Advertisement

ಆಗಸ್ಟ್‌ನಲ್ಲಿ ರೋಟಾ ವೈರಸ್‌ ತಡೆ ಲಸಿಕೆ

01:48 PM Aug 03, 2019 | Suhan S |

ಕೋಲಾರ: ಆಗಸ್ಟ್‌ ತಿಂಗಳಿನಲ್ಲಿ ರೋಟಾ ವೈರಸ್‌ ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯಲ್ಲೂ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದರು.

Advertisement

ತಮ್ಮ ಕಚೇರಿಯ ನ್ಯಾಯಾಂಗ ಸಭಾಂಗಣಲ್ಲಿ ರೋಟಾ ವೈರಸ್‌ ಲಸಿಕೆಯನ್ನು ಪ್ರಾರಂಭಿಸುವ ಕುರಿತು ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೋಟಾ ವೈರಸ್‌ ಒಬ್ಬರಿಂದ ಒಬ್ಬರಿಗೆ ಹರಡಬಲ್ಲ ವೈರಾಣಾಗಿದ್ದು, ಇದು ಐದು ವರ್ಷದೊಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ವೈರಾಣುವಿನಿಂದ ಮಕ್ಕಳಲ್ಲಿ ಅತಿಸಾರ ಭೇದಿ, ವಾಂತಿ, ನಿರ್ಜಲೀಕರಣ ಉಂಟಾಗುತ್ತದೆ. ಇದನ್ನು ತಡೆಗಟ್ಟಲು ರಾಜ್ಯಾದ್ಯಂತ ಆಗಸ್ಟ್‌ ತಿಂಗಳಲ್ಲಿ ಮಕ್ಕಳಿಗೆ ಲಸಿಕೆಯನ್ನು ಹಾಕಲಾಗುವುದು ಎಂದು ವಿವರಿಸಿದರು.

ಸ್ವಚ್ಛತೆ ಕಾಪಾಡಿ: ವೈರಸ್‌ಗಳು ಉಂಟಾಗದಂತೆ ಹಾಗೂ ರೋಗ ಹರಡದಂತೆ ತಡೆಗಟ್ಟಲು ಸ್ವಚ್ಛತೆಯನ್ನು ಕಾಪಾಡಬೇಕು. ಆದ್ದರಿಂದ ಪ್ರತಿಯೊಬ್ಬರೂ ಶುದ್ಧವಾದ ಕುಡಿಯುವ ನೀರನ್ನು ಸೇವನೆ ಮಾಡಬೇಕು.

ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ಚಿಕ್ಕಂದಿನಿಂದಲೇ ಅರಿವು ಮೂಡಿಸಬೇಕು ಎಂದು ಹೇಳಿದರು.

Advertisement

ಶೌಚಾಲಯ ನಿರ್ಮಿಸಿ: ಆಗಸ್ಟ್‌ 15 ರೊಳಗೆ ಜಿಲ್ಲೆಯ ಎಲ್ಲಾ ಅಂಗನವಾಡಿ ಕಟ್ಟಡಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಕ್ರಮವಹಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.

96 ದೇಶಗಳಲ್ಲಿ ಬಳಕೆ: ಜಿಲ್ಲಾ ಆರ್‌.ಸಿ.ಎಚ್. ಅಧಿಕಾರಿ ಡಾ.ಚಂದನ್‌ ಮಾತನಾಡಿ, ಈಗಾಗಲೇ ರೋಟಾ ವೈರಸ್‌ ಲಸಿಕೆಯನ್ನು ಜಗತ್ತಿನ 96 ದೇಶಗಳಲ್ಲಿ ಬಳಸಲಾಗುತ್ತಿದೆ. ಭಾರತದ 19 ಜಿಲ್ಲೆಗಳಲ್ಲಿ ಈಗಾಗಲೇ ನೀಡಲಾಗುತ್ತಿದೆ. ಈ ಲಸಿಕೆಯನ್ನು ಮಗು ಜನಿಸಿದ 6, 10 ಮತ್ತು 14ನೇ ವಾರದಲ್ಲಿ ಬಾಯಿಯ ಮೂಲಕ ನೀಡಲಾಗುವುದು. ಇದರಿಂದ ಮಗುವಿನಲ್ಲಿ ಉಂಟಾಗಬಹುದಾದ ಅತಿಸಾರ ಭೇದಿ, ನಿರ್ಜಲೀಕರಣ ಹಾಗೂ ವಾಂತಿ ತಡೆಗಟ್ಟಬಹುದಾಗಿದೆ ಎಂದು ಮಾಹಿತಿ ನೀಡಿದರು.

ಸಾರ್ವತ್ರಿಕ ಲಸಿಕೆ: 10 ಮತ್ತು 16 ವರ್ಷದ ಮಕ್ಕಳಿಗೆ, ಗರ್ಭಿಣಿಯರಿಗೆ ಟಿ.ಡಿ. ಚಿಕಿತ್ಸೆ ನೀಡಲಾಗುತ್ತದೆ. ಜಿಲ್ಲೆಯಲ್ಲಿ 2018ರಲ್ಲಿ 1 ಹಾಗೂ 2019ರಲ್ಲಿ 8 ಡಿಫ್ತೀರಿಯಾ ಪ್ರಕರಣಗಳು ಕಂಡುಬಂದಿವೆ. ಭಾರತದಲ್ಲಿ ಭೇದಿಯಿಂದ ಆಸ್ಪತ್ರೆಗೆ ಸೇರುವ ಶೇ.40 ಮಕ್ಕಳು ರೋಟಾ ವೈರಸ್‌ ಸೋಂಕಿಗೆ ಗುರಿಯಾಗಿರುತ್ತಾರೆ. ಆದ್ದರಿಂದ ರೋಟಾ ವೈರಸ್‌ ಚಿಕಿತ್ಸೆಯನ್ನು ಕೇಂದ್ರ ಸರ್ಕಾರವು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ನೀಡಲು ತೀರ್ಮಾನಿಸಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್‌ ಕುಮಾರ್‌, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾರಾಯಣಸ್ವಾಮಿ, ಡಬ್ಲೂಎಚ್ಒ ಡಾ.ಮಿಸ್ಬಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ, ಡಾ.ಜಗದೀಶ್‌, ವಿವಿಧ ಇಲಾಖೆಗಳ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next