ ನಡುಗಿಸುತ್ತದೆ. ತನ್ನಷ್ಟಕ್ಕೇ ತನ್ನ ಹಂಬಲಕ್ಕೇ ಮರ ನೆಡುತ್ತ ಬಂದ ಕಾರಂತರಿಗೆ ಭವಿಷ್ಯದಲ್ಲಿ ಒಂದು ದಿನ ಈ ಮರಗಳೆಲ್ಲ ರಸ್ತೆ ನೆಪದಲ್ಲಿ ಭೂಮಿಗೊರಗುವುದೆಂಬ ಊಹನೆಯಾದರೂ ಇತ್ತೆ?

ಹೊಳೆಯಲ್ಲಿ ನೀರಿಲ್ಲ, ಬರೀ ಕಲ್ಲು ಮುಳ್ಳು

ಹಾದಿಬದಿ ಮರವಿಲ್ಲ, ಬರಿ ಉರೀ ಬಿಸಿಲು

ಬಾ ತಾಯೇ ಎಂದು

ಕವಿ ಕೂಗಿ ಕರೆದರೂ

ಇನ್ನೊಂದೇ ಬರೆದರೂ

ಇಳಿದು ಬಾರಳು ತಾಯಿ ಮುನಿದಿರುವಳು.

ತಾಯಿಯೇ ಮುನಿದರೆ ಕಾಯುವವರಾರು?

ಕಾಯುತಿದೆ ನಡುನೆತ್ತಿ ತಂಪೆರೆವರಿಲ್ಲ.

ನೆಲದ ಕಣಕಣವೂ ಬೆಂಕಿ ಕೆಂಚಂಚಿನಲಿ

ಪದವೂರಲಳವಿಲ್ಲ ಬರದ ಬರಸಿಡಿಲೆರಗಿ

ಬಸವಳಿಯುತಿವೆ ಜೀವಜಾಲ

ದೇವ, ರಕ್ಷಿಸು ನಮ್ಮನನವರತ…

-ವೈದೇಹಿ

Advertisement

Udayavani is now on Telegram. Click here to join our channel and stay updated with the latest news.

Next