Advertisement

ಪ್ರವಾಹ ಹೊಡೆತಕ್ಕೆ ನಲುಗಿದ ಗ್ರಾಮಗಳು!

01:26 PM Aug 15, 2019 | Team Udayavani |

ರೋಣ: ಕಳೆದ ವಾರ ಮುನವಳ್ಳಿಯ ನವಿಲು ತೀರ್ಥ ಜಲಾಯಶದಿಂದ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ನದಿ ಪಾತ್ರದ ತಾಲೂಕುಗಳು ನಲುಗಿ ಹೋಗಿದ್ದು, ಇವುಗಳ ಸುಧಾರಣೆಗೆ ತಿಂಗಳುಗಳೇ ಬೇಕಾಗಿದೆ.

Advertisement

ಇದ್ದಕ್ಕಿಂತಕ್ಕೆ ಉಂಟಾದ ಪ್ರವಾಹದಿಂದ ತಾಲೂಕಿನ ಮೆಣಸಗಿ, ಗುಳಗಂದಿ, ಹೊಳೆಮಣ್ಣೂರ, ಮಾಳವಾಡ, ಹೊಳೆಆಲೂರ, ಅಮರಗೋಳ, ಹೊಳೆಹಡಗಲಿ, ಬಸರಕೋಡ, ಬಿ.ಎಸ್‌.ಬೇಲೆರಿ, ಕುರವಿನಕೊಪ್ಪ ಸೇರಿದಂತೆ ಅನೇಕ ಗ್ರಾಮಗಳಿಗೆ ಭಷ್ಮಾಸೂರನಂತೆ ನೀರು ನುಗ್ಗಿ ರಸ್ತೆಗಳು, ವಿದ್ಯುತ್‌ ಕಂಬಗಳು, ಮನೆಗಳು, ರೈತರು ಬೆಳೆದ ವಿವಿಧ ಬೆಳೆಗಳು ಸೇರಿದಂತೆ ಅನೇಕ ಮನುಷ್ಯನ ಮೂಲ ಸೌಕರ್ಯಗಳನ್ನು ನಾಶವಾಗುವಂತೆ ಮಾಡಿದೆ. ಇದರಿಂದ ಇಲ್ಲಿನ ಜನರಿಗೆ ನಿತ್ಯವೂ ಮೂಲ ಸೌಕರ್ಯಗಳಿಲ್ಲದೆ ನರಕಯಾತನೆ ಅನುಭವಿಸುವಂತಾಗಿದೆ.

ಈ ಹಿಂದೆ ಇಷ್ಟು ಪ್ರಮಾಣದಲ್ಲಿ ನೀರು ಹರಿಸದ ಕಾರಣ ಗ್ರಾಮಸ್ಥರು ಗ್ರಾಮ ಬಿಡಲು ಹಿಂದೇಟು ಹಾಕಿದರು. ಆದರೆ ಆ.8ರಂದು ಬೆಳಗ್ಗೆ ನಿದ್ದೆಯಿಂದ ಎಲ್ಲರೂ ಹೊರಬರುತ್ತಿದ್ದಂತೆ ಗ್ರಾಮಕ್ಕೆ ಗ್ರಾಮಗಳೇ ನದಿಯಂತೆಯಾಗಿದ್ದವು. ಇಷ್ಟಕ್ಕೆ ಸುಮ್ಮನಾಗದ ಮಲಪ್ರಭೆ ತನ್ನೊಟ್ಟಿಗೆ ಬೆಣ್ಣಿಹಳ್ಳವನ್ನು ಸೇರಿಸಿಕೊಂಡು ಈ ಗ್ರಾಮಗಳನ್ನು ಸಂಪೂರ್ಣವಾಗಿ ಕೊಚ್ಚಿ ಹೋಗುವಂತೆ ಮಾಡಿತು.

ರಸ್ತೆ-ವಿದ್ಯುತ್‌ ಸಂಪರ್ಕ ಇಲ್ಲ: ಸ್ಥಳದಿಂದ ಸ್ಥಳಕ್ಕೆ ಸ್ಥಾನಪಲ್ಲಟ ಮಾಡಲು ರಸ್ತೆಯೂ ಅತೀ ಮುಖ್ಯವಾಗಿಬೇಕು. ಆದರೆ ಮಲಪ್ರಭಾ ನದಿಯ ಅಕ್ಕಪಕ್ಕದಲ್ಲಿರುವ ಈ ನೆರೆಹಾವಳಿಗೆ ತುತ್ತಾಗಿರುವ ಗ್ರಾಮಗಳ ರಸ್ತೆಗಳು ಸಂಪೂರ್ಣವಾಗಿ ಕಿತ್ತು ಹೋಗಿವೆ. ಇನ್ನು ಇವುಗಳು ಯಾವಾಗ ರಿಪೇರಿಯಾಗುತ್ತವೆ ಎಂಬ ಚಿಂತೆಯಲ್ಲಿ ಸಂತ್ರಸ್ತರು ಇದ್ದಾರೆ. ವಿದ್ಯುತ್‌ ಹಾಗೂ ಮೊಬೈಲ್ ಟವರ್‌ಗಳು ಕೂಡಾ ಜಖಂ ಆಗಿದ್ದು, ಇಲ್ಲಿನ ಜನರಿಗೆ ಯಾವುದೇ ಮೊಬೈಲ್ ನೆಟ್ವರ್ಕ್‌ ಕೂಡ ಸಿಗುತ್ತಿಲ್ಲ. ಇದರಿಂದ ಸಂತ್ರಸ್ತರು ತಮ್ಮ ಸಂಬಂಧಿಕರ ಜತೆಗೆ ಹಾಗೂ ಸೇನೆ ಸೇರಿದಂತೆ ಈ ಗ್ರಾಮದಿಂದ ಉದ್ಯೋಗವನ್ನರಿಸಿ ಹೋದವರ ಜತೆಗೆ ಕುಟುಂಬಸ್ಥರಿಗೆ ದೂರವಾಣಿಯ ಮೂಲಕ ಮಾತನಾಡಲು ತೊಂದರೆ ಉಂಟಾಗಿದೆ.

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ: ಮುಂಗಾರು ಹಂಗಾಮಿನಲ್ಲಿ ಬೆಳೆಯುವ ಬೆಳೆಗಳಾದ ಗೋವಿನಜೋಳ, ಹೆಸರು, ಗೋಧಿ, ಸೂರ್ಯಕಾಂತಿ, ಕಬ್ಬು, ಈರುಳ್ಳಿ ಬೆಳೆಗಳು ತುಂಬಾ ಚೆನ್ನಾಗಿ ಫಸಲು ಬಂದಿತ್ತು. ಆದರೆ ಅದನ್ನು ಕಟಾವು ಮಾಡಿಕೊಂಡು ರಾಶಿಯನ್ನು ಮನೆಗೆ ಕೊಂಡೊಯ್ಯುವ ಸಮಯದಲ್ಲಿ ಪ್ರವಾಹದ ರುದ್ರನರ್ತನಕ್ಕೆ ಎಲ್ಲವೂ ನೀರಿನಲ್ಲಿ ಕೊಚ್ಚಿ ಹೋಗಿದೆ. ಪ್ರವಾಹ ಇಳಿದ ನಂತರ ಅಧಿಕಾರಿಗಳು ಬೆಳೆ ಹಾನಿ ಸಮೀಕ್ಷೆ ನಡೆಸಿದ ಬಳಿಕ ನಿಖರ ಅಂಕಿ-ಅಂಶಗಳು ಸಿಗುತ್ತದೆ.

Advertisement

ಪ್ರವಾಹಕ್ಕೆ ತುತ್ತಾಗಿರುವ ಗ್ರಾಮಗಳಿಗೆ ಮೂಲ ಸೌಕರ್ಯಗಳನ್ನು ತತಕ್ಷಣವೇ ನೀಡಲು ವಿವಿಧ ಇಲಾಖೆಯ ಅಧಿಕಾರಿಗಳಿಗೆ ರೋಣ ಮತ್ತು ನರಗುಂದ ಶಾಸಕರು ಸಭೆ ಕರೆದು ಸೂಚನೆ ನೀಡಿದ್ದಾರೆ. ಆ ಪ್ರಕಾರ ಆಡಳಿತಾತ್ಮಕ ಹಾಗೂ ತಾಂತ್ರಿಕ ಅನುಮೋದನೆಗಾಗಿ ಕಾಯದೆ, ಕಾಮಗಾರಿಗಳನ್ನು ಪ್ರಾರಂಭಿಸಿ, ರಸ್ತೆ, ವಿದ್ಯುತ್‌, ಕುಡಿಯುವ ನೀರು ಸೇರಿದಂತೆ ಅನೇಕ ಕಾಮಗಾರಿಗಳನ್ನು ಜರೂರಾಗಿ ಮಾಡಿ ಮುಗಿಸುವಂತೆ ಸೂಚನೆ ನೀಡಿದ್ದರಿಂದ ಈಗಾಗಲೇ ಸೇತುವೆ, ರಸ್ತೆ, ವಿದ್ಯುತ್‌ ಕೆಲಸಗಳ ದುರಸ್ತಿ ಹಂತದಲ್ಲಿವೆ.
ಶರಣಮ್ಮ ಕಾರಿ, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next