ಬುಕಾರೆಸ್ಟ್ : ದಿನ ಬೆಳಗಾದರೆ ಸಾಕು ಪ್ರತಿಯೊಂದು ಸುದ್ದಿ ವಾಹಿನಿ ಸಾಮಾಜಿಕ ಅಂತರ ಪಾಲಿಸದ ಸಾರ್ವಜನಿಕರು, ಸೋಂಕಿನ ಭಯ ಇಲ್ಲದೆ ಎಲ್ಲಿಬೇಕೆಂದರಲ್ಲಿ ತಿರುಗಾಡುತ್ತಿರುವ ಜನ. ಮಹಾಮಾರಿ ಕೋವಿಡ್ ಅನ್ನು ಲೆಕ್ಕಿಸದೆ ಮಾರುಕಟ್ಟೆಯಲ್ಲಿ ಮುಗಿಬಿದ್ದ ಜನ ಹೀಗೆ ಸರಕಾರ ಮಾಡಿದ ನಿಯಮಗಳನ್ನು ಉಲ್ಲಂಘಿಸಿದವರ ದೂರುಗಳು ಕೇಳುತ್ತಿರುತ್ತವೆ. ಆದರೆ ಬೇಲಿಯೇ ಎದ್ದು ಹೊಲ ಮೇಯಿತು ಎಂಬಂತೆ ದೇಶದ ಪ್ರಧಾನಿಯೇ ನಿಯಮ ಉಲ್ಲಂಘಿಸಿ ದಂಡ ಕಟ್ಟಿದ್ದಾರೆ.
ಹೌದು ರೊಮಾನಿಯಾದ ಪ್ರಧಾನಿ ಲುಡೋವಿಕ್ ಇಂತಹ ತಪ್ಪು ಎಸಗಿದ್ದು, ಸಚಿವ ಸಂಪುಟ ಸಭೆಯಲ್ಲಿ ನಿಯಮ ಪಾಲಿಸದ ಕಾರಣ ಪ್ರಧಾನಿಯೇ ದಂಡ ಪಾವತಿಸುವ ಸನ್ನಿವೇಶ ಎದುರಾಗಿದೆ. ಅಂದಹಾಗೇ ಈ ವಿಚಾರವನ್ನು ಮಾಜಿ ಹಣಕಾಸು ಸಚಿವ ಯಗೆನ್ ಒರ್ಲಾಂಡೊ ಟಿಯೊಡೊರೊವಿಕಿ ತನ್ನ ಫೇಸ್‌ಬುಕ್ ಪುಟದಲ್ಲಿ ಫೋಟೊವನ್ನು ಹಂಚಿಕೊಳ್ಳುವ ಮೂಲಕ ಬಹಿರಂಗ ಪಡಿಸಿದ್ದು, ಅದರಲ್ಲಿ ಪ್ರಧಾನಿ ಲುಡೋವಿಕ್ ಒರ್ಬಾನ್, ಉಪ ಪ್ರಧಾನಿ ರಲುಕಾ ಟರ್ಕನ್, ಸಚಿವರಾದ ವರ್ಜಿಲ್ ಪೊಪೆಸ್ಕಾ, ಲುಸಿಯಾನ್ ಬೊಡೆ, ಬೊಗ್‌ಡಾನ್ ಔರೆಸ್ಕಾ ಇದ್ದಾರೆ.
ಫೋಟೋದಲ್ಲಿ ಪ್ರಧಾನಿ ಲುಡೋವಿಕ್ ಧೂಮಪಾನ ಮಾಡುತ್ತಿದ್ದರೆ, ವಿದೇಶಾಂಗ ಸಚಿವ ಕೈಗೆ ಗ್ಲೌಸ್ ಧರಿಸಿಕೊಂಡು ಸಿಗಾರ್‌ಹಿಡಿದುಕೊಂಡಿದ್ದಾರೆ. ಇನ್ನು, ಆರ್ಥಿಕ ಸಚಿವರ ಕೈಯಲ್ಲಿ ಒಂದು ಮದ್ಯದ ಗ್ಲಾಸ್ ಇದ್ದು, ಸಚಿವ ಬೋಡೆ ಅವರು ಮದ್ಯದ ಬಾಟಲಿ ಇದ್ದ ಟೇಬಲ್‌ಗೆ ಹತ್ತಿರದಲ್ಲೇ ಕಾಣುತ್ತಿದ್ದಾರೆ. ಟೇಬಲ್‌ನಲ್ಲಿ ಷಾಂಪೇನ್ ಬಾಟಲಿ, ಖಾಲಿ ಬಾಟಲಿ ಹಲವು ಗ್ಲಾಸ್‌ಗಳು ಮತ್ತು ತಿನಿಸುಗಳಿವೆ. ರಲುಕಾ ಟರ್ಕನ್ ಮಾಸ್ಕ್ ಧರಿಸಿಕೊಂಡಿದ್ದರೂ ಸರಿಯಾಗಿ ಹಾಕಿಕೊಂಡಿಲ್ಲ.
ಪ್ರಪಂಚಾದ್ಯಂತ ಸೋಂಕು ನಿಯಂತ್ರಣಕ್ಕಾಗಿ ವಿವಿಧ ನಿಯಮವಾಳಿಗಳನ್ನು ಎಲ್ಲ ದೇಶಗಳೂ ಜಾರಿಗೆ ತಂದಿದ್ದು, ಸಮಾಜ ಮತ್ತು ಸಮುದಾಯದ ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಈ ನಿಯಮ ಪಾಲಿಸಬೇಕಾದ್ದು ಅವಶ್ಯ. ಆದರೆ, ನಿಯಮ ರೂಪಿಸಿದವರೇ ನಿಯಮ ಪಾಲಿಸದೆ ತಪ್ಪಿತಸ್ಥನ ಸ್ಥಾನದಲ್ಲಿ ನಿಂತಿದ್ದಾರೆ.
ಈ ಫೋಟೋ ಮೇ 25ರಂದು ನಡೆದ ಸಚಿವ ಸಂಪುಟ ಸಭೆ ಎಂದು ರಾಜಕೀಯ ಮೂಲಗಳು ಹೇಳುತ್ತಿದ್ದು, ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಇದರ ಬೆನ್ನಿಗೆ ಪ್ರಧಾನಿ ಲುಡೋವಿಕ್ ತಪ್ಪೊಪ್ಪಿಕೊಂಡು 690 ಡಾಲರ್(60 ಸಾವಿರ ರೂಪಾಯಿ) ದಂಡವನ್ನು ಪಾವತಿಸಿ ಮುಜುಗರಕ್ಕೆ ಒಳಗಾಗುವುದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.