Advertisement

ಸಿರವಾರ ಪ್ರೌಢಶಾಲೆಯಲ್ಲಿ ಕೊಠಡಿ- ಶಿಕ್ಷಕರ ಅಭಾವ

11:14 AM Jul 02, 2019 | Suhan S |

ಸಿರವಾರ: ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿನಿಯರ ದಾಖಲಾತಿಯಲ್ಲಿ ಹೆಚ್ಚಳವಾಗುತ್ತಿದ್ದು, ಅದಕ್ಕೆ ತಕ್ಕಂತೆ ಕೊಠಡಿ ಮತ್ತು ಶಿಕ್ಷಕರು ಇಲ್ಲದ್ದರಿಂದ ಸಮಸ್ಯೆ ಎದುರಿಸುವಂತಾಗಿದೆ.

Advertisement

ರಾಜ್ಯ ಸರ್ಕಾರ ಪ್ರತಿ 50 ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕರು ನೇಮಿಸಬೇಕೆಂಬ ಆದೇಶವಿದೆ. ಆದರೆ ಇಲ್ಲಿನ ಶಾಲೆಯಲ್ಲಿ ಒಂದೊಂದು ತರಗತಿಗೆ 160ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದು, ಪ್ರತಿ ತರಗತಿಗೆ ಎರಡು ವಿಭಾಗ ಮಾಡಲಾಗಿದೆ. ಒಂದೊಂದು ಕೋಣೆಯಲ್ಲಿ 80ಕ್ಕೂ ಹೆಚ್ಚು ವಿದ್ಯಾರ್ಥಿನಿಯರನ್ನು ಕೂಡ್ರಿಸಿ ಪಾಠ ಮಾಡಲಾಗುತ್ತಿದೆ. ಆದರೆ ರಾಜ್ಯದಲ್ಲಿ ಶಿಕ್ಷಕರ ನೇಮಕಾತಿ ಕಡಿಮೆ ಇರುವುದರಿಂದ ಎಷ್ಟು ವಿದ್ಯಾರ್ಥಿಗಳಿದ್ದರೂ ಸಹ ಇರುವ ಶಿಕ್ಷಕರಲ್ಲಿ ಅಥವಾ ಅತಿಥಿ ಶಿಕ್ಷಕರನ್ನು ನೇಮಿಸಿ ಶಾಲೆಯನ್ನು ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.

ಹೆಚ್ಚುತ್ತಿರುವ ದಾಖಲಾತಿ: ಕಳೆದ 2018-19ನೇ ಸಾಲಿನಲ್ಲಿ 8ನೇ ತರಗತಿಗೆ 145 ವಿದ್ಯಾರ್ಥಿಗಳು, 9ನೇ ತರಗತಿಗೆ 170, 10ನೇ ತರಗತಿಗೆ 169 ವಿದ್ಯಾರ್ಥಿಗಳ ದಾಖಲಾತಿ ಇತ್ತು. ಪ್ರಸಕ್ತ 2019-20ನೇ ಶೈಕ್ಷಣಿಕ ಸಾಲಿನಲ್ಲಿ 8ನೇ ತರಗತಿಗೆ 162, 9ನೇ ತರಗತಿಗೆ 168, 10ನೇ ತರಗತಿಗೆ 170 ವಿದ್ಯಾರ್ಥಿನಿಯರು ಇದ್ದಾರೆ. ಜುಲೈ ಕೊನೆವರೆಗೂ ಪ್ರವೇಶಕ್ಕೆ ಅವಕಾಶವಿದ್ದು, ವಿದ್ಯಾರ್ಥಿನಿಯರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಸಂಖ್ಯೆ 500ರ ಗಡಿ ದಾಟಿದೆ. ಹೀಗಾಗಿ ಪ್ರತಿ ತರಗತಿಗೆ ಎರಡು ವಿಭಾಗ ಮಾಡಿ ಪಾಠ ಮಾಡಲಾಗುತ್ತಿದೆ. ಒಂದೊಂದು ತರಗತಿಯಲ್ಲಿ ಕನಿಷ್ಠ 80ಕ್ಕೂ ಅಧಿಕ ಮಕ್ಕಳನ್ನು ಕೂಡ್ರಿಸಿ ಪಾಠ ಮಾಡಲಾಗುತ್ತಿದೆ.

ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ವಿದ್ಯಾರ್ಥಿನಿಯರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದರಿಂದ ಪಟ್ಟಣವಲ್ಲದೆ ನಿಲೋಗಲ್, ಮಲ್ಲಟ, ಮಾಡಗಿರಿ ಗ್ರಾಮಗಳಲ್ಲಿ ಪ್ರೌಢಶಾಲೆಯಿದ್ದರೂ ಪಾಲಕರು ಸಿರವಾರ ಪಟ್ಟಣದ ಪ್ರೌಢಶಾಲೆಗೆ ಮಕ್ಕಳನ್ನು ದಾಖಲಿಸುತ್ತಿದ್ದಾರೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಇಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚುತ್ತಿದೆ.

ಶಿಕ್ಷಕರ ಕೊರತೆ: ಶಾಲೆಯಲ್ಲಿ ಒಬ್ಬರು ಮುಖ್ಯೋಪಾಧ್ಯಾಯರು, ಒಬ್ಬರು ಸಂಗೀತ ಶಿಕ್ಷಕರು, ಒಬ್ಬರು ಕ್ರೀಡಾ ಶಿಕ್ಷಕರು ಸೇರಿ ಒಟ್ಟು 11 ಜನ ಶಿಕ್ಷಕರಿದ್ದಾರೆ. ಪ್ರತಿ ವಿಷಯಕ್ಕೆ ಇಬ್ಬರು ಶಿಕ್ಷಕರು ಇರಬೇಕು. ಗಣಿತ, ವಿಜ್ಞಾನಕ್ಕೆ ಮಾತ್ರ ತಲಾ ಇಬ್ಬರು ಶಿಕ್ಷಕರಿದ್ದಾರೆ. ಉಳಿದಂತೆ ಕನ್ನಡ, ಇಂಗ್ಲಿಷ್‌, ಹಿಂದಿ, ಸಮಾಜ ವಿಷಯಕ್ಕೆ ಒಬ್ಬೊಬ್ಬ ಶಿಕ್ಷಕರಿದ್ದಾರೆ.

Advertisement

ಕೊಠಡಿ ಕೊರತೆ: ಶಾಲೆಯಲ್ಲಿ ಪ್ರಸ್ತುತ 6 ಕೊಠಡಿಗಳಿದ್ದು ಪ್ರತಿಯೊಂದು ತರಗತಿಯನ್ನು ಎರಡು ವಿಭಾಗಗಳಾಗಿ ವಿಭಾಗಿಸಲಾಗಿದೆ. ಸದ್ಯಕ್ಕೆ ಕೊಠಡಿಗಳು ಸರಿ ಹೋಗಿವೆ. ಇನ್ನು ಹೆಚ್ಚಿನ ವಿದ್ಯಾರ್ಥಿನಿಯರು ಪ್ರವೇಶ ಪಡೆದಲ್ಲಿ ಪ್ರತಿ ತರಗತಿಗೆ 3 ವಿಭಾಗಗಳು ಮಾಡುವುದರಿಂದ ಕೊಠಡಿಗಳ ಕೊರತೆ ಉಂಟಾಗುತ್ತದೆ. ಇಲ್ಲವಾದಲ್ಲಿ ಇರುವ ಕೊಠಡಿಗಳಲ್ಲಿ ವಿದ್ಯಾರ್ಥಿಗಳನ್ನು ಕೂಡ್ರಿಸುವುದು ಕಷ್ಟಕರವಾಗಲಿದೆ.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿಯುತ್ತಿರುವ ಇಂದಿನ ದಿನದಲ್ಲಿ ಸಿರವಾರದ ಬಾಲಕಿಯರ ಪ್ರೌಢಶಾಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ವಿದ್ಯಾರ್ಥಿನಿಯರು ಪ್ರವೇಶ ಪಡೆಯುತ್ತಿರುವುದು ಉತ್ತಮ ಬೆಳವಣಿಗೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಶಾಲೆಗೆ ಅಗತ್ಯ ಶಿಕ್ಷಕ-ಶಿಕ್ಷಕಿಯರನ್ನು ನೇಮಿಸುವ ಜೊತೆಗೆ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಕ್ರಮ ವಹಿಸಬೇಕೆಂದು ಶಿಕ್ಷಣ ಪ್ರೇಮಿಗಳು ಆಗ್ರಹಿಸಿದ್ದಾರೆ.

 

•ಮಹೇಶ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next