ಲ್ಯುಸೈಲ್: ಕತಾರ್ ನಲ್ಲಿ ನಡೆದ ಫಿಫಾ ವಿಶ್ವಕಪ್ ಫೈನಲ್ ನಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಪೆನಾಲ್ಟಿಯಲ್ಲಿ ಸೋಲಿಸಿದ ಅರ್ಜೆಂಟೀನಾ ಗೆದ್ದು ಬೀಗಿತು. ದಕ್ಷಿಣ ಅಮೆರಿಕಾದ ತಂಡದ ವಿಜಯಕ್ಕೆ ಪ್ರಪಂಚದಾದ್ಯಂತ ಪ್ರಶಂಸೆ ಕೇಳಿಬಂದಿದೆ.
ಅರ್ಜೆಂಟೀನಾದ ಗೆಲುವನ್ನು ವಿಶ್ವದ ವಿವಿಧ ಭಾಗಗಳಲ್ಲಿ ಜನರು ತಮ್ಮದೇ ಆದ ರೀತಿಯಲ್ಲಿ ಆಚರಿಸಿದರು. ಲೆಜೆಂಡರಿ ಫುಟ್ಬಾಲರ್, ಬ್ರೆಜಿಲ್ ನ ಮಾಜಿ ಆಟಗಾರ ರೊನಾಲ್ಡೊ ನಜಾರಿಯೊ ಅವರು ಅರ್ಜೆಂಟೀನಾ ಮತ್ತು ಲಿಯೋನೆಲ್ ಮೆಸ್ಸಿ ಅವರ ಸಾಧನೆಯನ್ನು ಟ್ವಿಟರ್ ಮೂಲಕ ಶ್ಲಾಘಿಸಿದ್ದಾರೆ.
ಫುಟ್ಬಾಲ್ ನಲ್ಲಿ ಬ್ರೆಜಿಲ್ ಮತ್ತು ಅರ್ಜೆಂಟೀನಾ ಅತ್ಯಂತ ತೀವ್ರ ಪ್ರತಿಸ್ಪರ್ಧಿಗಳಾಗಿದ್ದರೂ, ಮೆಸ್ಸಿ ಅಂತಿಮವಾಗಿ ವಿಶ್ವಕಪ್ ಅನ್ನು ಎತ್ತಿ ಹಿಡಿದಿರುವುದನ್ನು ಬ್ರೆಜಿಲಿಯನ್ನರು ಸಹ ಸಂತೋಷಪಟ್ಟಿದ್ದಾರೆ ಎಂದು ರೊನಾಲ್ಡೊ ಒಪ್ಪಿಕೊಂಡರು.
ಇದನ್ನೂ ಓದಿ:25 ವರ್ಷದಲ್ಲೇ ಅತೀ ಹೆಚ್ಚು..: ಗೂಗಲ್ ಸರ್ಚ್ ನಲ್ಲೂ ದಾಖಲೆ ಬರೆದ ಫುಟ್ಬಾಲ್ ಫೈನಲ್
“ಈ ವ್ಯಕ್ತಿಯ ಫುಟ್ಬಾಲ್ ಯಾವುದೇ ರೈವಲ್ರಿಯನ್ನೂ ಮೂಲೆಗೆ ಎಸೆಯುತ್ತದೆ. ಬಹಳಷ್ಟು ಬ್ರೆಜಿಲಿಯನ್ನರು ಮತ್ತು ಪ್ರಪಂಚದಾದ್ಯಂತದ ಜನರು ಈ ಮಿಂಚಿನ ಫೈನಲ್ ನಲ್ಲಿ ಮೆಸ್ಸಿಗಾಗಿ ಬೆಂಬಲ ನೀಡುವುದನ್ನು ನಾನು ನೋಡಿದೆ. ಪ್ರತಿಭೆಗೆ ಅರ್ಹವಾದ ವಿದಾಯ, ವಿಶ್ವ ಕಪ್ ತಾರೆಯಾಗಿರುವುದಕ್ಕಿಂತಲೂ ಮೀರಿ, ಒಂದು ಯುಗದ ನಾಯಕತ್ವ ವಹಿಸಿದ್ದರು. ಅಭಿನಂದನೆಗಳು ಮೆಸ್ಸಿ!” ಎಂದು ರೊನಾಲ್ಡೊ ಟ್ವಿಟರ್ ನಲ್ಲಿ ಬರೆದಿದ್ದಾರೆ.