Advertisement

ಕುಡಿವ ನೀರಿಗೆ ತತ್ವಾರ!

11:01 AM Feb 21, 2019 | |

ರೋಣ: ಬೇಸಿಗೆ ಆರಂಭಕ್ಕೂ ಮುನ್ನವೇ ತಾಲೂಕಿನಲ್ಲಿ ಕುಡಿಯುವ ನೀರು-ಮೇವಿನ ತೊಂದರೆ ಎದುರಾಗಿದೆ. 7ರಿಂದ 10 ದಿನಕ್ಕೊಮ್ಮೆ ಬಿಡುವ ನಲ್ಲಿ ನೀರನ್ನೇ ಎದುರು ನೋಡುವಂಥ ಸ್ಥಿತಿ ನಿರ್ಮಾಣವಾಗಿದೆ.

Advertisement

35 ಗ್ರಾಮ ಪಂಚಾಯತ್‌ಗಳು, 98 ಹಳ್ಳಿಗಳನ್ನು ಹೊಂದಿರುವ ತಾಲೂಕೀಗ ನೀರಿನ ಸಮಸ್ಯೆ ತೀವ್ರಗೊಂಡಿದೆ. ತಾಲೂಕು ಆಡಳಿತ ಜನ-ಜಾನುವಾರುಗಳಿಗೆ ನೀರು ಮತ್ತು ಮೇವು ಪೂರೈಸುವಲ್ಲಿ ಮೇನಾಮೇಷ ಎಣಿಸುತ್ತಿದೆ. 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್‌ ಲೈನ್‌ ಈಗ ದುರಸ್ತಿಯಲ್ಲಿದ್ದು, ಇದನ್ನೇ ನೆಪವಾಗಿಸಿಕೊಂಡು ಕಳೆದ ಹಲವು ದಿನಗಳಿಂದ ಕೋತಬಾಳ, ಮಾಡಲಗೇರಿ, ಹಿರೇಹಾಳ, ನೈನಾಪುರ, ಮುಗಳಿ, ತಳ್ಳಿಹಾಳ, ಬಳಗೋಡ, ಸರ್ಜಾಪುರ, ಶಾಂತಗೇರಿ, ಬಮ್ಮಸಾಗರ ಮುಶಿಗೇರಿ, ನೆಲ್ಲೂರ,ಪ್ಯಾಟಿ, ಲಕ್ಕಲಕಟ್ಟಿ, ಗುಳಗುಳಿ, ಚಿಕ್ಕಳಗುಂಡಿ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರು ಪೂರೈಸಿಲ್ಲವಾಗಿದೆ. ಇದರಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಕೆಲವು ಗ್ರಾಮಗಳು ಕೆರೆಯ ನೀರನ್ನೇ ಕುಡಿಯಲು ಉಪಯೋಗಿಸುತ್ತಿದ್ದರೆ, ಇನ್ನೂ ಕೆಲವು ಗ್ರಾಮಗಳು ಕೊಳವೆ ಬಾವಿಗಳ ಮೇಲೆಯೇ ಅವಲಂಬಿತವಾಗಿವೆ.

ಕೆರೆಗಳೇ ಜಲಾಧಾರ: ತಾಲೂಕಿನಲ್ಲಿರುವ 64 ಕೆರೆಗಳ ಪೈಕಿ 16 ಕುಡಿಯುವ ನೀರಿನ ಕೆರೆಗಳಾಗಿದ್ದು, ಉಳಿದ ಕೆರೆಗಳನ್ನು ಜಾನುವಾರುಗಳಿಗೆ ಬಳಸಲಾಗುತ್ತದೆ. ಇದರಲ್ಲಿ ಅರ್ಧ ಕೆರೆಗಳಲ್ಲಿ ಮಾತ್ರ ನೀರಿದೆ. ಉಳಿದ ಕೆರೆಗಳಿಗೆ ತಾಲೂಕು ಹಾಗೂ ಜಿಲ್ಲಾಡಳಿತ ಸರ್ಕಾರಕ್ಕೆ ಒತ್ತಡ ತಂದು ಮಲಪ್ರಭಾ ನದಿ ನೀರನ್ನು ಕಾಲುವೆ ಮೂಲಕ ತಂದು ಕೆರೆ ಕಟ್ಟಿಗಳನ್ನು ತುಂಬಿಸಿ ನೀರಿನ ಸಮಸ್ಯೆ ಬರದಂತೆ ಮುಂಜಾಗ್ರತ ಕ್ರಮ ವಹಿಸಬೇಕಿದೆ.

ಪಟ್ಟಣದಲ್ಲಿ ವಾರಕ್ಕೊಮ್ಮೆ ನೀರು: ರೋಣ ಪಟ್ಟಣಕ್ಕೆ ಸದ್ಯ ಪಕ್ಕದ ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಬಳಿ ಹಾದು ಹೋಗುವ ಮಲಪ್ರಭಾ ನದಿಗೆ ಅಡ್ಡವಾಗಿ ಕಟ್ಟಿರುವ ಬ್ಯಾರೇಜ್‌ನಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ಸದ್ಯ ಪಟ್ಟಣಕ್ಕೆ ವಾರಕ್ಕೊಮ್ಮೆ ಮಾತ್ರ ನೀರನ್ನು ಪೂರೈಸಲಾಗುತ್ತಿದೆ. ಒಂದೊಮ್ಮೆ ನದಿಗೆ ಬರುತ್ತಿರುವ ನೀರನ್ನು ಡ್ಯಾಂನಿಂದ ಬಂದ್‌ ಮಾಡಿದಲ್ಲಿ ಬ್ಯಾರೇಜ್‌ನಲ್ಲಿರುವ ನೀರು ಕೇವಲ
60 ದಿನಗಳಿಗಾಗುವಷ್ಟು ಸಂಗ್ರಹವಿರುತ್ತದೆ. ನಂತರ ದಿನಗಳಲ್ಲಿ ನೀರಿನ ಸಮಸ್ಯೆ ತೀವ್ರತೆ ಪಡೆಯುತ್ತದೆ. ಇದಕ್ಕೂ ಮೊದಲೇ ಪುರಸಭೆಯಿಂದ ನೀರಿನ ಸಂಗ್ರಹಕ್ಕೆ ಯಾವ ಪರಿಹಾರ ಕಂಡುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.

ಹೊಳೆಆಲೂರಿನಲ್ಲಿ 8 ದಿನಕ್ಕೊಮ್ಮೆ: ತಾಲೂಕಿನಲ್ಲಿ 8 ಸಾವಿರಕ್ಕೂ ಹೆಚ್ಚು ಜನರನ್ನು ಹೊಂದಿರುವ ಗ್ರಾಮ ಹೊಳೆಆಲೂರು. ಇಲ್ಲಿ ಎಂಟು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತದೆ. ಇದರಿಂದ ಸಾರ್ವಜನಿಕರು
ತೊಂದರೆ ಅನುಭವಿಸುವಂತಾಗಿದೆ. ನೀರಿನ ಸಮಸ್ಯೆ ನೀಗಿಸಲು ತಾಲೂಕು ಆಡಳಿತ ಎಲ್ಲ ರೀತಿಯ ಕ್ರಮ ಕೈಗೊಂಡಿದ್ದೇವೆ ಎಂದು ಹೇಳುತ್ತಿದ್ದರೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ದೇವರು ವರ ಕೊಟ್ಟರೂ ಪೂಜಾರ
ವರ ಕೊಡಲಿಲ್ಲ ಎಂಬಂತೆ ತಾಲೂಕು ಆಡಳಿತ ಎಲ್ಲ ವ್ಯವಸ್ಥೆ ಮಾಡಿದ್ದರೂ ಗ್ರಾಪಂ ನೀರಿನ ಸಮಸ್ಯೆ ಪರಿಹರಿಸುವಲ್ಲಿ ಹಿಂದೇಟು ಹಾಕುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಬೇಸಿಗೆ ಮುನ್ನವೇ ಬಿಸಿಲಿನ ಪ್ರಕರತೆ ಹೆಚ್ಚಾಗಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಈಗಾಗಲೇ ನೋಡಲ್‌ ಅಧಿಕಾರಿಗಳ ಮೂಲಕ ತಾಲೂಕಿನ ಎಲ್ಲ ಗ್ರಾಪಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಪರಿಹಾರಕ್ಕೆ
ಮುಂದಾಗುತ್ತೇವೆ.
.ಶರಣಮ್ಮಕಾರಿ, ತಹಶೀಲ್ದಾರ್‌ ರೋಣ.

20 ಹಳ್ಳಿಗಳಿಗೆ ನೀರು ಪೂರೈಸುವ ಪೈಪ್‌ ಲೈನ್‌ ರೋಣ ಪಟ್ಟಣದ ಬಳಿ ಡ್ಯಾಮೇಜ್‌ ಆಗಿದೆ. ಸದ್ಯ ಕೆಲ ಕಡೆ ನೀರು ಸರಬರಾಜು ಸ್ಥಗಿತವಾಗಿದೆ. ಶೀಘ್ರದಲ್ಲೇ ನೀರು ಪೂರೈಸಲಾಗುವುದು.
.ಎಸ್‌. ಮಹದೇವಪ್ಪ,
ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಅಭಿಯಂತರ

ಮೇವಿನ ಕೊರತೆ ಇಲ್ಲ
ತಾಲೂಕಿನಾದ್ಯಂತ ಬಹುತೇಕ ಗ್ರಾಮಗಳ ರೈತರಲ್ಲಿ ಮೇವು ಸಂಗ್ರಹವಿದ್ದು, ಸದ್ಯ ಜಾನುವಾರುಗಳಿಗೆ ಮೇವಿನ ಕೊರತೆ ಕಂಡು ಬಂದಿಲ್ಲ. ಮುಂದಿನ ದಿನಮಾನಗಳಲ್ಲಿ ಮೇವಿನ ಕೊರತೆ ಕಂಡು ಬಂದಲ್ಲಿ ಸಮರ್ಪಕ ಕ್ರಮ ಕೈಗೊಳ್ಳಲು ತಾಲೂಕು ಆಡಳಿತ ಸಜ್ಜಾಗಿದೆ. ಈಗಾಗಲೇ ಕೃಷಿ ಇಲಾಖೆ ಹಾಗೂ ಪಶು ಸಂಗೋಪಣೆ ಇಲಾಖೆ ಮುಖಾಂತರ ರೈತರಿಗೆ ಮೇವಿನ ಕಿಟ್‌ಗಳನ್ನು ಒದಗಿಸಲು ತಯಾರಿ ಮಾಡಿಕೊಂಡಿದೆ. ಮೇವಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲೂಕು ಆಡಳಿತ ತಿಳಿಸಿವೆ.

ಯಚ್ಚರಗೌಡ ಗೋವಿಂದಗೌಡ್ರ 

Advertisement

Udayavani is now on Telegram. Click here to join our channel and stay updated with the latest news.

Next