Advertisement

ಜಿಲ್ಲಾದ್ಯಂತ ರಕ್ಕಸ ನಾಯಿಗಳ ಅಟ್ಟಹಾಸ

01:22 PM Jun 30, 2019 | Suhan S |

ಮಂಡ್ಯ: ಹಿಂದೆ ಕಳ್ಳರನ್ನು ಕಂಡರೆ ಭಯಪಡುವ ಕಾಲವಿತ್ತು. ಈಗ ಕಳ್ಳರಿಗಿಂತ ನಾಯಿಗಳನ್ನು ಕಂಡರೆ ಹೌಹಾರುವಂತಹ ಪರಿಸ್ಥಿತಿ ಎದುರಾಗಿದೆ. ಬೀದಿ ನಾಯಿಗಳು ಇಂದು ರಕ್ಕಸ ನಾಯಿಗಳಾಗಿರುವುದೇ ಇದಕ್ಕೆ ಕಾರಣ. ಪ್ರತಿ ಬೀದಿಗಳಲ್ಲೂ ನಾಯಿಗಳ ಹಿಂಡು ನೆಲೆಯೂರಿವೆ. ನಿತ್ಯವೂ ಪುಟ್ಟ ಮಕ್ಕಳಿಂದ ವಯಸ್ಕರವರೆಗೆ 50 ರಿಂದ 60 ಜನರ ಮೇಲೆ ದಾಳಿ ಮಾಡುತ್ತಾ ಭಯ ಹುಟ್ಟಿಸಿವೆ. ನಾಯಿ ಕಡಿತದಿಂದ ಸಹಸ್ರಾರು ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಇದರ ಜೊತೆಯಲ್ಲೇ ನಾಯಿ ಕಡಿತಕ್ಕೆ ನೀಡುವ ವ್ಯಾಕ್ಸಿನ್‌ಗೆ ಕೊರತೆ ಸೃಷ್ಠಿಯಾಗಿರುವುದು ಜನರ ಆತಂಕ ಹೆಚ್ಚುವಂತೆ ಮಾಡಿದೆ.

Advertisement

ದಿನದಿಂದ ದಿನಕ್ಕೆ ನಾಯಿಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಇದರಿಂದ ಅವುಗಳ ಉಪಟಳವೂ ಹೆಚ್ಚುತ್ತಲೇ ಇದೆ. ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿಗಳು ಎಷ್ಟೇ ಪ್ರಯತ್ನ ನಡೆಸಿದರೂ ನಾಯಿಗಳ ಸಂತಾನೋತ್ಪತ್ತಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಶ್ವಾನಗಳ ಹಾವಳಿಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮುಂದಾದರೆ ಕಾನೂನು ಭಯ ಅಧಿಕಾರಿಗಳನ್ನು ಕಾಡುತ್ತಿದೆ. ಇದರೊಂದಿಗೆ ಪ್ರಾಣಿ ದಯಾ ಸಂಘದವರ ಕಿರಿಕಿರಿಯೂ ನಾಯಿಗಳ ಉಪಟಳ ತಡೆಗೆ ಪ್ರಮುಖ ಅಡ್ಡಿಯಾಗಿದೆ. ಇದರಿಂದ ಬೀದಿ ನಾಯಿಗಳು ರಸ್ತೆಯಲ್ಲಿ ಓಡಾಡುವವರ ಮೇಲೆ ರಾಜಾರೋಷವಾಗಿ ದಾಳಿ ನಡೆಸುತ್ತಿವೆ. ನಾಯಿ ಕಡಿತಕ್ಕೊಳಗಾದವರ ಗೋಳಾಟ, ನರಳಾಟ ಮುಂದುವರಿದೇ ಇದೆ.

ಪ್ರತಿ ಬೀದಿಯಲ್ಲಿ 15ರಿಂದ 20 ನಾಯಿಗಳ ಹಿಂಡು: ನಗರಸಭೆ, ಪುರಸಭೆ ವ್ಯಾಪ್ತಿಯ ಪ್ರತಿಯೊಂದು ಬೀದಿಗಳಲ್ಲೂ ಕನಿಷ್ಠ 15 ರಿಂದ 20 ನಾಯಿಗಳ ಹಿಂಡು ಬೀಡು ಬಿಟ್ಟಿವೆ. ಸದಾಕಾಲ ರಸ್ತೆಯಲ್ಲಿ ಸಂಚರಿಸುತ್ತಾ ಜನರಲ್ಲಿ ಭಯ ಹುಟ್ಟಿಸುತ್ತಿವೆ. ಒಂಟಿಯಾಗಿ ಬರುವ ಪುರುಷರು, ಮಹಿಳೆಯರು, ಮಕ್ಕಳ ಮೇಲೆರಗಿ ಗಾಯಗೊಳಿಸುತ್ತಿವೆ. ಮಕ್ಕಳನ್ನು ಹೊರಗೆ ಆಡಲು ಬಿಡುವುದಕ್ಕೂ ಜನ ಹೆದರುತ್ತಿದ್ದಾರೆ.

ರಾತ್ರಿ ಸಮಯದಲ್ಲಿ ಓಡಾಡುವಾಗಲಂತೂ ಜೀವವನ್ನು ಕೈಯ್ಯಲ್ಲಿಡಿದು ಸಂಚರಿಸುವ ಪರಿಸ್ಥಿತಿ ಸಾರ್ವಜನಿಕರದ್ದಾಗಿದೆ. ಕತ್ತಲಲ್ಲಿ ಹಿಂಡು ಹಿಂಡಾಗಿ ಮಲಗುವ ನಾಯಿಗಳು ಬೈಕ್‌, ಸ್ಕೂಟರ್‌ನಲ್ಲಿ ಬರುವವರನ್ನು ಅಟ್ಟಿಸಿಕೊಂಡು ಬರುವುದು ಸರ್ವೇ ಸಾಮಾನ್ಯವಾಗಿದೆ. ಕೆಲವೊಮ್ಮೆ ನಾಯಿಗಳಿಂದ ತಪ್ಪಿಸಿಕೊಳ್ಳಲು ಮುಂದಾದ ವೇಳೆ ಅಪಘಾತಕ್ಕೀಡಾಗಿ ಕೈ-ಕಾಲು ಮುರಿದುಕೊಂಡವರೂ ಇದ್ದಾರೆ. ಆಹಾರಕ್ಕಾಗಿ ಸದಾಕಾಲ ಸಂಚರಿಸುವ ನಾಯಿಗಳು ಆಹಾರ ಸಿಗದಿದ್ದಾಗ ಆಕ್ರೋಶಗೊಂಡು ಹಾದಿ-ಬೀದಿಯಲ್ಲಿ ಸಂಚರಿಸುವವರ ಮೇಲೆರಗು ತ್ತಿವೆ. ನಾಯಿಗಳ ಉಪಟಳ ಎಲ್ಲೆಡೆ ಮಿತಿ ಮೀರುತ್ತಿದೆ.

ಹಳಿಗಳಲ್ಲೂ ನಾಯಿ ಕಾಟ: ಹಳ್ಳಿ ಜನರೂ ಸಹ ಬೀದಿ ನಾಯಿಗಳನ್ನು ಕಂಡರೆ ಭಯಪಡುವಂತಹ ವಾತಾವರಣ ಸೃಷ್ಠಿಯಾಗಿದೆ. ನಾಯಿಗಳ ಸಂತಾನಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲದಿರುವುದ ರಿಂದ ಅವುಗಳ ಸಂಖ್ಯೆ ಮಿತಿ ಮೀರುತ್ತಲೇ ಇದೆ. ಗ್ರಾಮೀಣ ಜನರ ಮೇಲೂ ರಾಕ್ಷಸರಂತೆ ದಾಳಿ ನಡೆಸಿ ಗಾಯಗೊಳಿಸುತ್ತಿವೆ. ನಾಯಿ ಕಡಿತಕ್ಕೊಳಗಾದವರು ನೋವಿನಿಂದ ನರಳಾಡುವುದು ಮಾತ್ರವಲ್ಲದೆ ಸೋಂಕಿನಿಂದ ಪಾರಾಗಲು ಪದೇಪದೆ ಆಸ್ಪತ್ರೆಗೆ ಚಿಕಿತ್ಸೆಗೆ ಅಲೆದಾಡುವ ಪರಿಸ್ಥಿತಿಯನ್ನು ತಂದೊಡ್ಡಿವೆ.

Advertisement

ಇದರಿಂದ ಹಳ್ಳಿ ಜನರ ನೆಮ್ಮದಿಗೆ ನಾಯಿಗಳು ಭಂಗ ತಂದಿವೆ. ಸಾಕು ಪ್ರಾಣಿಗಳಾದ ಕುರಿ, ಮೇಕೆಗಳ ಹಿಂಡಿನ ಮೇಲೂ ನಾಯಿಗಳ ಹಿಂಡು ದಾಳಿ ನಡೆಸಿ ಬಲಿ ತೆಗೆದುಕೊಳ್ಳುತ್ತಿವೆ. ನಾಯಿಗಳ ದಾಳಿಯಿಂದ ಸಾವಿರಾರು ರೂ. ಮೌಲ್ಯದ ಕುರಿ, ಮೇಕೆಗಳು ಬಲಿಯಾಗಿವೆ. ನಾಯಿಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಕಡಿವಾಣ ಮಾತ್ರ ಇಲ್ಲವಾಗಿದೆ.

ಕಾನೂನು ತೊಡಕು, ಪ್ರಾಣಿ ದಯಾ ಸಂಘದ ಕಿರಿಕಿರಿ: ಬೀದಿ ನಾಯಿಗಳಿಂದ ಜನರಿಗಾಗುವ ತೊಂದರೆ ತಪ್ಪಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಮುಂದಾದರೆ ಕಾನೂನು ತೊಡಕು ಇಲ್ಲವೇ ಪ್ರಾಣಿ ದಯಾ ಸಂಘದವರ ಕಿರಿಕಿರಿ ಎದುರಾಗುತ್ತಿದೆ. ಕೊನೆಗೆ ಬೀದಿ ನಾಯಿಗಳನ್ನು ತುಂಬಿಕೊಂಡು ಅರಣ್ಯ ಪ್ರದೇಶಗಳಿಗೆ ಬಿಡುವುದಕ್ಕೂ ಕಾನೂನಿನಲ್ಲಿ ಅವಕಾಶವಿಲ್ಲವೆಂಬುದು ಅಧಿಕಾರಿಗಳು ಅಸಹಾಯಕತೆ.

 

● ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next