ಹಬ್ಬ ಹರಿದಿನಗಳೆಂದರೆ ಎಲ್ಲಿಲ್ಲದ ಸಂಭ್ರಮ. ಆಚರಣೆಯ ಹಿಂದಿನ ದಿನವೇ ಎಲ್ಲ ತಯಾರಿಗಳನ್ನು ಮಾಡಿಕೊಂಡು ಹಬ್ಬದ ದಿನದಂದು ಸಂತಸ, ಸಡಗರದಿಂದ ತಮ್ಮ ಮಕ್ಕಳನ್ನು ಒಳಗೊಂಡಂತೆ ಸಂಪ್ರದಾಯದಿಂದ ಹಬ್ಬವನ್ನು ಆಚರಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಹಿರಿಯರು ನಡೆದು ಬಂದ ಹಾದಿಯಲ್ಲಿ ಕಿರಿಯವರಾದ ನಾವುಗಳು ನಮ್ಮ ಆಚರಣೆಗಳನ್ನೇ ಮರೆತುಬಿಡುತ್ತಿದ್ದೇವೆ. ಇಂದಿನ ಯುಗದಲ್ಲಿ ಅದೆಷ್ಟೋ ಯುವಕರಿಗೆ ನಮ್ಮಲ್ಲಿ ನಡೆಯುವ ಹಬ್ಬ ಹರಿದಿನಗಳ ಸಂಪ್ರದಾಯ, ಆಚಾರ ವಿಚಾರಗಳು, ಅವುಗಳಲ್ಲಿನ ನಂಬಿಕೆ ಇವುಗಳ ಬಗೆಗಿನ ಪರಿಚಯವೇ ಇಲ್ಲದಂತಾಗಿಬಿಟ್ಟಿದೆ.
ಅಲ್ಲದೆ ತಂತ್ರಜ್ಞಾನದ ಬಳಕೆಯು ಅತ್ಯಂತ ಹೆಚ್ಚಿನ ರೀತಿಯಲ್ಲಿದ್ದು, ನಮ್ಮನ್ನು ನಾವು ಇಂಟರ್ನೆಟ್ ಯುಗ, ಡಿಜಿಟಲ್ ಮಾಧ್ಯಮಗಳ ಯುಗ ಇವುಗಳ ಸುತ್ತ ಸುತ್ತುವಂತೆ ಮಾರ್ಪಡುತ್ತಿದ್ದೇವೆ ಹಾಗೂ ಮಾರ್ಪಟ್ಟಿದ್ದೇವೆ. ಆದರೆ ಹಿಂದಿನ ದಿನಗಳಲ್ಲಿ ಅಂದರೆ ಸಾಮಾಜಿಕ ಜಾಲತಾಣ, ಇಂಟರ್ನೆಟ್, ತಂತ್ರಜ್ಞಾನ ಇವೆಲ್ಲವೂ ಬರುವ ಮೊದಲು ಯುವಕರೂ ಸೇರಿದಂತೆ ನಮ್ಮ ಸುತ್ತ ಮುತ್ತಲಿನ ಚಟುವಟಿಕೆಗಳನ್ನು, ಆಚರಣೆಗಳನ್ನು ಮೈಗೂಡಿಸಿಕೊಂಡಿದ್ದೆವು. ದುರದೃಷ್ಟವಶಾತ್ ಈಗಿನ ಯುವಜನರಿಗೆ ಹಿಂದಿನ ವಿಷಯ ಜ್ಞಾನವು ಮಾಸಿಹೋಗಿದೆ. ಇವೆಲ್ಲದರ ಕಡೆಗಿನ ಒಲವು ಕಡಿಮೆಯಾಗುತ್ತಿದೆ.
ಹಬ್ಬಗಳು ನಮ್ಮ ಸಾಮಾಜಿಕ ಕೌಶಲಗಳು, ಅದರಲ್ಲಿನ ಆಚರಣೆಯ ಮಹತ್ವ ಇವೆಲ್ಲವನ್ನೂ ಒಳಗೊಂಡು ಜನರನ್ನು ಒಂದುಗೂಡಿಸಿ ಎಲ್ಲರೂ ಸಂಭ್ರಮಿಸುವ ಸಂತಸದ ದಿನವಾಗಿದೆ. ಇವುಗಳು ನಮಗೆ ಪ್ರತಿಯೊಂದು ಅಂಶವನ್ನು ಅನುಭವಿಸಲು ಮತ್ತು ಆಚರಿಸಲು ಭವ್ಯವಾದ ಮಾರ್ಗವನ್ನು ರೂಪಿಸಿಕೊಡುತ್ತವೆ. ಅಲ್ಲದೇ ನಮ್ಮ ನಾಡು, ನುಡಿ ಹಾಗೂ ಸಂಸ್ಕೃತಿಯ ಬಗ್ಗೆ ಬಲವಾದ ಗೌರವವನ್ನು ಬೆಳೆಸಿಕೊಳ್ಳಲು ಜೊತೆಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ. ಈ ಹಬ್ಬಗಳ ಆಚರಣೆಯು ನಮ್ಮ ಕುಟುಂಬ ಸ್ನೇಹಿತರೊಂದಿಗೆ ಸುಂದರವಾದ ಕ್ಷಣವನ್ನು ಕಲ್ಪಿಸಿಕೊಡುವಲ್ಲಿ ಹಾಗೂ ಮಹತ್ವಪೂರ್ಣವಾದ ನೆನಪುಗಳನ್ನು ಕಟ್ಟಿಕೊಡುತ್ತವೆ.ಆದರೆ ಇಂದು ಅವುಗಳು ಕೇವಲ ನೆನಪಾಗಿಯೇ ಉಳಿದುಬಿಡುತ್ತದೆ ಎಂಬ ಅಧ್ಯಾಯವನ್ನು ಸೃಷ್ಟಿಸುತ್ತಿದೆ. ಹೌದು, ಇಂದಿನ ಜನಾಂಗದಲ್ಲಿ ಅದರಲ್ಲೂ ಯುವಕರಲ್ಲಿ ಹಬ್ಬಗಳ ಪಾತ್ರ ಬಹಳ ದೊಡ್ಡದಿದೆ. ಏಕೆಂದರೆ ಪ್ರಸ್ತುತ ಕಾಲಘಟ್ಟದ ಯುವಕರಿಗೆ ನಮ್ಮ ದೇಶದಲ್ಲಿನ ಆಚಾರ ವಿಚಾರಗಳು,ಹಿರಿಯರು ನಡೆಸಿಕೊಂಡು ಬಂದಂತಹ ಪದ್ಧತಿಗಳು, ಪರಂಪರಾ ಭಾಷಾ ಪರಿಚಯ, ಹಬ್ಬಗಳಲ್ಲಿನ ಆಹಾರ ಪದ್ಧತಿ, ವೇಷಭೂಷಣ,ಅಲಂಕಾರ,ಉಡುಗೆ ತೊಡುಗೆ ಇವೆಲ್ಲದರ ಕುರಿತಾಗಿ ಅಸಂಖ್ಯ ಮಾಹಿತಿಯನ್ನು ತಿಳಿದಿದ್ದಾರೆಯೇ ಹೊರತು ಅವುಗಳ ಕಡೆಗಿನ ಆಸಕ್ತಿಯನ್ನು, ಇಂತಹದ್ದೊಂದು ವಿಚಾರ ಇತ್ತೆಂಬುದನ್ನೇ ಮರೆತುಬಿಟ್ಟಿದ್ದಾರೆ.
ಇಂತಹ ಆಚರಣೆಗಳ ವಿಷಯವನ್ನೇ ತೆಗೆದುಕೊಂಡರೆ ಇಂದಿನ ಅದೆಷ್ಟೋ ಮಕ್ಕಳಿಗೆ ತಮ್ಮ ತಮ್ಮ ಮನೆಗಳಲ್ಲಿ ಯಾವ ಹಬ್ಬ ಹದಿರಿನಗಳನ್ನು ಮಾಡುತ್ತಾರೆ. ಅದರ ವೈಶಿಷ್ಟ್ಯತೆ ಏನು ಎಂಬುದು ತಿಳಿದಿರುವುದಿಲ್ಲ. ಅದರ ಬದಲಿಗೆ ಕೇವಲ ತಮ್ಮ ಕೆಲಸವಾಯಿತು, ತಾವಾಯಿತು ಎಂಬಂತೆ ಮೂಲೆಗುಂಪಾಗಿ ಬಿಟ್ಟಿದ್ದಾರೆ.
ಇಂದಿನ ದಿನಗಳಲ್ಲಿ ಮಕ್ಕಳು ಸ್ಲೇಟು ಬಳಪ ಹಿಡಿಯುವುದನ್ನು ಬಿಟ್ಟು ಸ್ಮಾರ್ಟ್ ಫೋನ್ ಎಂಬ ಗೀಳನ್ನು ಬೆಳೆಸಿಕೊಂಡು ತಮ್ಮ ಸುತ್ತ ಮುತ್ತಲಿನ ಆಗು ಹೋಗುಗಳನ್ನು ಮರೆತು ತಮ್ಮ ನಡುವೆಯೇ ಒಂದು ಚೌಕಟ್ಟನ್ನು ಸೃಷ್ಟಿಸಿಕೊಂಡು ಬದುಕುತ್ತಿದ್ದಾರೆ. ಆ ಚೌಕಟ್ಟಿನಿಂದ ಹೊರ ಬರಲು ಮುಖ್ಯವಾಗಿ ಪೋಷಕರು ತಮ್ಮ ತಮ್ಮ ಮಕ್ಕಳೊಂದಿಗೆ ಬೆರೆತು ಪ್ರಸ್ತುತ ವಯೋಮಾನದಲ್ಲಿ ಏನಾಗುತ್ತಿದೆ,ಯಾವ ರೀತಿಯ ಆಚರಣೆಗಳು ನಡೆಯುತ್ತಿವೆ. ನಮ್ಮ ಸಂಸ್ಕೃತಿ, ಸಾಮಾಜಿಕ ಕೌಶಲಗಳು ಏನಿವೆ ಅದರಲ್ಲಿ ನಮ್ಮ ಪಾತ್ರವೇನು ಎಂಬುದನ್ನು ತಿಳಿಸುವಂತಹ ಪ್ರಯತ್ನಗಳು ನಡೆಯಬೇಕಿವೆ. ಹಬ್ಬಗಳಲ್ಲಿ ಆಚಾರಗಳು,ಮಹತ್ವ ಎಲ್ಲವನ್ನೂ ತಿಳಿದು ಪ್ರತಿಯೊಂದು ಹಬ್ಬಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡು ಎಲ್ಲರೊಂದಿಗೆ ಬೆರೆತು ಸಮಾಜದ ಸಂಪ್ರದಾಯವನ್ನು ಉಳಿಸುವಲ್ಲಿ ಪಾತ್ರವಹಿಸಬೇಕಿದೆ.
-ಮೇಘಾ ಡಿ. ಕಿರಿಮಂಜೇಶ್ವರ
ವಿ.ವಿ., ಬೆಂಗಳೂರು