ಮಂಗಳೂರು ಹೆಂಚುಗಳು ವಿಶ್ವ ಪ್ರಸಿದ್ಧ. ತಣ್ಣಗಿನ ಸೂರಿನ ಸುಖವನ್ನು ಕೊಡುವ ಹೆಂಚುಗಳು ಕರಾವಳಿಯಲ್ಲಿ ಸ್ಥಳೀಯರಿಗೆ ಉದ್ಯೋಗದ ನೆಲೆಗಳೂ ಆಗಿದ್ದವು ಎನ್ನುವುದು ವಿಶೇಷ. ಇಡೀ ಹೆಂಚಿನ ಕಾರ್ಖಾನೆ ಮತ್ತು ಅದರ ಬದುಕಿನ ಕುರಿತು ಹಿರಿಯ ಛಾಯಾಚಿತ್ರಗ್ರಾಹಕ ಸತೀಶ್ ಇರಾ ಕಟ್ಟಿ ಕೊಟ್ಟಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲೇ ದಕ್ಷಿಣ ಕನ್ನಡ ಜಿಲ್ಲೆ ಹೆಂಚು ಉದ್ಯಮಕ್ಕೆ ಹೆಸರುವಾಸಿ. 1865ರ ಸುಮಾರಿಗೆ ಜರ್ಮನ್ ಮಿಷನರೀಸ್ ಎಂಬ ಸಂಸ್ಥೆಯು ಮಂಗಳೂರಿನಲ್ಲಿ ಮೊದಲ ಹೆಂಚಿನ ಕಾರ್ಖಾನೆಯನ್ನು ಸ್ಥಾಪಿಸಿತ್ತು.
ಮುಂದೆ ಜರ್ಮನ್ ತಂತ್ರಜ್ಞಾನವನ್ನು ಬಳಸಿಕೊಂಡು ಸ್ಥಳೀಯವಾಗಿ ಹಲವಾರು ಹೆಂಚಿನ ಕಾರ್ಖಾನೆಗಳು ಹುಟ್ಟಿಕೊಂಡವು. ಹಿಂದೆ ಮುಳಿ ಹುಲ್ಲಿಗೆ ಪರ್ಯಾಯವಾಗಿ ಮನೆಯ ಛಾವಣಿಗೆ ಬಳಕೆಯಾಗುತಿದ್ದ ಹೆಂಚು ಬಲು ಬೇಗನೆ ಜನಪ್ರಿಯತೆ ಗಳಿಸಿತ್ತು. ದೇಶ ವಿದೇಶಗಳಿಗೆ ಮಂಗಳೂರಿನಿಂದ ರಫ್ತಾಗುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಅವಿಭಜಿತ ದಕ್ಷಿಣ ಕನ್ನಡದ ಜನರಿಗೆ ಉದ್ಯೋಗ ಕಲ್ಪಿಸಿದ ಉದ್ಯಮ ಇದು.ಬರಬರುತ್ತಾ ನಗರಗಳು, ಹಳ್ಳಿಗಳು ಅಭಿವೃದ್ಧಿಯಾದಂತೆ ಹೆಂಚು ಛಾವಣಿಯ ಬದಲು ಆರ್.ಸಿ.ಸಿ. ಮನೆಗಳೂ ರೂಪಾಂತರಗೊಂಡವು.
ಹೆಂಚಿನ ಕಾರ್ಖಾನೆಗಳು ಬದಿಗೆ ಸರಿಯತೊಡಗಿದವು. ಜನರು ಪರ್ಯಾಯ ಉದ್ಯೋಗದತ್ತ ಮುಖಮಾಡಿದರು.ಈಗ ಬೆರಳೆಣಿಕೆಯ ಹೆಂಚಿನ ಕಾರ್ಖಾನೆಗಳಿವೆ. ನೂರಿನ್ನೂರು ಕಾರ್ಮಿಕರ ಬದಲು ಕೆಲವೇ ಕಾರ್ಮಿಕರನ್ನಿರಿಸಿ ಉದ್ಯಮ ನಡೆಸಲಾಗುತ್ತಿದೆ. ಇಲ್ಲಿ ಹೆಂಚಿನೊಂದಿಗೆ ಒಲೆ, ತುಳಸೀಕಟ್ಟೆ ಇತ್ಯಾದಿ ಪರ್ಯಾಯ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಹೆಂಚು ಉದ್ಯಮದ ವೈಭವದ ಪಳೆಯುಳಿಕೆಗಳಂತೆ ಭಾಸವಾಗುವ ಈ ಕಾರ್ಖಾನೆಗಳು ಜಿಲ್ಲೆಯ ಗತ ಕಾಲವನ್ನು ನೆನಪಿಸುತ್ತ ನಿಟ್ಟುಸಿರುಬಿಡುತ್ತಿವೆ. ಗಂಜಿಮಠದಲ್ಲಿ ಮೂರು ಹೆಂಚಿನ ಕಾರ್ಖಾನೆಗಳಿದ್ದು ಸುಮಾರು 200ಮಂದಿ ಕಾರ್ಮಿಕರು ದುಡಿಯುತ್ತಿದ್ದಾರೆ. ಈಗ ಜಿಲ್ಲೆಯಾದ್ಯಂತ ಹೆಂಚು ಪೂರೈಕೆ ಮಾಡಬೇಕಾಗಿರುವುದರಿಂದ ಬೇಡಿಕೆ ಚೆನ್ನಾಗಿದೆ ಎನ್ನುತ್ತಾರೆ ಪೂಂಜಾ ಟೈಲ್ಸ್‌ನ ಮಾಲಕರು.
ಮನಸ್ಸು ಹದಗೊಳ್ಳಬೇಕು ಬದುಕಿ ಗಾಗಿ; ಮಾಡಿಗೂ ಸಹ. ಮಣ್ಣು ಹದಗೊಂಡು ರೂಪು ಪಡೆದಾಗ ಮಾಡಿಗೆ ಹೊದಿಕೆಯಾಗುವ ಹೆಂಚು ಆಗಬಲ್ಲದು !
ಮಣ್ಣು ಹದಗೊಳ್ಳುವ ವೇದಿಕೆ ಇದು. ಯಂತ್ರ ದಿಂದ ಹದಗೊಂಡು ಹೊರಬರದೆ ಹೆಂಚು ಆಗಿ ಮಾರ್ಪಡದು.
ಇದು ಬೆಂಕಿ-ಬೆಳಕು. ಹೆಂಚುಗಳು ಬೇಯುವುದು ಇದೇ ಬೆಂಕಿಯಲ್ಲಿ ; ಹಲವರ ಬಾಳು ಬೆಳಗುವುದೂ ಇದೇ ಬೆಳಕಿನಲ್ಲಿ !
ಬದುಕಿನ ಒಲೆಗೆ ಇಂಧನ ಎಷ್ಟಿದ್ದರೂ ಸಾಕಾಗದು, ಹಾಗೆಯೇ ಈ ಒಲೆಯೂ ಸಹ. ಕಟ್ಟಿಗೆ ರಾಶಿ ಸದಾ
ಇರಬೇಕು.
ಹಸಿ ಹೆಂಚು ಅನುಭವದ ಮೂಸೆಯಲ್ಲಿ ಸಿಕ್ಕು ಮಾಗುವ ಬದುಕಿನಂತೆಯೇ ಹೊಸ ಬಣ್ಣ
ಪಡೆಯಲು ಎಷ್ಟೊಂದು ತಯಾರಿ !
ಆದ ಹೆಂಚುಗಳ ಕ್ರಮಬದ್ಧವಾದ ಜೋಡಣೆ. ಒಂದು ಹೆಂಚೂ ಹಾಳಾಗದಂತೆ ವಹಿಸುವ ಜಾಗ್ರತೆ ಅನನ್ಯ. ಅದೇ ಅವರಿಗೆ ಹಣ ಮತ್ತು ಬದುಕು.
ಬದುಕಿನ ಖುಷಿಯೇ ಇದು. ಮಾಡುವ ಕಾರ್ಯದಲ್ಲಿ ಸಂತೃಪ್ತಿ ಕಾಣುವುದು. ಅದಕ್ಕಿಂತ ದೊಡ್ಡ ಸೊಬಗು ಏನಿದೆ?
ಯಾರ ಮನೆಯ ಭಾಗ್ಯವೋ? ಸಿದ್ಧವಾಗಿದೆ ಹೆಂಚುಗಳು ಹೊರಡಲಿಕ್ಕೆ, ಮತಾöರದೋ ಮನೆಯ ಮಾಡು ಆಗಲಿಕ್ಕೆ.
ಹೆಂಚಿನ ಉದ್ಯಮಕ್ಕೆ ಮೌಲ್ಯ ತಂದುಕೊಟ್ಟ ಕಾರ್ಖಾನೆ ಗಳೆಲ್ಲ ಮುಖ್ಯವಾಹಿನಿ ಯಿಂದ ಬದಿಗೆ ಸರಿಯುತ್ತಿವೆ.