ಯಾದಗಿರಿ: ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡದಾಗಿದ್ದು, ವಿದ್ಯಾರ್ಥಿಗಳ ಮನೋವಿಕಾಸವನ್ನು ವೃದ್ಧಿಗೊಳಿಸುವಲ್ಲಿ ಶಿಕ್ಷಕರು ಕಾರ್ಯ ಪ್ರವೃತ್ತರಾಗಬೇಕೆಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ ಶಾಲಾ ಅಭಿವೃದ್ಧಿ ಜೊತೆಗೆ ಶೈಕ್ಷಣಿಕ ಪ್ರಗತಿಗೆ ಜಿಲ್ಲಾಡಳಿತ ಹಾಗೂ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಆದರೆ, ಶಿಕ್ಷಣದ ಗುಣಮಟ್ಟ ಹೆಚ್ಚುವಲ್ಲಿ ಶಿಕ್ಷಕರ ಪಾತ್ರ ದೊಡ್ಡದೆಂದು ತಿಳಿಸಿದರು.
ನಗರದ ಡಿಡಿಪಿಐ ಕಚೇರಿ ಆವರಣದಲ್ಲಿ ಕೌನ್ಸಿಲಿಂಗ್ ಕಾರ್ಯಕ್ರಮದಲ್ಲಿ ಹೊಸದಾಗಿ ನೇಮಕವಾಗುತ್ತಿರುವ ಶಿಕ್ಷಕರ ಕಾರ್ಯಾದೇಶ ಪತ್ರ ವಿತರಿಸಿ ಅವರು ಮಾತನಾಡಿದರು.
ಶಿಕ್ಷಕರ ಬಹುದೊಡ್ಡ ಆಸ್ತಿ ಎಂದರೆ ವಿದ್ಯಾರ್ಥಿ ಬಳಗ, ಅಂತಹ ವಿದ್ಯಾರ್ಥಿಗಳ ಜೀವನವನ್ನು ರೂಪಿಸುವಲ್ಲಿ ಶಾಲಾ ಶಿಕ್ಷಕರ ಕಾಳಜಿ ಹಿರಿದಾದ್ದು ಎಂದರು.
ಜಿಲ್ಲೆಯಲ್ಲಿ ಶಿಕ್ಷಣದ ಗುಣಮಟ್ಟ ಕೆಳಮಟ್ಟದಲ್ಲಿದೆ, ನಿವೆಲ್ಲರೂ ಯುವಕರಿದ್ದೀರಿ, ಹೆಚ್ಚಿನ ಒತ್ತು ನೀಡಿ ಹೆಚ್ವಿನ ಶ್ರಮ ಹಾಕಿ ಜಿಲ್ಲೆಯಲ್ಲಿ ಶೈಕ್ಷಣಿಕ ಮಟ್ಟ ಹೆಚ್ಚುಸುವಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಚಣ ಕೊಡಲು ಸಹಕರಿಸಿ ಎಂದು ಆಯ್ಕೆಯಾದ ಶಿಕ್ಷಕರಿಗೆ ಸಚಿವ ದರ್ಶನಾಪುರ ಕಿವಿಮಾತು ಹೇಳಿದರು.
750 ಕೋಟಿ ರೂಪಾಯಿ ಶಿಕ್ಷಣ ಇಲಾಖೆಗೆ ಇರಿಸಲಾಗಿದೆ. ಜಿಲ್ಲಾಡಳಿತ ಹಾಗೂ ಸರ್ಕಾರ ಶಾಲೆಯ ಅಭಿವೃದ್ಧಿಗೆ ಸದಾ ಸಿದ್ದವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ್, ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಜಿ.ಪಂ ಸಿ.ಇ.ಓ ಗರಿಮಾ ಪನ್ವಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಒಟ್ಟು 622 ಕಾರ್ಯಾದೇಶ ಪತ್ರ ವಿತರಿಸಲಾಯಿತು. ಎರಡು ದಿನಗಳ ಕಾಲ ಕೌನ್ಸಿಲಿಂಗ್ ನಡೆಯಿತು.