“ವಾಣಿಜ್ಯ ಮಂಡಳಿ ನಮಗೆ ರೋಸಿ ಟೈಟಲ್ ಕೊಟ್ಟಿದೆ…’ ನಟ ಲೂಸ್ ಮಾದ ಯೋಗಿ ಅಭಿನಯದ 50 ನೇ ಸಿನಿಮಾಕ್ಕೆ “ರೋಸಿ’ ಎಂದು ಟೈಟಲ್ ಇಡಲಾಗಿದ್ದು, ಕೆಲ ದಿನಗಳ ಹಿಂದಷ್ಟೇ ಚಿತ್ರತಂಡ ಸಿನಿಮಾದ ಫಸ್ಟ್‌ಲುಕ್ ಮತ್ತು ಟೈಟಲ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿತ್ತು. ಒಂದೆಡೆ, “ರೋಸಿ’ ಟೈಟಲಿನಲ್ಲಿ ಯೋಗಿ ಮತ್ತವರ ಚಿತ್ರತಂಡ ಸಿನಿಮಾದ ಪ್ರೀ-ಪೊ›ಡಕ್ಷನ್ ಕೆಲಸಗಳನ್ನು ನಡೆಸುತ್ತಿದ್ದರೆ, ಮತ್ತೂಂದೆಡೆ ಇಂಥದ್ದೇ ಟೈಟಲ್ ಅನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾಕ್ಕೂ ಇಡಲು ಮುಂದಾಗಿದ್ದು, ಇದೀಗ “ರೋಸಿ’ ಟೈಟಲ್ ತಮ್ಮದಾಗಿಸಿ ಕೊಳ್ಳಲು ಎರಡೂ ಚಿತ್ರತಂಡಗಳು ಪೈಪೋಟಿಗಿಳಿದಿರುವಂತೆ ಕಾಣುತ್ತದೆ.
ಈ ಬಗ್ಗೆ ಮಾಹಿತಿ ನೀಡುವ ಸಲುವಾಗಿಯೇ ಪತ್ರಿಕಾಗೋಷ್ಠಿ ನಡೆಸಿದ ನಟ ಯೋಗಿ ಮತ್ತು ನಿರ್ದೇಶಕ ಶೂನ್ಯ, “ರೋಸಿ’ ಟೈಟಲ್ ಕುರಿತಾದ ಗೊಂದಲಗಳ ಬಗ್ಗೆ ಒಂದಷ್ಟು ಮಾಹಿತಿ ನೀಡಿದರು.
ಮೊದಲಿಗೆ ಮಾತನಾಡಿದ ನಿರ್ದೇಶಕ ಶೂನ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ರೋಸಿ ಸಿನಿಮಾದ ಟೈಟಲ್ ಅನ್ನು ನಮ್ಮ ಸಿನಿಮಾಕ್ಕೆ ನೀಡಿದೆ. “ರೋಸಿ’ ಎಂಬುದು ನಮ್ಮ ಸಿನಿಮಾದ ಟೈಟಲ್ ಮತ್ತು ಹೀರೋ ಪಾತ್ರ ಎರಡೂ ಆಗಿದೆ. ವಾಣಿಜ್ಯ ಮಂಡಳಿ ಈ ಟೈಟಲ್‌ಗೆ ಅನುಮತಿ ನೀಡಿದ ನಂತರವೇ ಸಿನಿಮಾದ ಮುಹೂರ್ತ ಮುಗಿಸಿ, ಪೋಸ್ಟರ್ ಕೂಡ ಬಿಡುಗಡೆ ಮಾಡಿದ್ದೇವೆ. ಈಗ ರೋಸಿ ಟೈಟಲ್ ಬೇರೆಯವರ ಪಾಲಾಗಿದೆ ಎಂಬ ಸುದ್ದಿ ಮೀಡಿಯಾಗಳ ಲ್ಲಿ ಹರಿದಾಡುತ್ತಿದೆ. ಇದರಿಂದ ನಮಗೆ ಹಿನ್ನಡೆಯಾಗುತ್ತಿದೆ’ ಎಂದರು.
ಈ ಬಗ್ಗೆ ಮಾತನಾಡಿದ ನಟ ಯೋಗಿ, ನಾನು ಮತ್ತು ನಿರ್ದೇಶಕ ಶೂನ್ಯ ಇಬ್ಬರೂ ಕೂಡ ಕೆಲದಿನಗಳ ಹಿಂದಷ್ಟೇ ನಟ ಶಿವರಾಜಕುಮಾರ್ ಅವರನ್ನು ಭೇಟಿ ಮಾಡಿ ಟೈಟಲ್ ಬಿಟ್ಟುಕೊಡುವಂತೆ ಮನವಿ ಮಾಡಿದೆವು. ಅವರು ಕೂಡ ಒಪ್ಪಿಕೊಂಡರು. ಹಾಗಾಗಿ ಇದೇ ಟೈಟಲಿನಲ್ಲಿ ಸಿನಿಮಾ ಮುಂದುವರೆಸುವ ನಿರ್ಧಾರಕ್ಕೆ ಬಂದೆವು. ಇನ್ನು ಚಲನಚಿತ್ರ ವಾಣಿಜ್ಯ ಮಂಡಳಿ ನಮ್ಮ ಸಿನಿಮಾಕ್ಕೆ ರೋಸಿ ಎಂದೂ, ಅವರ ಸಿನಿಮಾಕ್ಕೆ ರೋಸಿ 45 ಎಂದೂ ಟೈಟಲ್ ಇಡಲು ಅನುಮತಿ ಕೊಟ್ಟಿದೆ. ಹೀಗಾಗಿ ಎರಡೂ ಸಿನಿಮಾಗಳಿಗೂ ಒಂದೇ ಟೈಟಲ್ ಇರಬಹುದಾ ಎಂಬ ಸಂಶಯ ಬರಬಹುದು ಅದಕ್ಕಾಗಿ ಈ ಮೂಲಕ ಸ್ಪಷ್ಟನೆ ಕೊಡುತ್ತಿದ್ದೇವೆ ಎಂದರು.
ಸದ್ಯ ರೋಸಿ ಎಂಬ ಟೈಟಲಿನಲ್ಲಿ ನಮ್ಮ ಸಿನಿಮಾದ ಬಹುತೇಕ ಕೆಲಸಗಳು ನಡೆಯುತ್ತಿರುವುದರಿಂದ, ಈ ಹಂತದಲ್ಲಿ ರೋಸಿ ಟೈಟಲ್ ಬದಲಾವಣೆ ಅಸಾಧ್ಯ ಎಂದಿರುವ ಚಿತ್ರತಂಡ, ಇದೇ ಟೈಟಲಿನಲ್ಲಿ ಸಿನಿಮಾವನ್ನು ತೆರೆಗೆ ತರುವ ಮಾತನಾಡಿದೆ.