Advertisement

ಓ ಗುಲಾಬಿಯೇ…

06:00 AM Oct 17, 2018 | |

ಈಜಿಪ್ತಿನ ಖ್ಯಾತ ರಾಣಿ ಕ್ಲಿಯೋಪಾತ್ರಳ ಸೌಂದರ್ಯ ಗುಲಾಬಿ ಜಲದಲ್ಲಿ ಅಡಗಿತ್ತು. ದೇಹ ಮತ್ತು ಮನಸ್ಸಿನ ಆಹ್ಲಾದ, ಆರೋಗ್ಯಕ್ಕಾಗಿ ಮೈಕೆಲೆಂಜೆಲೋ, ಗುಲಾಬಿ ಜಲದ ಚಹಾ ಸವಿಯುತ್ತಿದ್ದುದು ಚರಿತ್ರೆ. ಮೊಘಲರ ರಾಣಿಯರು ಗುಲಾಬಿ ಜಲವನ್ನು ಹಾಲು, ಜೇನು, ಸಮುದ್ರ ಉಪ್ಪು ಇತ್ಯಾದಿಗಳ ಜೊತೆ ಬಳಸಿ, ಸೌಂದರ್ಯವರ್ಧಕ ಹಾಗೂ ಸೌಂದರ್ಯ ರಕ್ಷಕಗಳನ್ನು ಬಳಸುತ್ತಿದ್ದುದು ಐತಿಹ್ಯ. ಇಂಥ ಗುಲಾಬಿ ಜಲವನ್ನು ಮನೆಯಲ್ಲಿಯೇ ತಯಾರಿಸೋದು ಹೇಗೆ ಗೊತ್ತಾ? 

Advertisement

ಬೇಕಾಗುವ ಸಾಮಗ್ರಿ: 8-10 ತಾಜಾ ಗುಲಾಬಿ ಹೂಗಳು, 1ರಿಂದ ಒಂದೂವರೆ ಲೀಟರ್‌ನಷ್ಟು ಡಿಸ್ಟಿಲ್ಡ್‌ ವಾಟರ್‌ (ಭಟ್ಟಿ ಇಳಿಸಿದ ಶುದ್ಧ ನೀರು)

ಮಾಡುವ ವಿಧಾನ: ಮೊದಲು ಒಂದು ಪಾತ್ರೆಯಲ್ಲಿ ಗುಲಾಬಿ ಹೂವುಗಳ ಪಕಳೆಗಳನ್ನು ತೆಗೆದುಕೊಂಡು, ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ನಂತರ, ಒಂದು ಮಣ್ಣಿನ ಗಡಿಗೆಯಲ್ಲಿ ಈ ಗುಲಾಬಿ ದಳಗಳನ್ನು ತೆಗೆದುಕೊಂಡು, ಅದರಲ್ಲಿ ನೀರು ಹಾಕಿ. ಪಾತ್ರೆಯನ್ನು ಮುಚ್ಚಿ, ಸಣ್ಣ ಉರಿಯಲ್ಲಿ ಬಿಸಿ ಮಾಡಿ. ಹೀಗೆ ಬಿಸಿಯಾದ ಗುಲಾಬಿಯ ಪಕಳೆಗಳು ಬಣ್ಣ ಕಳೆದುಕೊಳ್ಳುವವರೆಗೆ ಬಿಸಿ ಮಾಡಿ. ನಂತರ ಸೋಸಿ, ಗುಲಾಬಿ ಜಲವನ್ನು ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿಡಿ. 

ಸೌಂದರ್ಯವರ್ಧಕವಾಗಿ ಗುಲಾಬಿ ಜಲ
– ಮೇಕಪ್‌ ರಿಮೂವರ್‌
ಎರಡು ಚಮಚ ಗುಲಾಬಿ ಜಲಕ್ಕೆ 1 ಚಮಚ ಬಿಸಿ ಮಾಡಿದ ಕೊಬ್ಬರಿ ಎಣ್ಣೆ ಬೆರೆಸಿ, ಹತ್ತಿಯ ಉಂಡೆಯಲ್ಲಿ ಅದ್ದಿ, ಮುಖದ ಮೇಕಪ್‌ ತೆಗೆಯಲು ಉಪಯೋಗಿಸಬಹುದು. 
– ಬಾಡಿ ಮಾಯಿಶ್ಚರೈಸರ್‌
20 ಚಮಚ ಬಾದಾಮಿ ತೈಲಕ್ಕೆ, 15 ಚಮಚ ಶುದ್ಧ ಗುಲಾಬಿ ಜಲವನ್ನು ಬೆರೆಸಿ, ಮೈಗೆ ಲೇಪಿಸಿ ಮಾಲೀಶು ಮಾಡಿದರೆ, ಚರ್ಮದ ಹೊಳಪು ಮತ್ತು ಸ್ನಿಗ್ಧತೆ ವರ್ಧಿಸುತ್ತದೆ.
– ಮೊಡವೆ ನಿವಾರಕ
 10 ಚಮಚ ಗುಲಾಬಿಜಲ, 10 ಚಮಚ ಕಡಲೆಹಿಟ್ಟು, 2 ಚಮಚ ಕಿತ್ತಳೆ ರಸ, 1/2 ಚಮಚ ಗ್ಲಿಸರಿನ್‌ ಹಾಗೂ 2 ಚಿಟಿಕೆ ಅರಿಶಿನವನ್ನು ಚೆನ್ನಾಗಿ ಮಿಶ್ರಣ ಮಾಡಿ, ಫೇಸ್‌ ಕ್ರೀಮ್‌ ತಯಾರಿಸಿ. ಮಿಶ್ರಣ ದಪ್ಪವಾಗಿದ್ದರೆ ಸ್ವಲ್ಪ ಗುಲಾಬಿ ಜಲ ಬೆರೆಸಿ, ತೆಳ್ಳಗೆ ಮಾಡಿಕೊಳ್ಳಿ. ಇದನ್ನು ಮೊಡವೆಯ ಮೇಲೆ ಲೇಪಿಸಿ 15 ನಿಮಿಷ ಬಿಟ್ಟು ಮುಖ ತೊಳೆಯಿರಿ. ನಂತರ ಸ್ಕಿನ್‌ ಟೋನರ್‌ ಆಗಿ ಗುಲಾಬಿ ಜಲ ಲೇಪಿಸಿದರೆ, ಮೊಡವೆ, ಕಲೆ ನಿವಾರಣೆಯಾಗುತ್ತದೆ.
– ಕಪ್ಪು ವರ್ತುಲ ನಿವಾರಣೆಗೆ
ಮೂರು ಚಮಚ ಗುಲಾಬಿ ಜಲದ ಜೊತೆಗೆ 2 ಚಮಚ ಸೌತೆಕಾಯಿ ರಸ ಹಾಗೂ 2 ಚಮಚ ಜೇನು ಬೆರೆಸಿ ಹತ್ತಿಯ ಉಂಡೆಯಲ್ಲಿ ಅದ್ದಿ ಲೇಪಿಸಿದರೆ ಕಣ್ಣಿನ ಸುತ್ತಲಿನ ಕಪ್ಪು ವರ್ತುಲ ನಿವಾರಣೆಯಾಗುತ್ತದೆ. 

 ಡಾ. ಅನುರಾಧಾ ಕಾಮತ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next