Advertisement

ಪುರಾಣದ ಬೆನ್ನೇರಿ ಸಂದೇಶವಿಲ್ಲದ ರೊಮ್ಯಾಂಟಿಕ್‌ ಕಾಮಿಡಿ

05:05 AM Jul 21, 2017 | |

ಖಂಡಿತಾ ಇದು ಪುರಾಣದ ಚಿತ್ರವಲ್ಲ. ಹಾಗಂತ ಪೋಸ್ಟರ್‌ ನೋಡುತ್ತಿದ್ದಂತೆಯೇ ಎಲ್ಲರಿಗೂ ಖಾತ್ರಿಯಾಯಿತು.
ಅದಕ್ಕೂ ಮುನ್ನ “ಆದಿ ಪುರಾಣ’ ಎಂಬ ಹೆಸರು ಕೇಳಿ, ಇದು ಪುರಾಣದ ಕಥೆ ಎಂದು ಹೋದವರಿಗೆ ಕಂಡಿದ್ದು ಒಂದು ಪೋಸ್ಟರ್‌ನಲ್ಲಿ ಒಬ್ಬ ಹುಡುಗ, ಇಬ್ಬರು ಹುಡುಗಿಯರು.

Advertisement

ಅದರಲ್ಲಿ ಆ ಹುಡುಗನ ಹೆಸರು ಆದಿ ಎಂಬ ವಿಷಯ ಗೊತ್ತಾದರೆ, ಚಿತ್ರದ ಕಥೆ ಏನಿರಬಹುದು ಎಂಬುದು ಅರ್ಥವಾಗಬಹುದು.

ಹೌದು, ಇದು ಆದಿತ್ಯ ಅಲಿಯಾಸ್‌ ಆದಿ ಎಂಬ ಯುವಕನ ಶಿಕ್ಷಣ, ವೃತ್ತಿ, ಮದುವೆ ವಿಷಯದ ಕುರಿತಾದ ಚಿತ್ರ. ಈ ಕಥೆಗೆ “ಆದಿ ಪುರಾಣ’ ಎಂಬ ಹೆಸರೇ ಸೂಕ್ತ ಎಂದು ತೀರ್ಮಾನಿಸಿರುವ ಚಿತ್ರತಂಡ, ಅದೇ ಹೆಸರಿನಲ್ಲಿ ಚಿತ್ರ ಶುರು ಮಾಡಿರುವುದಲ್ಲದೆ, ಒಂದು ವಾರದ ಚಿತ್ರೀಕರಣ ಸಹ ಮುಗಿಸಿದೆ. ಚಿತ್ರದ ಬಗ್ಗೆ ಹೇಳುವುದಕ್ಕೆ ಪುರಾಣಿಕರೆಲ್ಲಾ ಸ್ಯಾಂಕ್ಟಮ್‌ ಎಂಬ ಹೋಟೆಲ್‌ಗೆ ಮೋಹನ್‌ ಕಾಮಕ್ಷಿ ಅವರ ನೇತೃತ್ವದಲ್ಲಿ ಬಂದಿದ್ದರು.

ಈ ಚಿತ್ರವನ್ನು ಸಂಕಲನಕಾರ ಮೋಹನ್‌ ಕಾಮಾಕ್ಷಿ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಸಹ ಅವರದ್ದೇ. “ನಿರುತ್ತರ’, “ಹರಿಕಥಾ ಪ್ರಸಂಗ’ ಚಿತ್ರಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿರುವ ಅವರು, ಈ ಚಿತ್ರದ
ಮೂಲಕ ನಿರ್ದೇಶಕರಾಗುತ್ತಿದ್ದಾರೆ.

ಚಿತ್ರದ ಸಂಕಲನವೂ ಅವರದ್ದೇ. ಹಾಗಾಗಿ ಸುಲಭವಾಗಿದೆಯಂತೆ. “ಸಂಭಾಷಣೆ ಬರೆಯುವಾಗಲೇ ಎಷ್ಟು ಬೇಕು, ಏನು ಬೇಡ ಎನ್ನುವ ಅಂದಾಜು ಸಿಕ್ಕಿಬಿಡುತ್ತದೆ. ಹಾಗಾಗಿ ಇಲ್ಲಿ ವೇಸ್ಟೇಜ್‌ ಇರುವುದಿಲ್ಲ. ಸರಿಯಾಗಿ ಪ್ಲಾನ್‌ ಮಾಡಿಕೊಂಡೇ ಚಿತ್ರ ಮಾಡುತ್ತಿದ್ದೇವೆ. ಈ ಚಿತ್ರಕ್ಕೆ ಹೊಸ ಮುಖಗಳೇ ಬೇಕು ಎನಿಸಿದ್ದರಿಂದ ಶಶಾಂಕ್‌, ಅಹಲ್ಯಾ ಮತ್ತು ಮೋಕ್ಷ ಕುಶಾಲ್‌ ಅವರನ್ನು ಪರಿಚಯಿಸಿದ್ದೇವೆ. ಇನ್ನು “ಮೆಲೋಡಿ’ ಮತ್ತು “ಪ್ರೀತಿ ಕಿತಾಬು’ ಚಿತ್ರಗಳನ್ನು ನಿರ್ಮಿಸಿದ್ದ ಶಮಂತ್‌ ಈ ಚಿತ್ರ ನಿರ್ಮಿಸುತ್ತಿದ್ದಾರೆ. ವಿಕ್ರಮ್‌ ವಸಿಷ್ಠ ಮತ್ತು ಚಂದನ ವಸಿಷ್ಠ ಸಂಗೀತ ಸಂಯೋಜಿಸಿದರೆ, ಮಹೇಂದ್ರ ರಾವ್‌ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ’ ಎಂದು ವಿವರ ನೀಡಿದರು ಮೋಹನ್‌.

Advertisement

ಚಿತ್ರದಲ್ಲಿ ನಾಯಕ, ನಾಯಕಿಯರು ಮತ್ತು ತಂತ್ರಜ್ಞರು ಹೊಸಬರಾದರೂ,ಚಿತ್ರಕ್ಕೆ ಬೆನ್ನೆಲುಬಾಗಿ ಸಾಕಷ್ಟು ಹಿರಿಯ ಪೋಷಕ ಕಲಾವಿದರು ಇರುತ್ತಾರಂತೆ. ರಂಗಾಯಣ ರಘು, ನಾಗೇಂದ್ರ ಶಾ, ಕರಿಸುಬ್ಬು, ವತ್ಸಲಾ ಮೋಹನ್‌ ಮುಂತಾದವರು ನಟಿಸುತ್ತಿದ್ದು, ಬೆಂಗಳೂರು ಮತ್ತು ಮೈಸೂರುಗಳಲ್ಲಿ ಚಿತ್ರೀಕರಣ ನಡೆಸಲಾಗುವುದು ಎಂದರು. ಇನ್ನು ಇದೊಂದು ರೊಮ್ಯಾಂಟಿಕ್‌ ಕಾಮಿಡಿಯಾಗಿದ್ದು  ಯಾವುದೇ ಸಂದೇಶ ಇರುವುದಿಲ್ಲವಂತೆ. “ಇಲ್ಲಿ ಯಾವುದೇ ಗಂಭೀರ ಸಂದೇಶಗಳಿಲ್ಲ. ಒಬ್ಬ ಯುವಕನ ಯೌವ್ವನದಲ್ಲಿ ನಡೆಯುವ ಘಟನೆಗಳನ್ನೇ ಹಾಸ್ಯಮಯವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ. ಇದು ಎಲ್ಲರ ಜೀವನದಲ್ಲೂ ನಡೆಯಬಹುದಾದ ಘಟನೆಗಳು. ಅದಕ್ಕೆ ಕಾಮಿಡಿ ಸ್ಪರ್ಶ ಕೊಟ್ಟಿದ್ದೇವೆ’ ಎಂಬ ಮತ್ತಷ್ಟು ವಿವರಗಳು ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಮಹೇಂದ್ರ ರಾವ್‌ ಅವರಿಂದ ಬಂತು. ನಾಯಕಿಯರ ಪೈಕಿ ಮೋಕ್ಷ ಕುಶಾಲ್‌ ಬಂದಿರಲಿಲ್ಲ.

ಇನ್ನು ಶಶಾಂಕ್‌ ಮತ್ತು ಅಹಲ್ಯ ಸುರೇಶ್‌ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದರು. ಇನ್ನು ಇದೇ ಮೊದಲ ಬಾರಿಗೆ ಚಿತ್ರವೊಂದಕ್ಕೆ ಸಂಗೀತ ಸಂಯೋಜಿಸುತ್ತಿರುವ ವಿಕ್ರಮ್‌ ವಸಿಷ್ಠ ಮತ್ತು ಚಂದನಾ ವಸಿಷ್ಠ ಹಾಡುಗಳು ಮೂಡಿ ಬಂದಿರುವ ರೀತಿಯ ಬಗ್ಗೆ ಮಾತಾಡಿದರು. ಇಲ್ಲಿನ ಹಾಡುಗಳು ಎಲ್ಲಾ ತಲೆಮಾರಿನವರಿಗೂ ಇದೆ ಎನ್ನುವಲ್ಲಿಗೆ ಪತ್ರಿಕಾಗೋಷ್ಠಿ ಮುಗಿಯಿತು.
 

Advertisement

Udayavani is now on Telegram. Click here to join our channel and stay updated with the latest news.

Next