Advertisement
ನನಗಿನ್ನೂ ನೆನಪಿದೆ. ಅದು ಎಂಜಿನಿಯರಿಂಗ್‌ನ ಮೊದಲ ವರ್ಷ. ನಾವಿಲ್ಯಾಕೆ ಬಂದಿದ್ದೀವಿ, ಏನೇನು ಓದಬೇಕು, ಹೇಗೆಲ್ಲ ಪರೀಕ್ಷೆ ಎದುರಿಸಬೇಕು ಮುಂತಾದ ವಿಷಯಗಳನ್ನು ತಿಳಿಯುವ ಮೊದಲೇ ಪರೀಕ್ಷಾ ವೇಳಾಪಟ್ಟಿ ನೋಟಿಸ್ ಬೋರ್ಡ್ ಮೇಲೆ ನೇತಾಡುತ್ತಿತ್ತು. ಜೊತೆಗೆ ವಾರ್ಷಿಕೋತ್ಸವದ ದಿನವೂ ಬಂತು! ಪರೀಕ್ಷೆ ಬಗ್ಗೆಯೇ ಜಾಸ್ತಿ ಗೊತ್ತಿರಲಿಲ್ಲ. ಅಂದಮೇಲೆ, ನಾವು ವಾರ್ಷಿಕೋತ್ಸವದ ಬಗ್ಗೆ ತಲೆ ಕೆಡಿಸಿಕೊಳ್ಳುವುದು ದೂರದ ಮಾತು. ಹಾಸ್ಟೆಲ್‌ನ ಹುಡುಗಿಯರನ್ನು ಬಿಟ್ಟರೆ (ಅವರಿಗೆ ಸೀನಿಯರ್ಸ್‌ಗಳ ಒತ್ತಡದಿಂದ ಭಾಗವಹಿಸಲೇಬೇಕಾಗಿತ್ತು), ಉಳಿದವರಿಗೆ ವಾರ್ಷಿಕೋತ್ಸವದ ಬಗ್ಗೆ ಹೆಚ್ಚೇನೂ ಕುತೂಹಲವಿರಲಿಲ್ಲ. ನಮಗೆ ಕುತೂಹಲವಿದ್ದುದು ಎರಡೇ ವಿಷಯಗಳ ಬಗ್ಗೆ; ಒಂದು ಅವತ್ತು ಊಟಕ್ಕೆ ಏನೇನಿರುತ್ತದೆ? ಎರಡನೆಯದು ಮತ್ತು ಮುಖ್ಯವಾದದ್ದು ವಾರ್ಷಿಕೋತ್ಸವದ ಕಾರ್ಯಕ್ರಮಗಳು ಮುಗಿದ ಮೇಲೆ ಮನೆಗೆ ಹೋಗಲು ಕಾಲೇಜ್ ಬಸ್ ಅರೇಂಜ್‌ಮೆಂಟ್ ಇರುತ್ತದೋ, ಇಲ್ಲವೋ ಎಂದು!
ನನ್ನ ಹೆಚ್ಚಿನ ಸಹಪಾಠಿಗಳಿಗೆ ಪ್ರೀತಿ ನಿವೇದನೆಯ ಹಾಡುಗಳು ಸಾಲು ಸಾಲಾಗಿ ಬರಲಾರಂಭಿಸಿದವು. ಅದೂ ಅಲ್ಲದೆ, ಕೆಲ ಹುಡುಗರು ತಮ್ಮ ಹೆಸರನ್ನು ಹೇಳದೆ, ಬರೀ ಎಲೆಕ್ಟ್ರಾನಿಕ್ಸ್ ವಿಭಾಗ, ಮೆಕ್ಯಾನಿಕಲ್ ವಿಭಾಗ ಎಂದಷ್ಟೇ ನಮೂದಿಸಿ; ಈ ಹುಡುಗ ಯಾರಿರಬಹುದು ಎಂದು ಹುಡುಗಿಯರ ತಲೆಯೊಳಗೆ ಹುಳ ಬಿಟ್ಟರು. ಆಗ ನಿರೂಪಕರು ಥಟ್ಟನೆ ನನ್ನ ಹೆಸರನ್ನು ಹೇಳಿಬಿಟ್ಟರು! “ಈಗ ಹಾಕಲಾಗುವ ಹಾಡು, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ವಿಭಾಗದ ಅನುಪಮಾ ಬೆಣಚಿನಮರ್ಡಿ ಅವರಿಗೆ’ ಎಂದು ಹೇಳಿದರಷ್ಟೇ. ನಿಮಿರಿ ನಿಂತಿದ್ದ ನನ್ನ ಕಿವಿಗಳು “ಯಾರಿಂದ?’ ಎಂದು ಕೇಳಲು ಹಾತೊರೆದವು. ಆದರೆ, ಇಷ್ಟು ಹೊತ್ತಿನವರೆಗೂ ವಿಧಿವಿಧಾನಗಳಂತೆ ಯಾರಿಗೆ, ಯಾರಿಂದ, ಯಾವ ಹಾಡು ಎಂದು ಹೇಳುತ್ತಿದ್ದವರು, ನನ್ನ ವಿಷಯದಲ್ಲಿ ಮಾತ್ರ ಯಾವೊಂದು ವಿವರಣೆಯನ್ನೂ ಕೊಡದೆ, ನೇರವಾಗಿ ಹಾಡನ್ನೇ ಪ್ಲೇ ಮಾಡಿದರು. ಅದೂ ಯಾವ ಹಾಡು?- ಜೋಗಿ ಚಿತ್ರದ “ಹೊಡಿ ಮಗ ಹೊಡಿ ಮಗ, ಬಿಡಬೇಡ ಅವಾ°…’ ಎಲ್ಲರೂ ಹೋ ಎಂದು ಕೂಗಲು ಶುರು ಮಾಡಿದರು. ಸ್ವಲ್ಪ ಹೊತ್ತು ಜಾಸ್ತಿಯೇ ಪ್ಲೇ ಮಾಡಿದ ನಿರೂಪಕರು, ಹಾಡು ಮುಗಿದ ಮೇಲೆ “ಇದು ಎಲ್ಲ ಫಸ್ಟ್ ಇಯರ್ ಹುಡುಗರ ಕಡೆಯಿಂದ’ ಎಂದು ಒತ್ತಿ ಒತ್ತಿ ಹೇಳಿದರು. ನನಗಂತೂ ಕೋಪ ನೆತ್ತಿಗೇರಿತ್ತು. ನನ್ನ ಸ್ನೇಹಿತೆಯರೆಲ್ಲ ನಕ್ಕು ನಕ್ಕು, “ಏನೇ, ಕಾಲೇಜ್ ಬ್ಯಾಗಲ್ಲಿ ಲಾಂಗು, ಮಚ್ಚು ಏನಾದ್ರೂ ಇಟ್ಕೊಂಡಿದೀಯಾ? ಅವರು ಯಾಕೆ ಆ ಹಾಡನ್ನು ಅರ್ಪಿಸಿದ್ದಾರೆ?’ ಅಂತ ಗೇಲಿ ಮಾಡುತ್ತಿದ್ದರು.
Related Articles
Advertisement
ಆದರೆ, ಇದೊಂದು ಸವಿನೆನಪಾಗಿ ನನ್ನ ಮನಃಪಟಲದಲ್ಲಿ ಉಳಿದಿದೆ. ಈಗಲೂ, ಜೋಗಿ ಚಿತ್ರದ ಹಾಡು ಟಿವಿಯಲ್ಲಿ ಬರುತ್ತಿದ್ದರೆ, ಸ್ನೇಹಿತರು ಮೆಸೇಜ… ಮಾಡಿ, “ಈ ಚಾನೆಲ… ಹಾಕು’ ಅಂತ ಕಿಚಾಯಿಸುತ್ತಾರೆ. ಇವತ್ತಿಗೂ, ಆ “ಎಲ್ಲ ಫಸ್ಟ್ ಇಯರ್ ಹುಡುಗರ ಕಡೆಯಿಂದ’ ಎಂದು ಬರೆದುಕೊಟ್ಟ ಹುಡುಗನನ್ನು ಹುಡುಕುತ್ತಿದ್ದೇನೆ (ಸಿಗಲಿ ನನ್ನ ಕೈಗೆ ಎಂದು!).ಅನುಪಮಾ ಬೆಣಚಿನಮರ್ಡಿ