Advertisement
ಪತ್ರಕರ್ತರೊಂದಿಗೆ ಮಾತನಾಡಿದ ರೂಪಾ, ಇಲ್ಲಿ ಭಾವನೆಗಳ ಪ್ರಶ್ನೆ ಉದ್ಭವಿಸುವುದಿಲ್ಲ. ಸರಕಾರದ ಆದೇಶವನ್ನು ಪಾಲಿಸುವುದು ನಮ್ಮ ಕರ್ತವ್ಯ. ಪೊಲೀಸ್ ಇಲಾಖೆಯಲ್ಲಿ ಒಳ್ಳೆಯ ವಿಭಾಗ, ಕೆಟ್ಟ ವಿಭಾಗ ಎಂಬುದಿಲ್ಲ. ಎಲ್ಲವೂ ಒಳ್ಳೆಯ ವಿಭಾಗಗಳೇ. ಸರಕಾರ ನೀಡಿರುವ ವರ್ಗಾವಣೆಯನ್ನು ಶಿಕ್ಷೆ ಎಂದು ಪರಿಗಣಿಸುವುದಿಲ್ಲ. ಇದೊಂದು ಸಾಮಾನ್ಯ ಪ್ರಕ್ರಿಯೆ. ಅದನ್ನು ಪಾಲಿಸಿದ್ದೇನೆ ಅಷ್ಟೆ ಎಂದರು.
ಬಂಧೀಖಾನೆ ಇಲಾಖೆಯ ಎಡಿಜಿಪಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ಎನ್.ಎಸ್. ಮೇಘರಿಕ್ ಮಂಗಳವಾರ ಮಧ್ಯಾಹ್ನ ಅಧಿಕಾರ ಸ್ವೀಕರಿಸಿದರು. ಜೈಲಿನ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ವರ್ಗಾವಣೆಗೊಂಡ ಡಿಜಿ ಎಚ್.ಎನ್. ಸತ್ಯನಾರಾಯಣ ರಾವ್ ಅವರು ಮೇಘರಿಕ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಅನಂತರ ಇಬ್ಬರು ಅಧಿಕಾರಿಗಳು ಅರ್ಧ ಗಂಟೆಗೂ ಅಧಿಕ ಕಾಲ ಸಮಾಲೋಚನೆ ನಡೆಸಿದರು. ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಎನ್.ಎಸ್. ಮೇಘರಿಕ್, ಸರಕಾರದ ಆದೇಶದಂತೆ ಅಧಿಕಾರ ಸ್ವೀಕರಿಸಿದ್ದೇನೆ. ಜತೆಗೆ ಇದೇ ಪರಪ್ಪನ ಅಗ್ರಹಾರ ಕಾರಾಗೃಹದ ಹಿರಿಯ ಐಪಿಎಸ್ ಅಧಿಕಾರಿಗಳ ನೇತೃತ್ವದ ಸಮಿತಿಯ ಸದಸ್ಯನಾಗಿದ್ದೆ. ಹೀಗಾಗಿ ಕಾರಾಗೃಹ ಇಲಾಖೆಯ ಕಾರ್ಯವೈಖರಿ ಬಗ್ಗೆ ಸ್ವಲ್ಪ ಮಟ್ಟಿಗೆ ಅನುಭವ ಇದೆ. ಕಾರಾಗೃಹದಲ್ಲಿ ನಡೆದ ಅಕ್ರಮದ ಬಗ್ಗೆ ಮಾಹಿತಿ ಇದೆ. ಅಕ್ರಮದ ಬಗ್ಗೆ ಈಗಾಗಲೇ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ತನಿಖೆ ನಡೆಸುತ್ತಿದ್ದು, ಅವರಿಗೆ ಸಹಕರಿಸುತ್ತೇನೆ ಎಂದರು.
Related Articles
ರೂಪಾ ಡಿ. ಮೌದ್ಗಿಲ್ ಅವರ ಜಾಗಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಡಿಐಜಿ ಎಚ್.ಎಸ್. ರೇವಣ್ಣ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶಿಸಿದೆ. ಇದರೊಂದಿಗೆ ಪರಪ್ಪನ ಅಗ್ರಹಾರ ಕಾರಾಗೃಹದ ಮುಖ್ಯಅಧೀಕ್ಷರಾಗಿಯೂ ಹೆಚ್ಚುವರಿ ಹೊಣೆ ನೀಡಲಾಗಿದೆ. ಈ ಮಧ್ಯೆ ಜೈಲಿನ ಅಧೀಕ್ಷಕಿ ಅನಿತಾ ಮಂಗಳವಾರ ಮುಖ್ಯ ಅಧೀಕ್ಷಕರಾಗಿ ಹೆಚ್ಚುವರಿ ಅಧಿಕಾರ ಸ್ವೀಕರಿಸಿದರು.
Advertisement