ರಬಕವಿ-ಬನಹಟ್ಟಿ: ಭಾರತ ಯುವ ಶಕ್ತಿಯಿಂದ ಕೂಡಿದ ದೇಶವಾಗಿದೆ. ಯುವ ಶಕ್ತಿಯಿಂದ ತುಂಬಿರುವ ದೇಶ ಪ್ರಗತಿ ಸಂಕೇತವಾಗಿದೆ. ಆದ್ದರಿಂದ ದೇಶದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ| ಎಚ್.ವೈ. ಕಾಂಬಳೆ ಹೇಳಿದರು.
ಮಂಗಳವಾರ ಸ್ಥಳೀಯ ತಮ್ಮಣ್ಣಪ್ಪ ಚಿಕ್ಕೋಡಿ ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಪಠ್ಯ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಂದ ಕಾಲೇಜುಗಳ ಘನತೆ ಮತ್ತು ಗೌರವ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳ ಸಾಧನೆಯಲ್ಲಿ ಉಪನ್ಯಾಸಕರ ಪಾತ್ರ ಮುಖ್ಯವಾಗಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಗಣಿತ ವಿಭಾಗದ ನಿವೃತ್ತ ಉಪನ್ಯಾಸಕ ಡಾ| ಟಿ.ವೆಂಕಟೇಶ ಮಾತನಾಡಿ, ಭಾರತದಲ್ಲಿರುವ ಅನೇಕ ಪ್ರತಿಭಾವಂತ ಯುವಕರು ಬೇರೆ ದೇಶಕ್ಕೆ ಹೋಗುತ್ತಿದ್ದಾರೆ. ಇದರಿಂದಾಗಿ ದೇಶಕ್ಕೆ ಸಾಕಷ್ಟು ಹಾನಿಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿಯ ಖಾಸಗಿ ಶಿಕ್ಷಣ ಸಂಸ್ಥೆಗಳು, ಉದ್ಯಮೆದಾರರು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಪ್ರಾಚಾರ್ಯ ಡಾ| ಜಿ.ಆರ್.ಜುನ್ನಾಯ್ಕರ್, ಡಾ| ಮಂಜುನಾಥ ಬೆನ್ನೂರ, ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿ ಸುರೇಶ ನಡೋಣಿ ಮಾತಾಡಿದರು. ಜನತಾ ಶಿಕ್ಷಣ ಸಂಘದ ಉಪಾಧ್ಯಕ್ಷ ರಾಮಣ್ಣ ಭದ್ರನವರ ಉದ್ಘಾಟಿಸಿದರು. ಡಾ| ವಿ.ಆರ್. ಕುಳ್ಳಿ, ಭೀಮಶಿ ಕುಲಗೋಡ, ಶಂಕರ ಜಾಲಿಗಿಡದ, ಡಾ| ಪ್ರಕಾಶ ಕೆಂಗನಾಳ, ಸಂಗಮೇಶ ಕಚ್ಚು, ಅಪೂರ್ವಾ ಹೊರಟ್ಟಿ, ಜಿ.ಎಸ್.ಪಾಟೀಲ ಇದ್ದರು.
ಮಧು ಗುರವ ಪ್ರಾರ್ಥಿಸಿದರು. ಪ್ರೊ| ವೈ.ಬಿ. ಕೊರಡೂರ ಸ್ವಾಗತಿಸಿದರು. ಕನ್ಯಾಕುಮಾರಿ ಹೂಗಾರ ನಿರೂಪಿಸಿದರು. ವಿ.ವೈ.ಪಾಟೀಲ ವಂದಿಸಿದರು. ಡಾ| ಮನೋಹರ ಶಿರಹಟ್ಟಿ, ಡಾ| ರೇಶ್ಮಾ ಗಜಾಕೋಶ, ಗೀತಾ ಸಜ್ಜನ, ಡಾ| ರಮೇಶ ಮಾಗುರಿ, ಎಸ್ .ಬಿ. ಉಕ್ಕಲಿ, ಡಾ| ಗೀತಾ ಗೋಂದಕರ್, ರಶ್ಮಿ ಕೊಕಟನೂರ, ಕಾವೇರಿ ಜಗದಾಳ, ಶ್ವೇತಾ ಮಠದ, ಪೂಜಾ ಚತುರ್ವೇದಿ, ವಿಜಯಲಕ್ಷ್ಮೀ ಮಾಚಕನೂರ ಇದ್ದರು.