Advertisement

ರೋಟರಿ-ಎಂಇಎಸ್‌ ಜಂಟಿ ಸಾಧನೆ; ಜಲಕೊಯ್ಲಿಗೆ ಚಾಲನೆ

03:38 PM Jul 15, 2019 | Suhan S |

ಶಿರಸಿ: ವಿದ್ಯಾರ್ಥಿನಿಯರಿಗೆ ಬೇಸಿಗೆಯಲ್ಲಿ ಉಂಟಾಗುತ್ತಿದ್ದ ನೀರಿನ ಬವಣೆ ತಪ್ಪಿಸಲು ಇಲ್ಲಿನ ರೋಟರಿ ಕ್ಲಬ್‌, ದಾನಿಗಳು ಹಾಗೂ ಎಂಇಎಸ್‌ ಶಿಕ್ಷಣ ಸಂಸ್ಥೆ ನೆರವಿನಿಂದ ಆರುವರೆ ಲಕ್ಷ ಲೀಟರ್‌ ಸಾಮರ್ಥ್ಯದ ನಾಲ್ಕು ಘಟಕಗಳನ್ನು ರವಿವಾರ ಲೋಕಾರ್ಪಣೆಗೊಳಿಸಲಾಯಿತು.

Advertisement

ಘಟಕಕ್ಕೆ ಆರ್ಥಿಕ ನೆರವು ಒದಗಿಸಿದ ಅಮೆರಿಕನ್‌ ರೋಟರಿ ಸೆಂಟ್ರಲ್ ಚೆಸ್ಟರ್‌ ಕೌಂಟಿ ಅಧ್ಯಕ್ಷ ಡಾ| ವಸಂತ ಪ್ರಭು ನೂತನ ಜಲ ಕೊಯ್ಲಿನ ಘಟಕಕ್ಕೆ ಚಾಲನೆ ನೀಡಿ, ವಿದ್ಯಾರ್ಥಿನಿಯರು ವಸತಿ ಮಾಡುವ ನಾಲ್ಕು ಹಾಸ್ಟೆಲ್ಗಳಲ್ಲಿ ಈ ಘಟಕಗಳ ನಿರ್ಮಾಣ ಖುಷಿ ತಂದಿದೆ. ಸುಮಾರು 130 ಟ್ಯಾಂಕ್‌ಗಳಿಂದ ಆರುವರೆ ಲಕ್ಷ ಲೀಟರ್‌ ಸಂಗ್ರಹಣೆಯ ಸಾಮರ್ಥ್ಯ ಈ ನಾಲ್ಕೂ ವಸತಿ ನಿಲಯಗಳಿಂದ ಸಾಧ್ಯವಾಗಿದೆ. ಸುಮಾರು 550 ವಿದ್ಯಾರ್ಥಿನಿಯರು ಇದರ ಲಾಭಪಡೆದುಕೊಳ್ಳಲಿದ್ದಾರೆ. ಶಿಕ್ಷಣ ಸಂಸ್ಥೆ ಹಾಗೂ ರೋಟರಿ ಜಂಟಿಯಾಗಿ ಮಾಡಿದ ಸಾಧನೆ ಇದು. ಜಲ ಸಂರಕ್ಷಣೆ ಇಂದಿನ ಎಲ್ಲರ ಹೊಣೆ. ಮುಂದೆ ಇನ್ನೂ ಹೆಚ್ಚಿನ ಅನುದಾನ ನೀಡುತ್ತೇವೆ. ಈ ಮಾದರಿಯಲ್ಲಿ ಇನ್ನೆಲ್ಲೂ ಕಾರ್ಯ ಆಗಿಲ್ಲ. ಬೇರೆ ಬೇರೆ ದೇಶದಲ್ಲಿಯೂ ಈ ಮಾದರಿ ಅನುಷ್ಠಾನಕ್ಕೆ ಸಲಹೆ ಮಾಡುತ್ತೇವೆ ಎಂದರು.

ರೋಟರಿ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಪ್ರವೀಣ ಕಾಮತ್‌ ಮಾತನಾಡಿ, ಈ ಜಲಕೊಯ್ಲು ಕೇವಲ ಎಂಇಎಸ್‌ ಕ್ಯಾಂಪಸ್‌ಗೆ ಮಾತ್ರವಲ್ಲ, ಸುತ್ತಲಿನ ಆರು ಸಾವಿರಕ್ಕೂ ಅಧಿಕ ಕುಟುಂಬಗಳಿಗೆ, ವಸತಿ ಉಳ್ಳವರಿಗೆ ನೆರವಾಗಲಿದೆ. ಅವರ ಬಾವಿಯ ನೀರೂ ಏರಿಕೆ ಆಗಲಿದೆ. ಶಾಂತಿ ನಗರ, ಆದರ್ಶನಗರ, ಗಾಯತ್ರಿ ನಗರ, ಕೆಎಚ್ಬಿ ಕಾಲೋನಿ, ವಿವೇಕಾನಂದ ನಗರ, ಸಹ್ಯಾದ್ರಿ ಕಾಲೋನಿಗಳಿಗೂ ಅನುಕೂಲ ಆಗಲಿದೆ. ಈ ಯೋಜನೆಗೆ ಸುಮಾರು 58 ಲಕ್ಷ ರೂ. ತಗುಲಿದೆ ಎಂದು ತಿಳಿಸಿದರು.

ಎಂಇಎಸ್‌ ಉಪಾಧ್ಯಕ್ಷ ನಿತಿನ್‌ ಕಾಸರಕೋಡ, ಡಾ| ಪ್ರಾಣೇಶ ಜಹಗೀರದಾರ್‌, ಆನಂದ ಕುಲಕರ್ಣಿ, ರೋಟರಿ ಅಧ್ಯಕ್ಷ ಡಾ| ಶಿವರಾಮ ಕೆ.ವಿ, ಪಾಂಡುರಂಗ ಪೈ ಇತರರು ಇದ್ದರು. ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಟಾರ, ಜಲ ತಜ್ಞ ಶಿವಾನಂದ ಕಳವೆ, ವೈಶಾಲಿ ವಿ.ಪಿ. ಹೆಗಡೆ ಇನ್ನಿತರರಿದ್ದರು. ಬಿ.ಡಿ. ಕಾಮತ್‌ ಹಾಗೂ ಗಣಪತಿ ಭಟ್ಟ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next