ಉಡುಪಿ: ಕೊರೊನಾ ಸೋಂಕಿಗೆ ಪ್ರಸ್ತುತ ಲಸಿಕೆಯ ಅಂತಿಮ ಸಿದ್ಧತೆಯಲ್ಲಿದ್ದು ಶೀಘ್ರದಲ್ಲಿ ವಿಶ್ವಾದ್ಯಂತ ಆರಂಭಿಕ ಲಸಿಕೆ ನೀಡುವ ಕಾರ್ಯಕ್ರಮ ಆರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಸಂಗ್ರಹಿಸಿಡಲು ಅಗತ್ಯವಿರುವ ಲಸಿಕಾ ಕೊಠಡಿಯನ್ನು (ವಾಕ್ ಇನ್ ಕೂಲರ್) ಸಂಪೂರ್ಣ ಸಿದ್ಧಗೊಳಿಸಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿರುವ ಈ ಕೊಠಡಿ 2.28 ಕೋಟಿ ಡೋಸ್ ಲಸಿಕೆಯನ್ನು ಸಂಗ್ರಹಿಸಿಡುವ ಸಾಮರ್ಥ್ಯ ಹೊಂದಿದೆ. ಸಂಪೂರ್ಣ ಹವಾ ನಿಯಂತ್ರಿತ ಕೊಠಡಿ ಇದಾಗಿದೆ.
ವಿಶ್ವಾದ್ಯಂತ 248ಕ್ಕೂ ಅಧಿಕ ಲಸಿಕೆ ತಯಾರಿಕಾ ಕಂಪೆನಿಗಳು ಕೋವಿಡ್ ಲಸಿಕೆ ಕಂಡು ಹಿಡಿಯುವ ಪ್ರಯತ್ನ ಮಾಡುತ್ತಿದ್ದು, ಅದರಲ್ಲಿ 197 ಲಸಿಕೆಗಳು ಪ್ರೀ ಕ್ಲಿನಿಕಲ್, 23 ಲಸಿಕೆಗಳು ಫೇಸ್ 1, 16 ಲಸಿಕೆಗಳು ಫೇಸ್ 1/2, 2 ಲಸಿಕೆಗಳು ಫೇಸ್ 2, 10 ಲಸಿಕೆಗಳು ಫೇಸ್ 3ರಲ್ಲಿ ಪರೀಕ್ಷೆಗೆ ಒಳಪಟ್ಟಿವೆ. ಇದುವರೆಗೆ ಯಾವುದೇ ಲಸಿಕೆಗೆ ಅನುಮತಿ ದೊರೆತಿಲ್ಲ.
ಕೋವಿಡ್ ಲಸಿಕೆ ತಯಾರಿಕಾ ಘಟಕದಿಂದ ಆರಂಭಗೊಂಡು, ಸಂಚಾರ ವ್ಯವಸ್ಥೆ, ಲಸಿಕೆ ಸಂಗ್ರಹ ಕೊಠಡಿಯಲ್ಲಿ ಶೇಖರಣೆ ಮತ್ತು ವಿತರಣಾ ಸ್ಥಳಕ್ಕೆ ತಲುಪುವವರೆಗೆ ಲಸಿಕೆಯನ್ನು 2ರಿಂದ 8 ಡಿಗ್ರಿವರೆಗಿನ ತಾಪಮಾನದಲ್ಲಿ ಕಾಪಾಡುವ ಅಗತ್ಯವಿದೆ.
ಇದಕ್ಕಾಗಿ ಜಿಲ್ಲೆಯಲ್ಲಿ ಈಗಾಗಲೇ ಒಟ್ಟು 77 ಕೋಲ್ಡ್ ಚೈನ್ ಸಿಸ್ಟಂ ಸ್ಥಳಗಳನ್ನು ಗುರುತಿಸಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಡಿಎಚ್‌ಒ ಡಾ| ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.