Advertisement

ರೋಶಿನಿ ದುರ್ಬಲಗೊಳಿಸಿದ ಕಟ್ಟಡ

06:23 AM Feb 05, 2019 | Team Udayavani |

ಬೆಂಗಳೂರು: ಬಿಬಿಎಂಪಿ ಶಾಲೆ, ಕಾಲೇಜುಗಳ ಕಟ್ಟಡಗಳು ಸದೃಢವಾಗಿಲ್ಲದ ಕಾರಣ ಮಹತ್ವಾಕಾಂಕ್ಷಿ “ಬಿಬಿಎಂಪಿ ರೋಶನಿ’ ಯೋಜನೆ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ.

Advertisement

ಬಿಬಿಎಂಪಿ ಶಾಲೆ, ಕಾಲೇಜುಗಳಲ್ಲಿ ಅತ್ಯಾಧುನಿಕ ಶಿಕ್ಷಣ, ಕಲಿಕೆ ಮತ್ತು ಬೋಧನಾ ಮಾದರಿಗಳನ್ನು ಪರಿಚಯಿಸಿ, ಅಲ್ಲಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ದೇಶದಲ್ಲೇ ಮೊದಲ ಬಾರಿ “ರೋಶಿನಿ’ ಯೋಜನೆಯನ್ನು ಪಾಲಿಕೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲು ಮೈಕ್ರೋಸಾಫ್ಟ್ ಹಾಗೂ ಟೆಕ್‌ ಅವಾಂತ ಗಾರ್ಡ್‌ ಸಂಸ್ಥೆಗಳು ಮುಂದಾಗಿದ್ದವು.

ಆದರೀಗ ಕಟ್ಟಡಗಳು ಸದೃಢವಾಗಿರುವ ಕಡೆ ಮಾತ್ರ ಯೋಜನೆ ಅನುಷ್ಠಾನಗೊಳಿಸುವುದಾಗಿ ಸಂಸ್ಥೆಗಳು ತಿಳಿಸಿದ್ದು, ಯೋಜನೆ ಜಾರಿಯಾಗುವುದೇ ಎಂಬ ಸಂಶಯ ಮೂಡಿದೆ. ಪಾಲಿಕೆಯ 156 ಶಾಲೆ, ಕಾಲೇಜುಗಳ ಮೇಲ್ದರ್ಜೆ, ಸ್ಯಾಟಲೈಟ್‌ ಶಿಕ್ಷಣಕ್ಕೆ ಅಗತ್ಯ ಪರಿಕರಗಳು ಸೇರಿದಂತೆ 500 ಕೋಟಿ ರೂ. ವೆಚ್ಚದಲ್ಲಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಮೈಕ್ರೋಸಾಫ್ಟ್ ನಿರ್ಧರಿಸಿದ್ದು, ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಸಹಕಾರವನ್ನು ಸರ್ಕಾರ ಹಾಗೂ ಪಾಲಿಕೆಯಿಂದ ನೀಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದರು.

ಅದರಂತೆ ಮೊದಲ ಹಂತವಾಗಿ ಶಾಲೆಗಳಿಗೆ ಸ್ಮಾರ್ಟ್‌ ಟಿವಿ, ಸ್ಯಾಟಲೈಟ್‌ ಶಿಕ್ಷಣದ ಪರಿಕರಗಳನ್ನು ಪೂರೈಸುವ ವ್ಯವಸ್ಥೆ ಕೂಡ ಮಾಡಲಾಗಿತ್ತು. ಆದರೆ, ಆ ಪರಿಕರ ಇರಿಸಲು ಶಾಲೆಗಳಲ್ಲಿ ಸೂಕ್ತ ಕೊಠಡಿ ಹಾಗೂ ಭದ್ರತಾ ಸಿಬ್ಬಂದಿಯ ಕೊರತೆ ಇದ್ದ ಕಾರಣ ಪರಿಕರಗಳನ್ನು ಪೂರೈಸಲಿಲ್ಲ. ಇದೀಗ 156 ಕಟ್ಟಡಗಳ ಪೈಕಿ ಶೇ.50ರಷ್ಟು ಕಟ್ಟಡಗಳು ಸದೃಢವಾಗಿಲ್ಲದ ಕಾರಣ ಸಂಸ್ಥೆಗಳು ಯೋಜನೆ ಜಾರಿಗೆ ಹಿಂದೇಟು ಹಾಕುತ್ತಿರುವುದು ಕಂಡುಬಂದಿದೆ. 

ಪಾಲಿಕೆಯ ಶಿಕ್ಷಣ ಸ್ಥಾಯಿ ಸಮಿತಿ, ಶಾಲೆಗಳನ್ನು ಪರಿಶೀಲಿಸಿದಾಗ ಬಹುತೇಕ ಶಾಲಾ ಕಟ್ಟಡಗಳ ತುರ್ತು ದುರಸ್ತಿ ಅಗತ್ಯವಿರುವುದು ಕಂಡುಬಂದಿದೆ. ಅದರಂತೆ ಎಲ್ಲ ಕಟ್ಟಡಗಳ ದುರಸ್ತಿಗೆ ಕನಿಷ್ಠ 100 ಕೋಟಿ ರೂ. ಬೇಕಿದ್ದು, ಬರುವ ಬಜೆಟ್‌ನಲ್ಲಿ ಅನುದಾನ ಮೀಸಲಿಡುವಂತೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಕೋರಲು ಮುಂದಾಗಿದೆ.

Advertisement

ಬಿಬಿಎಂಪಿ ಶಾಲೆಗಳ ಅಭಿವೃದ್ಧಿಗಾಗಿ ವಾರ್ಷಿಕ 100 ಕೋಟಿ ರೂ.ಗಳಂತೆ ಮುಂದಿನ 5 ವರ್ಷದವರೆಗೆ 500 ಕೋಟಿ ರೂ. ವೆಚ್ಚ ಮಾಡಿ, ಸ್ಥಳೀಯ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಉದ್ದೇಶವನ್ನು ಮೈಕ್ರೋಸಾಫ್ಟ್ ಸಂಸ್ಥೆ ಹೊಂದಿತ್ತು. ಆದರೆ, ನಾಲ್ಕು ತಿಂಗಳಿನಿಂದ 56 ಲಕ್ಷ ರೂ. ವೆಚ್ಚ ಮಾಡಿದ್ದು, ಆ ಹಣದಲ್ಲಿ ಸ್ಯಾಟಲೈಟ್‌ ಶಿಕ್ಷಣ ನೀಡಲು ಅಗತ್ಯ ಪರಿಕರಗಳು ಹಾಗೂ ವಿದ್ಯಾರ್ಥಿಗಳಿಗೆ ಕಿಟ್‌ ಖರೀದಿಸಲಾಗಿದೆ. 

ಮೂರು ಕಟ್ಟಡ ನೆಲಸಮ ಅನಿವಾರ್ಯ: ಶಿಕ್ಷಣ ಸ್ಥಾಯಿ ಸಮಿತಿಯ ಪರಿಶೀಲನೆಯಂತೆ ಪಾಲಿಕೆಯ ಮೂರು ಶಾಲೆ, ಕಾಲೇಜು ಕಟ್ಟಡಗಳನ್ನು ಅನಿವಾರ್ಯವಾಗಿ ಕೆಡವಬೇಕಾಗಿದೆ. ತಿಮ್ಮಯ್ಯ ರಸ್ತೆ, ಬ್ರಾಡ್‌ವೇ ಹಾಗೂ ಟಸ್ಕರ್‌ ಟೌನ್‌ನಲ್ಲಿರುವ ಶಾಲಾ ಕಟ್ಟಡಗಳು ಸಂಪೂರ್ಣವಾಗಿ ಶಿಥಿಲವಾಗಿರುವ ಹಿನ್ನೆಲೆಯಲ್ಲಿ, ಅವುಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಬೇಕಾಗಿದೆ. ಟಸ್ಕರ್‌ ಟೌನ್‌ನ ಕಟ್ಟಡ 120 ವರ್ಷ ಹಳೆಯದಾಗಿದ್ದು, ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ.

ಪ್ರತ್ಯೇಕ ಇಂಜಿನಿಯರಿಂಗ್‌ ಸೆಲ್‌ಗೆ ಮನವಿ: ಪಾಲಿಕೆಯ ಶಾಲೆ, ಕಾಲೇಜುಗಳ ಕಟ್ಟಡಗಳ ಪರಿಶೀಲನೆ ಹಾಗೂ ಶೀಘ್ರ ದುರಸ್ತಿ ಕಾರ್ಯಕ್ಕಾಗಿ ಶಿಕ್ಷಣ ವಿಭಾಗಕ್ಕೆ ಪ್ರತ್ಯೇಕ ಇಂಜಿನಿಯರಿಂಗ್‌ ವಿಭಾಗ ಅಗತ್ಯವಿದೆ. ಆ ಹಿನ್ನೆಲೆಯಲ್ಲಿ ಪ್ರತ್ಯೇಕ ವಿಭಾಗ ರಚಿಸುವಂತೆ ಶಿಕ್ಷಣ ಸ್ಥಾಯಿ ಸಮಿತಿಯು ಪಾಲಿಕೆ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದೆ. ಪ್ರತ್ಯೇಕ ವಿಭಾಗದಿಂದ ಕಟ್ಟಡದ ಗುಣಮಟ್ಟ ಪರಿಶೀಲನೆ, ದುರಸ್ತಿ ಕುರಿತು ಯೋಜನೆ ರೂಪಿಸಲು, ಟೆಂಡರ್‌ ಪ್ರಕ್ರಿಯೆ ನಡೆಸಿ ಶೀಘ್ರ ಕಾಮಗಾರಿ ನಡೆಸಲು ಅನುಕೂಲವಾಗುತ್ತದೆ ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖೀಸಲಾಗಿದೆ.

ರೋಶಿನಿ ಯೋಜನೆ ಜಾರಿಗೆ ಪಾಲಿಕೆಯ ಶಾಲೆ, ಕಾಲೇಜು ಕಟ್ಟಡಗಳ ದೃಢತೆ ಅಡ್ಡಿಯಾಗಿದೆ. ಹೀಗಾಗಿ ಕಟ್ಟಡಗಳ ದುರಸ್ತಿಗೆ ಯೋಜನೆ ರೂಪಿಸಿದ್ದು, ಬಜೆಟ್‌ನಲ್ಲಿ 100 ಕೋಟಿ ರೂ. ಮೀಸಲಿಡಲು ಕೋರಲಾಗಿದೆ. 
-ಇಮ್ರಾನ್‌ ಪಾಷ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next