ನೆಲಮಂಗಲ: ಶಾಲೆ ಕಾಲೇಜುಗಳ ಸಮೀಪ ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ವಿದ್ಯಾರ್ಥಿಗಳಿಂದ ಗುಲಾಬಿ ಚಳವಳಿ ನಡೆಸಲಾಗಿದ್ದು , ಅಂಗಡಿ ಮಾಲೀಕರು ಜಾಗೃತ ರಾಗದಿದ್ದರೆ ಕಾನೂನು ಕ್ರಮ ಕೈಗೊಳ್ಳ ಲಾಗುತ್ತದೆ ಎಂದು ಡಿಎಚ್‌ಒ ಡಾ. ಮಂಜುಳ ಎಚ್ಚರಿಕೆ ನೀಡಿದರು.
ಪಟ್ಟಣದ ಪವಾಡ ಶ್ರೀ ಬಸವಣ್ಣ ದೇವರ ಮಠದ ಅವರಣದಲ್ಲಿ ಆಯೋ ಜಿಸಿದ್ದ ಗುಲಾಬಿ ಚಳವಳಿ ಜಾಗೃತಿ ಜಾಥಾ ಉದ್ದೇಶಿಸಿ ಮಾತನಾಡಿದರು. ಆಧುನಿಕತೆಯ ದಿನಗಳಲ್ಲಿ ಪುರುಷರಜತೆಗೆ ಮಹಿಳೆಯರು ತಂಬಾಕು, ಸಿಗರೇಟ್ ಸೇವಿಸುತ್ತಿದ್ದಾರೆ. ಇದರಿಂದ ಜನಿಸುವ ಮಕ್ಕಳ ಬೆಳವಣಿಗೆಯ ಮೇಲೂ ಪರಿಣಾಮ ಬೀರಲಿದೆ. ಅನಾ ರೋಗ್ಯಕ್ಕೂ ಕಾರಣವಾಗುವ ಧೂಮ ಪಾನ ಸೇವನೆಯಿಂದ ದೂರವಿದ್ದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಂಬಾಕು ನಿಯಂತ್ರಣಾಧಿಕಾರಿ ಡಾ.ಧರ್ಮೇಂದ್ರ ಮಾತನಾಡಿ, ತಂಬಾಕು ಉತ್ಪನ್ನಗಳ ಸೇವನೆಯಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಸಮಸ್ಯೆಗಳಿಗೂ ಕಾರಣ ವಾಗಬಹುದು. ದೇಶದಲ್ಲಿ ಪ್ರತಿದಿನ 2500 ಮಂದಿ ತಂಬಾಕು ಉತ್ಪನ್ನಗಳ ಸೇವನೆಯಿಂದ ಮೃತಪಡುತ್ತಿದ್ದಾರೆ ಎನ್ನುವುದು ಸಮೀಕ್ಷೆಯಿಂದ ದೃಢಪಟ್ಟಿದೆ ಎಂದು ತಿಳಿಸಿದರು.
ಗುಲಾಬಿ ನೀಡಿದ ವಿದ್ಯಾರ್ಥಿಗಳು : ಶ್ರೀ ಬಸವೇಶ್ವರ ಸಮೂಹ ಶಿಕ್ಷಣ ಸಂಸ್ಥೆಗಳಿರುವ ರಸ್ತೆಯಲ್ಲಿನ ಚಿಲ್ಲರೆ ಅಂಗಡಿಗಳ ಬಳಿ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ತೆರಳಿದ ವಿದ್ಯಾರ್ಥಿಗಳು, ತಂಬಾಕು ಉತ್ಪನ್ನಗಳ ಮಾರಾಟ ಮಾಡದಂತೆ ಅಂಗಡಿ ಮಾಲೀಕರಿಗೆ ಗುಲಾಬಿ ನೀಡಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ಘಟಕದ ಸಲಹೆಗಾರ ಸಂಪತ್, ವಿದ್ಯಾ, ತಾಲೂಕು ವೈದ್ಯಾಧಿಕಾರಿ ಡಾ.ಹರೀಶ್, ಆರೋಗ್ಯ ನಿರೀಕ್ಷಕ ಪ್ರತೀಪ್, ಶೈಲೇಂದ್ರ,ಪುಟ್ಟರಂಗೇಗೌಡ, ಹೇಮಂತ್, ಆನಂದ್, ಬಸವೇಶ್ವರ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಸತೀಶ್, ರೂಪಿಣಿ ಮತ್ತಿತರರು ಉಪಸ್ಥಿತರಿದ್ದರು.