ಇತ್ತೀಚೆಗಷ್ಟೇ ಬಿಗ್‌ಬಾಸ್ ಮನೆಯಿಂದ ಗೆಲುವಿನ ನಗುವಿನೊಂದಿಗೆ ಹೊರಬಂದಿರುವ ರೂಪೇಶ್ ಶೆಟ್ಟಿ, ಸಂಕ್ರಾಂತಿ ವೇಳೆಗೆ ಬಿಗ್ ಸ್ಕ್ರೀನ್‌ನಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ರೂಪೇಶ್ ಶೆಟ್ಟಿ ನಾಯನಾಗಿ ಅಭಿನಯಿಸಿರುವ “ಮಂಕುಭಾಯ್ ಫಾಕ್ಸಿ ರಾಣಿ’ ಸಿನಿಮಾ ಇದೇ, ಜ. 13ಕ್ಕೆ ಬಿಡುಗಡೆಯಾಗುತ್ತಿದೆ. ಸದ್ಯ “ಮಂಕುಭಾಯ್ ಫಾಕ್ಸಿ ರಾಣಿ’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ ಸಿನಿಮಾದ ಮೊದಲ ಟ್ರೇಲರ್ ಬಿಡುಗಡೆ ಮಾಡಿದೆ.
ಇದೇ ವೇಳೆ ಸಿನಿಮಾದ ಬಗ್ಗೆ ಮಾತನಾಡಿದ ರೂಪೇಶ್ ಶೆಟ್ಟಿ, “ಕನ್ನಡದಲ್ಲಿ ಇಲ್ಲಿಯವರೆಗೆ ನಾಲ್ಕು ಸಿನಿಮಾಗಳಲ್ಲಿ ಬೇರೆ ಬೇರೆ ನಟರ ಜೊತೆ ಅಭಿನಯಿಸಿದ್ದೇನೆ. ಇದು ನನ್ನ ಐದನೇ ಸಿನಿಮಾ. ಈ ಸಿನಿಮಾದಲ್ಲಿ ನಾನು ಪೂರ್ಣ ಪ್ರಮಾಣದ ಹೀರೋ ಆಗಿ ಕಾಣಿಸಿಕೊಂಡಿದ್ದೇನೆ. ಸುಮಾರು ಮೂರು ವರ್ಷಗಳ ಹಿಂದೆ ಈ ಸಿನಿಮಾದ ಕೆಲಸಗಳು ಶುರುವಾಯಿತು. ಆದರೆ ಕೋವಿಡ್ ಮತ್ತಿತರ ಕಾರಣಗಳಿಂದ ಸಿನಿಮಾ ರಿಲೀಸ್ ತಡವಾಗುತ್ತ ಹೋಯಿತು. ಈಗ ಸಿನಿಮಾ ರಿಲೀಸ್ ಹಂತಕ್ಕೆ ಬಂದಿದೆ. ಯಕ್ಷಗಾನದಲ್ಲಿ ಸಿಂಹದ ಪಾತ್ರ ಹಾಕುವ ಕಲಾವಿದನಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇನೆ. ಲವ್ ಮಾಡಬೇಕೆಂದು ಹೊರಡುವವನ ಜೀವನದಲ್ಲಿ ಏನೇನು ನಡೆಯುತ್ತದೆ ಎಂಬುದರ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ. ಒಂದಷ್ಟು ಕಾಮಿಡಿ, ಎಮೋಶನ್ಸ್ ಜೊತೆಯಾಗಿಟ್ಟುಕೊಂಡು ಸಿನಿಮಾ ಬಂದಿದೆ’ ಎಂದು “ಮಂಕುಭಾಯ್ ಫಾಕ್ಸಿ ರಾಣಿ’ ಸಿನಿಮಾದ ಕಥೆ ಮತ್ತು ಪಾತ್ರ ಪರಿಚಯ ಮಾಡಿಕೊಟ್ಟರು.
ಇನ್ನು “ಮಂಕುಭಾಯ್ ಫಾಕ್ಸಿ ರಾಣಿ’ ಸಿನಿಮಾದಲ್ಲಿ ಗೀತಾ ಭಾರತಿ ಭಟ್ ನಾಯಕಿಯಾಗಿ ಅಭಿನಯಿಸಿದ್ದಾರೆ. “ಸುಮಾರು ಮೂರು ವರ್ಷದ ಹಿಂದೆ ಅಭಿನಯಿಸಿದ ಈ ಪಾತ್ರ ತುಂಬಾ ಖುಷಿಕೊಟ್ಟಿದೆ. ಸ್ಥೂಲಕಾಯದ ಹುಡುಗಿಯೊಬ್ಬಳು ಹೇಗೆಲ್ಲ ಅಪಹಾಸ್ಯಕ್ಕೆ ಈಡಾಗುತ್ತಾಳೆ. ಅವರ ಜೀವನ ಹೇಗಿರುತ್ತದೆ ಎಂಬುದನ್ನು ನನ್ನ ಪಾತ್ರ ತೋರಿಸುತ್ತದೆ’ ಎಂಬುದು ನಾಯಕಿ ಗೀತಾ ಮಾತು.
ಉಳಿದಂತೆ ಪಂಚಮಿ, ಅರ್ಜುನ್ ಕಜೆ, ಪ್ರಕಾಶ್ ತುಮ್ಮಿನಾಡ್, ಸ್ವರಾಜ್ ಶೆಟ್ಟಿ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಕೆಲವು ತುಳು ಸಿನಿಮಾಗಳಲ್ಲಿ, ಒಂದಷ್ಟು ಶಾರ್ಟ್ ಫಿಲಂ ಮತ್ತು ಮ್ಯೂಸಿಕ್ ಆಲ್ಬಂಗಳಲ್ಲಿ ಕೆಲಸ ಮಾಡಿದ ಅನುಭವವಿರುವ ಮಂಗಳೂರು ಮೂಲದ ಗಗನ್. ಎಂ “ಮಂಕುಭಾಯ್ ಫಾಕ್ಸಿ ರಾಣಿ’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಜೋಶ್ವ ಜೈಶಾನ್ ಕ್ರಾಸ್ತಾ ನಿರ್ಮಾಣದಲ್ಲಿ ಮೂಡಿಬಂದಿರುವ “ಮಂಕುಭಾಯ್ ಫಾಕ್ಸಿ ರಾಣಿ’ ಸಿನಿಮಾಕ್ಕೆ ಎ. ಕೆ ಷಹಜಹಾನ್ ಛಾಯಾಗ್ರಹಣ, ಸುಶಾಂತ್ ಶೆಟ್ಟಿ, ಪ್ರಜ್ವಲ್ ಸುವರ್ಣ ಸಂಕಲನವಿದೆ. ದಕ್ಷಿಣ ಕನ್ನಡ ಪರಿಸರದಲ್ಲಿ ಇಡೀ ಸಿನಿಮಾದ ಕಥೆ ನಡೆಯುವುದರಿಂದ ವಿಟ್ಲ, ಪುತ್ತೂರು, ಮಂಗಳೂರು ಸುತ್ತಮುತ್ತ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ.
ಜಿ.ಎಸ್.ಕಾರ್ತಿಕ ಸುಧನ್