Advertisement

ರೋಣ: ಕಸದ ತೊಟ್ಟಿಯಾದ ಪಟ್ಟಣದ ಉದ್ಯಾನ

05:31 PM Jul 30, 2024 | Team Udayavani |

ಉದಯವಾಣಿ ಸಮಾಚಾರ
ರೋಣ: ಬೀದಿದೀಪ ಅಳವಡಿಕೆ, ಚರಂಡಿ ಸ್ವಚ್ಛ ತೆ ಹಾಗೂ ಸಮರ್ಪಕ ಕಸ ವಿಲೇವಾರಿ ಮಾಡಲು ಸಾಧ್ಯವಾಗದಷ್ಟು ಅಶಕ್ತಗೊಂಡಿರುವ ಪುರಸಭೆ, ಉದ್ಯಾನಗಳನ್ನು ಹಾಳುಗೆಡುವುತ್ತಿದೆ. ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಉದ್ಯಾನ ಕಸದ
ತೊಟ್ಟೆಯಾಗುತ್ತಿವೆ. ಉಪಕರಣಗಳು ತುಕ್ಕು ಹಿಡಿಯುವುದೊಂದೇ ಬಾಕಿ.

Advertisement

ಪಟ್ಟಣದ ಜನತೆ ದಿನದ ಜಂಜಾಟದಿಂದ ಕೊಂಚ ವಿರಾಮ, ವಿಹಾರ, ಮಕ್ಕಳಿಗೆ ಆಟ, ಮನರಂಜನೆಗೆಂದು ಉದ್ಯಾನ ಅರಸಿ ಬರುತ್ತಾರೆ. ಆದರೆ, ಇಲ್ಲಿನ ಉದ್ಯಾನ ಅವ್ಯವಸ್ಥೆ ನೋಡಿದರೆ ಮಾರು ದೂರ ಹೋಗುವಂತಿದೆ. ಸಾಧು ಅಜ್ಜನ ಬಡಾವಣೆ ಬಳಿ ಇರುವ ಉದ್ಯಾನವಂತೂ ಅಧೋಗತಿಗೆ ತಲುಪಿದೆ. ನಾಗರಿಕರು ವಾಯುವಿಹಾರ ಹಾಗೂ ಮಕ್ಕಳ ಆಟಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಿರ್ಮಾಣವಾಗಿರುವ ಈ ಉದ್ಯಾನ ಪಾಳು ಬಿದ್ದಿದೆ.

ಎಲ್ಲಿ ನೋಡಿದರಲ್ಲಿ ಕಸ, ಹುಲ್ಲು ಬೆಳೆದು ಕಾಲಿಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಷಜಂತುಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಪುರಸಭೆ ಉದ್ಯಾನ ನಿರ್ವಹಣೆಗೆಂದು ಪ್ರತಿ ವರ್ಷ ಬಜೆಟ್‌ನಲ್ಲಿ ಹಣ ಎತ್ತಿಡುತ್ತದೆ. ಆದರೆ, ಅದೆಲ್ಲಿ ಹೋಗುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಈ ಬಗ್ಗೆ ಇಲ್ಲಿನ ಸಾರ್ವಜನಿಕರು ಪುರಸಭೆಗೆ ಸಾಕಷ್ಟು ಬಾರಿ ದೂರು ನೀಡಿದರು ಪುರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯದೇ ವರ್ಷದಿಂದ ಖಾಲಿ ಬಿದ್ದಿದ್ದು, ಈಗ ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿ. ಅವರು ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕಿದೆ.

ಉದ್ಯಾನ ನಿರ್ಮಾಣಕ್ಕೆ ಪುರಸಭೆ ಖರ್ಚು ಮಾಡಿದ ಲಕ್ಷಾಂತರ ರೂ. ವ್ಯರ್ಥವಾಗಿದೆ. ಉದ್ಯಾನ ಒಳಗೆ ಜನರು ಕಾಲಿಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಆಟೋಪಕರಣಗಳನ್ನು ಬಳಸಲಾಗುತ್ತಿಲ್ಲ. ವಯಸ್ಸಾದವರು ಇಲ್ಲಿ ವಾಯುವಿಹಾರ ಮಾಡಲು ಸಾಧ್ಯವಿಲ್ಲ. ಗಿಡಗಂಟೆಗಳು ಬೆಳೆದಿದ್ದು, ಕಸ ಹರಡಿಕೊಂಡಿದೆ. ಪುರಸಭೆ ಏನು ಮಾಡುತ್ತಿದೆ ತಿಳಿಯದಾಗಿದೆ.
●ಮಂಜು ನಾಯಕ, ಪರಿಸರ ಪ್ರೇಮಿ

Advertisement

ಪಟ್ಟಣದ ಸಾಧು ಅಜ್ಜನ ಬಡಾವಣೆಯಲ್ಲಿರುವ ಉದ್ಯಾನ ಎರಡು ವರ್ಷಗಳ ಕಾಲ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದೇ. ನನಗೆ ಬರಬೇಕಿದ್ದ ಒಂದು ವರ್ಷದ ಸಂಬಳ ನೀಡದ ಕಾರಣ ಎರಡು ವರ್ಷಗಳ ಹಿಂದೆಯೇ ಉದ್ಯಾನ ನಿರ್ವಹಣೆ ಕೆಲಸ ಬಿಟ್ಟಿದ್ದು, ಅಲ್ಲಿಂದ ಇಲ್ಲಿಯವರೆಗೂ ಯಾರು ನಿರ್ವಹಣೆ ಮಾಡದ ಕಾರಣ ಉದ್ಯಾನ ಸಂಪೂರ್ಣ ಹಾಳಾಗಿದೆ.
●ಬಸಪ್ಪ ಮಣ್ಣೇರಿ, ಉದ್ಯಾನ ನಿರ್ವಾಹಕ

Advertisement

Udayavani is now on Telegram. Click here to join our channel and stay updated with the latest news.

Next