Advertisement

ರೋಣ: ದಾಳಿಂಬೆ ಭರ್ಜರಿ ಫಸಲಿನ ನಿರೀಕ್ಷೆಯಲ್ಲಿ ರೈತ

06:02 PM Aug 01, 2024 | Team Udayavani |

ಉದಯವಾಣಿ ಸಮಾಚಾರ
ರೋಣ: ದಾಳಿಂಬೆಗೆ ರೋಗ ಮತ್ತು ನಿರ್ವಹಣೆ ಯಿಂದ ಬೆಳೆ ರಕ್ಷಣೆ ಮಾಡಿಕೊಂಡು ಲಾಭ ಗಳಿಸುವುದೇ ದೊಡ್ಡ ಸಮಸ್ಯೆಯಾಗಿರುವಾಗ ಇಲ್ಲಿಯ ರೈತ ಶಿವಾನಂದ ಗಡಗಿ ವೈಜ್ಞಾನಿಕವಾಗಿ ದಾಳಿಂಬೆ ಬೆಳೆದು ರೈತರು ಹುಬ್ಬೇರಿಸುವಂತೆ ಮಾಡಿದ್ದಾನೆ. ಪಟ್ಟಣದ ಜಕ್ಕಲಿ ರಸ್ತೆಯಲ್ಲಿರುವ ತನ್ನ 5 ಎಕರೆಯಲ್ಲಿ ದಾಳಿಂಬೆ ಬೆಳೆಯಲು 6 ಲಕ್ಷ ಖರ್ಚು ಮಾಡಿದ್ದು, ಮೊದಲ ಫಸಲು ಭರ್ಜರಿಯಾಗಿ ಇಳುವರಿ ಬರುವ ನಿರೀಕ್ಷೆಯಲ್ಲಿದ್ದಾನೆ. ವೈಜ್ಞಾನಿಕ ಪದ್ಧತಿಯಲ್ಲಿ ತಾಂತ್ರಿಕತೆ ಬಳಸಿದ್ದರಿಂದ ಮೊದಲ ಬೆಳೆ ತೆಗೆಯುವಾಗ ಖರ್ಚು ಜಾಸ್ತಿಯಾಗಿದೆ, ಮುಂದಿನ ಬೆಳೆಗೆ ಇಷ್ಟು ಖರ್ಚಾಗಲ್ಲ ಎನ್ನುತ್ತಾರೆ ರೈತ ಶಿವಾನಂದ ಗಡಗಿ.

Advertisement

ಮಲ್ಚಿಂಗ್‌ ಹೊದಿಕೆ: ನಂಜು ರೋಗದಿಂದ ದಾಳಿಂಬೆ ಬೆಳೆ ನಷ್ಟವಾಗುತ್ತದೆ. ಇದನ್ನು ತಪ್ಪಿಸಲು 5 ಎಕರೆ ಪ್ರದೇಶದಲ್ಲಿರುವ ಗಿಡಗಳ ಬುಡಕ್ಕೆ ಎರಡು ಅಡಿ ಎತ್ತರ ಮೂರು ಅಡಿ ಅಗಲ ಬೆಡ್‌ ನಿರ್ಮಿಸಿ ಮಲ್ಚಿಂಗ್‌ ಹೊದಿಕೆ ಹಾಕುವ ಮೂಲಕ ಅಕಾಲಿಕ ಮಳೆಯಿಂದ ಎಲೆಗಳಿಗೆ ಹರಡಿ ಬರುವ ನಂಜು ರೋಗ ತಡೆದಿದ್ದಾನೆ. ಜತೆಗೆ ಬಿಸಿಲಿಗೆ ನೀರು ಹಾವಿ ತಡೆಗಟ್ಟಿ ತೇವಾಂಶ ಕಾಪಾಡಿಕೊಂಡಿದ್ದರಿಂದ ದಾಳಿಂಬೆ ಸಮೃದ್ಧವಾಗಿ ಬಂದಿದೆ.

ಪಕ್ಷಿಗಳ ದಾಳಿಗೆ ಬ್ರೇಕ್‌: ದಾಳಿಂಬೆ ಹಣ್ಣು ಕೆಂಪಿರುವುದರಿಂದ ಗಿಳಿ ಇತರೆ ಪಕ್ಷಿಗಳು ಕುಕ್ಕಿ ಹಾಳು ಮಾಡುವುದು ಮತ್ತು ಅಳಿಲು ಕಚ್ಚಿ ಬಿಡುವುದರಿಂದ ಹಣ್ಣು ಸ್ವಲ್ಪ ಡ್ಯಾಮೇಜ್‌ ಆದರೂ ಯಾರು ಖರೀದಿಸಲ್ಲ. ಇದನ್ನು ತಪ್ಪಿಸಲು ಇಡೀ ತೋಟಕ್ಕೆ 8 ಅಡಿ ಎತ್ತರದ ಪಕ್ಷಿ ನಿರೋಧಕ ಬಲೆ ಹಾಕುವ ಮೂಲಕ ಪಕ್ಷಿಗಳ ದಾಳಿಗೆ ಬ್ರೇಕ್‌ ಹಾಕಿದ್ದಾರೆ.

ಸೂರ್ಯ ಕಿರಣ ತಡೆಯಲು ಗ್ಲೋ ಕವರ್‌: ದಾಳಿಂಬೆ ಹಣ್ಣು ಕೆಂಪು ಬಂದಷ್ಟು ಬೆಲೆ ಜಾಸ್ತಿ ಆದರೆ ಇಲ್ಲಿನ ಬಿಸಿಲಿನ ತಾಪದಿಂದ ಬಣ್ಣ ಕಳೆದುಕೊಂಡು ಕೆಂಪು ಬಣ್ಣ ನಿರೀಕ್ಷೆಯಷ್ಟು ಬರಲ್ಲ ಮತ್ತು ಸೂಕ್ಷ್ಮವಾದ ದಾಳಿಂಬೆ ಹಣ್ಣಿನ ಮೇಲ್ಭಾಗ ಬಿಸಿಲಿಗೆ ಬಿರುಕು ಬಿಡುವುದರಿಂದ ಬೆಳೆ ನಷ್ಟವಾಗುವುದನ್ನು ತಡೆಯಲು ಇಡೀ ದಾಳಿಂಬೆ ಗಿಡಗಳಿಗೆ ಬಿಸಿಲಿನಿಂದ ರಕ್ಷಣೆ ಮಾಡುವ ಗ್ಲೋ ಕವರ್‌ ಹೊದಿಕೆಯಿಂದ ಸೂರ್ಯನ ತಾಪ ಕಡಿಮೆ ಯಾಗಿ ಹೆಚ್ಚಿನ ಇಳುವರಿ ಮತ್ತು ಗುಣಮಟ್ಟದ ಕೆಂಪು ಬಣ್ಣದ ದಾಳಿಂಬೆ ಒಂದೊಂದು ಹಣ್ಣು 300-400 ಗ್ರಾಂ ತೂಕ ಬಂದಿದೆ. ರಸವಾರಿ ಗೊಬ್ಬರ ಹನಿ ನೀರಾವರಿ ಮೂಲಕ ಗಿಡಗಳ ಬುಡಕ್ಕೆ ಹೋಗುವಂತೆ ಮಾಡಿರುವುದು, ಮಿತ ನೀರಿನ ಬಳಕೆಯಿಂದ ಗಿಡಗಳಿಗೆ ಲೀಟರ್‌ ಪ್ರಮಾಣದಲ್ಲಿ ನೀರು ಹಾಯಿಸಿರುವುದು ಹೀಗೆ ಉತ್ತಮ ನಿರ್ವಹಣೆಯಿಂದ ಭರ್ಜರಿ ಫಸಲು ಕಂಡಿದ್ದಾರೆ.

ದಾಳಿಂಬೆ ಬೆಳೆಯಲ್ಲಿ ರೈತ ಲಾಭ-ನಷ್ಟ ಎರಡನ್ನು ಅನುಭವಿಸುತ್ತಿದ್ದಾರೆ. ಆದರೆ ರೋಣದ ರೈತ ಶಿವಾನಂದ ಗಡಗಿ ಎಲ್ಲರಂತೆ
ದಾಳಿಂಬೆ ಬೆಳೆಯದೆ ವೈಜ್ಞಾನಿಕವಾಗಿ ಎಲ್ಲ ತಾಂತ್ರಿಕತೆ ಅಳವಡಿಸಿಕೊಂಡು ತೋಟಗಾರಿಕೆ ಲಾಭದಾಯಕ ಉದ್ಯಮ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಕಾರಣ ಇಲ್ಲಿನ ಹವಾಗುಣ ಮತ್ತು ಮಣ್ಣು ತೋಟಗಾರಿಕೆ ಬೆಳೆಗೆ ಪ್ರಾಶಸ್ತ್ಯವಾಗಿದೆ.
●ಗಿರೀಶ,
ತೋಟಗಾರಿಕೆ ಸಹಾಯಕ ನಿರ್ದೇಶಕ.

Advertisement

ವಿಜಯಪುರ ಜಿಲ್ಲೆಯ ತಿಕೋಟಾದಿಂದ 2000 ದಾಳಿಂಬೆ ಸಸಿ ತಂದು 5 ಎಕರೆಯಲ್ಲಿ ನಾಟಿ ಮಾಡಿದ್ದು, ಉತ್ತಮ ಇಳುವರಿ ಬಂದಿದೆ. ಒಂದು ಗಿಡದಲ್ಲಿ ಕನಿಷ್ಟ 200-300 ದಾಳಿಂಬೆ ಹಣ್ಣುಗಳಿವೆ. ಈ ವರ್ಷ 70 ಟನ್‌ ದಾಳಿಂಬೆ ಆಗುವ ನಿರೀಕ್ಷಯಿದ್ದು,
ಖರ್ಚು ವೆಚ್ಚ ತೆಗೆದು ಇದರಿಂದ 50 ಲಕ್ಷ ರೂ. ಲಾಭವಾಗಬಹುದು.
●ಶಿವಾನಂದಪ್ಪ ಗಡಗಿ, ರೈತ

■ ಸೋಮು ಲದ್ದಿಮಠ

Advertisement

Udayavani is now on Telegram. Click here to join our channel and stay updated with the latest news.

Next