ಆಗಷ್ಟೇ ಆಸ್ಪತ್ರೆಯಿಂದ ತಮ್ಮ ನವಜಾತ ಶಿಶುವನ್ನು ಡಿಸಾcರ್ಜ್ ಮಾಡಿಸಿಕೊಂಡು ಶಂಕರ ಮತ್ತು ಸರೋಜಾ ಮನೆಗೆ ಬಂದರು. ಅವರ ಬರುವಿಕೆಯನ್ನೇ ಕಾಯುತಿದ್ದ ಅಕ್ಕ ಪಕ್ಕದ ಮನೆಯವರು, “ಅಯ್ಯೋ! ನಿಮ್ಮ ಮಗು ಒಂಬತ್ತು ತಿಂಗಳು ತುಂಬುವ ಮೊದಲೇ ಜನಿಸಿತಾ?’ ಎಂಬ ಒಂದು ಪ್ರಶ್ನೆಯಿಂದ ಆರಂಭಿಸಿ ಇನ್ನೂ ಹಲವು ಪ್ರಶ್ನೆ ಹಾಗೂ ಸಲಹೆಗಳ ಸುರಿಮಳೆಯನ್ನೇ ಸುರಿಸಿದರು. ಅವರಿವರ ಮಾತುಗಳನ್ನೆಲ್ಲ ಕೇಳಿದ ನವ ಪೋಷಕರಾದ ಶಂಕರ ಮತ್ತು ಸರೋಜ ಅಲ್ಲಿಯೇ ಸ್ತಬ್ಧರಾಗಿ ನಿಂತರು. ತಮ್ಮ ಅವಧಿಪೂರ್ವ ಜನಿಸಿದ ಮಗುವಿನ ಆರೈಕೆ ಬಗ್ಗೆ ಅವರಿಗಿದ್ದ ಗೊಂದಲಗಳು ಇನ್ನೂ ಹೆಚ್ಚಾದವು!
ನೀವು ಕೂಡ ಶಂಕರ ಮತ್ತು ಸರೋಜರಂತೆ ಅವಧಿ ಪೂರ್ವ ಜನಿಸಿದ ಮಗುವಿನ ಪೋಷಕರಾಗಿದ್ದರೆ ಚಿಂತಿಸಬೇಡಿ, ಇವರ ಆರೈಕೆ ಅವಧಿ ತುಂಬಿ (ಟರ್ಮ್) ಜನಿಸಿದ ಮಗುವಿನ ಆರೈಕೆಗಿಂತ ಹೆಚ್ಚೇನೂ ಭಿನ್ನವಾಗಿರುವುದಿಲ್ಲ. ಮಗುವಿನ ಸುತ್ತಲಿನ ಪರಿಸರದಲ್ಲಿ ನೀವು ಸ್ವಲ್ಪ ಬದಲಾವಣೆಗಳನ್ನು ಮಾಡುವುದು, ಈ ಕೆಳಗೆ ನೀಡಿರುವ ಸಲಹೆ ಸೂಚನೆಗಳನ್ನು ಪಾಲಿಸುವುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಮಕ್ಕಳ ತಜ್ಞರ ಬಳಿ ಪರಾಮರ್ಶಿಸಿದರೆ ಉತ್ತಮವಾಗಿರುತ್ತದೆ.
ಗರ್ಭಾವಸ್ಥೆಯ ಪೂರ್ಣ ಅವಧಿಯ ಮೊದಲೇ ಜನಿಸುವ ಮಗುವನ್ನು ಅವಧಿ ಪೂರ್ವದಲ್ಲಿ ಜನಿಸಿದ ಮಗು ಎಂದು ಗುರುತಿಸಲಾಗುವುದು. ಕೆಲವು ಸಂದರ್ಭದಲ್ಲಿ ಒಂಬತ್ತು ತಿಂಗಳು ಪೂರ್ಣಗೊಳ್ಳುವ ಮೊದಲೇ ಅಂದರೆ ಏಳು ತಿಂಗಳಲ್ಲಿ ಅಥವಾ ಎಂಟನೇ ತಿಂಗಳಲ್ಲಿಯೇ ಪ್ರಸವ ಆಗುವ ಸಾಧ್ಯತೆಗಳು ಇರುತ್ತವೆ. ಮಗು ದೈಹಿಕವಾಗಿ ಮಾರ್ಪಾಡು ಹೊಂದಿರುತ್ತದೆಯಾದರೂ ದೇಹದೊಳಗಿನ ಆಂತರಿಕ ರಚನೆಯು ಸಂಪೂರ್ಣವಾಗಿ ಬೆಳವಣಿಗೆ ಹೊಂದಿರುವುದಿಲ್ಲ. ಕಡಿಮೆ ತೂಕ, ಶ್ವಾಸಕೋಶದ ಅಭಿವೃದ್ಧಿ ಮಂದಗತಿಯಲ್ಲಿ ಇರುವುದು, ದುರ್ಬಲವಾದ ರೋಗನಿರೋಧಕ ಶಕ್ತಿ ಹೊಂದಿರುವುದು ಕಂಡುಬರುತ್ತದೆ. ಕೆಲವೊಮ್ಮೆ ಶೀತ, ಕೆಮ್ಮು, ನ್ಯುಮೋನಿಯಾ ಮತ್ತು ಉದರಶೂಲೆಗಳಂತಹ ಸೋಂಕುಗಳು ಹೆಚ್ಚಾಗಿ ಕಂಡುಬರುತ್ತವೆ. ಹಾಗಾಗಿ ಆ ಮಗುವಿನ ಆರೈಕೆಯನ್ನು ಮಾಡುವಾಗ ಹೆಚ್ಚು ಕಾಳಜಿಯನ್ನು ತೋರಬೇಕಾಗುವುದು. ಈ ಲೇಖನದಲ್ಲಿ ಫಿಸಿಯೋಥೆರಪಿಯ ಬಗೆಗಿನ ಮಾಹಿತಿ ನೀಡಲಾಗಿದೆ.
ಮಕ್ಕಳ ಫಿಸಿಯೋಥೆರಪಿಯ ಪಾತ್ರ
ಮಗುವಿನ ಮೆದುಳಿನ ಬೆಳವಣಿಗೆಗೆ ಮೊದಲ ಎರಡು ವರ್ಷಗಳು ಬಹಳ ಮುಖ್ಯವಾಗಿರುತ್ತದೆ (ನ್ಯೂರೋಪ್ಲಾಸ್ಟಿಸಿಟಿ).
ಆದ್ದರಿಂದ, ಮಗುವಿನ ಮೆದುಳಿನ ಬೆಳವಣಿಗೆಯನ್ನು ಸಕಾರಾತ್ಮಕವಾಗಿ ವೃದ್ಧಿಗೊಳಿಸಲು ಕೆಲವೊಂದು ಚಟುವಟಿಗಳು ಸಹಾಯ ಮಾಡಬಹುದು.
ಮಗುವಿನ ಬೆಳವಣಿಗೆಯನ್ನು ಪ್ರೋತ್ಸಾಹಿಸುವ ಚಟುವಟಿಕೆಗಳು ಹಾಗೂ ಮಾರ್ಗಗಳು
- ದಿನನಿತ್ಯ ಮಗು ಎಚ್ಚರ ಇರುವ ಹಾಗೂ ಚಟುವಟಿಕೆಯಿಂದ ಇರುವ ಸಮಯವನ್ನು ಗುರುತಿಸುವುದು. ಪ್ರತಿದಿನ, ಮಗುವಿನೊಂದಿಗೆ ಆಟವಾಡಲು ಹಾಗೂ ಮಾತನಾಡಲೆಂದೇ ಸಮಯವನ್ನು ನಿಗದಿಪಡಿಸುವುದು ಹಾಗೂ ಅದನ್ನು ಅನುಸರಿಸುವುದು.
- ಮಗು ಆದಷ್ಟು ಲವಲವಿಕೆಯಿಂದ ಇರುವಂತೆ ನೋಡಿಕೊಳ್ಳುವುದು. ಮಗುವಿಗೆ ಕುತೂಹಲ ಹುಟ್ಟಿಸುವ ಆಟಗಳನ್ನು ಆಡುವುದು, ವಸ್ತುಗಳನ್ನು ತೋರಿಸುವುದು, ಶಬ್ದಗಳನ್ನು ಮಾಡುವುದು ಇತ್ಯಾದಿ.
- ಮಗುವಿನ ಆಸಕ್ತಿ ಹೆಚ್ಚುವಂತಹ ಚಟುವಟಿಕೆಗಳನ್ನು ಮಾಡುವುದು. ಮಗುವಿನೊಂದಿಗೆ ಇರುವಾಗ ಭಜನೆ, ಜೋಗುಳ ಅಥವಾ ಹಾಡುಗಳನ್ನು ಹಾಡುವುದು.
- ಮಗುವಿಗೆ ವಿಭಿನ್ನ ರೀತಿಯ ರಚನೆ ಅಥವಾ ವಿನ್ಯಾಸಗಳಿರುವ ಚಿತ್ರಗಳನ್ನು ತೋರಿಸುವುದು. ಮೊದಲು ಮಗು ಅದನ್ನೇ ನೋಡುತ್ತಿರಲು ಬಿಡುವುದು ಬಳಿಕ ಚಿತ್ರವನ್ನು ನಿಧಾನವಾಗಿ ಚಲಿಸುವುದು. ಇದು ಮಗುವಿಗೆ ಸುತ್ತಲೂ ನೋಡಲು ಹಾಗು ಚಲಿಸುವ ವಸ್ತುಗಳನ್ನು ನೋಡಲು ಸಹಕಾರಿಯಾಗಬಹುದು.
- ಮಗುವಿನ ದೃಷ್ಟಿ ಹೆಚ್ಚಿಸಲು ಬಣ್ಣಗಳಾದ, ಕಪ್ಪು-ಬಿಳುಪು, ಹಳದಿ, ಕೆಂಪು, ಹಸಿರು ಇರುವ ವಸ್ತುಗಳು, ಆಟಿಕೆಗಳನ್ನು ತೋರಿಸುವುದು.
- ಶಬ್ದ ಮಾಡುವ ಆಟಿಕೆಗಳು – ಗಿಲ್ಕಿ, ಗೆಜ್ಜೆಯೊಂದಿಗೆ ಶಬ್ದ ಮಾಡುವುದು, ಮಗು ಅದನ್ನು ಆಲಿಸುವಂತೆ ಮಾಡುವುದು.
- ಮಗುವಿಗೆ ಶುದ್ಧ ತೆಂಗಿನ ಎಣ್ಣೆಯಲ್ಲಿ ಸೌಮ್ಯವಾಗಿ ಮಾಲೀಶು ಮಾಡುವುದು ಉತ್ತಮ.
- ಮಗುವನ್ನು ತೊಟ್ಟಿಲಲ್ಲಿ ಮಲಗಿಸಿರುವಾಗ ಆಟಿಕೆಗಳನ್ನು ಮಗುವಿನ ಕಣ್ಣಿನ ಅಥವಾ ಎದೆಯ ನೇರಕ್ಕೆ ನಿರ್ದಿಷ್ಟ ಅಂತರದಲ್ಲಿ ಅಲುಗಾಡಿಸು ವುದು. ಹೀಗೆ ಮಾಡುವುದರಿಂದ ಮಗುವಿನ ದೃಷಿಹಾಯಿಸುವಿಕೆ ಹಾಗು ಕೈ ಮತ್ತು ಕಣ್ಣಿನ ಚಲನೆಗಳನ್ನು ಪ್ರೋತ್ಸಾಹಿಸಬಹುದು.
- ಮಗುವಿಗೆ ಹಾಡು ಹೇಳುವುದು, ಕಥೆ ಹೇಳುವುದು, ಮನೆಯವರ ಪರಿಚಯ ಹೇಳಿಕೊಡುವುದು, ಮಗುವಿನ ಸುತ್ತಲಿನ ಪ್ರಪಂಚದ ಬಗ್ಗೆ ಹೇಳುವುದು. ಹೀಗೆ ಮಾಡುವುದರಿಂದ ಅವರ ಅರಿವು, ಮಾನಸಿಕ ಹಾಗೂ ಕಲ್ಪನಾ ಶಕ್ತಿ ಹೆಚ್ಚುತ್ತದೆ.
- ಕೇವಲ ಪೋಷಕರಲ್ಲದೆ, ಮಗುವಿನ ಕುಟುಂಬದವರು ಕೂಡ ಚಟುವಟಿಕೆಗಳಲ್ಲಿ ಭಾಗಿಯಾದರೆ ಮಗು ಎಲ್ಲ ರೀತಿಯಲ್ಲೂ (ಭೌತಿಕ, ಮಾನಸಿಕ ಹಾಗೂ ಸಾಮಾಜಿಕ) ಬೆಳವಣಿಗೆ ಪಡೆಯಲು ಸಾಧ್ಯವಾಗುತ್ತದೆ.
ನೀವು ನಿಯೋನೇಟಲ್ ತೀವ್ರ ನಿಗಾ ವಿಭಾಗದಲ್ಲಿ ಕಾಂಗರೂ ಮದರ್‌ಕೇರನ್ನು ಅಭ್ಯಾಸ ಮಾಡಿರುವಂತೆ ಮನೆಯಲ್ಲಿ ಕೂಡ ಕೆಲವು ದಿನಗಳ ಕಾಲ ಮುಂದುವರಿಸಿದರೆ ಉತ್ತಮ.
ಮನೆಯ ಬೆಚ್ಚಗಿನ ಕೋಣೆಯಲ್ಲಿ ನಿಮ್ಮ ಮಗುವಿಗೆ ಕೇವಲ ಮನೆಯಲ್ಲಿ ಹೊಲಿಸಿದ ಬಟ್ಟೆಯನ್ನು/ ಚಡ್ಡಿಯನ್ನು (ಡೈಪರ್) ಧರಿಸಿ, ಮಗುವನ್ನು ನಿಮ್ಮ ಎದೆಯ ಮೇಲೆ ಇರಿಸಿ ಹಾಗೂ ಮಗುವಿನ ತಲೆಯನ್ನು ಒಂದು ಬದಿಗೆ ತಿರುಗಿಸಿ, ಮಗುವಿನ ಚರ್ಮ ನಿಮ್ಮ ಚರ್ಮಕ್ಕೆ ಮುಟ್ಟುವಂತೆ ಇರಿಸುವುದು.
ಕಾಂಗರೂ ಮದರ್‌ಕೇರನ್ನು ಸಾದ್ಯವಾದಷ್ಟು ಕಾಲ ಮತ್ತು ಸಾಧ್ಯವಾದಷ್ಟು ಸಲ ಅಭ್ಯಾಸ ಮಾಡಿ. ಅವಧಿ ಪೂರ್ವ ಹುಟ್ಟಿದ ಶಿಶುಗಳಿಗೆ ಕಾಂಗರೂ ಮದರ್ ಕೇರನ್ನು ನೀಡುವುದರಿಂದ, ಪೋಷಕ-ಶಿಶುವಿನ ಬಂಧ ಹೆಚ್ಚುವುದು, ಸ್ತನಪಾನವನ್ನು ಉತ್ತೇಜಿಸುವುದು, ಶಿಶುವಿನ ಹೃದಯ ಮತ್ತು ಉಸಿರಾಟದ ದರವನ್ನು ಸ್ಥಿರಗೊಳ್ಳಿಸುವುದು, ದೇಹದ ಉಷ್ಣತೆಯನ್ನು ಕಾಪಾಡುವಲ್ಲಿ ಸಹಾಯ ಮಾಡಬಹುದು ಹಾಗೂ ಬೆಳವಣಿಗೆಯನ್ನು ಉತ್ತೇಜಿಸಬಹುದು.
ಮಕ್ಕಳ ಫಿಸಿಯೋಥೆರಪಿಯ ಆಧಾರಿತ ಚಟುವಟಿಕೆಗಳ ಬಗ್ಗೆ ಕಳೆದ ವಾರದ ಲೇಖನದಲ್ಲಿ ವಿವರವಾಗಿ ಹೇಳಿದ್ದೇವೆ. ಈ ವಾರದ ಲೇಖನದಲ್ಲಿ ನವಜಾತ ಶಿಶುವಿನೊಂದಿಗೆ ಮಾಡಬಹುದಾದ ಚಟುವಟಿಕೆಗಳೊಂದಿಗೆ ದಿನ ನಿತ್ಯದ ಆರೈಕೆಯ ಬಗ್ಗೆ ಕೆಲವೊಂದು ಮಾಹಿತಿಯನ್ನು ನೀಡಲಾಗಿದೆ. ಹಳೆಯ ಕಾಲದ ಕೂಡು ಕುಟುಂಬದ ಮನೆಗಳಲ್ಲಿ ಬಾಣಂತಿ ಕೋಣೆಯೆಂದು ಒಂದು ಪ್ರತ್ಯೇಕ ಕೋಣೆ ಇರುತ್ತಿತ್ತು.
ಈ ಕೋಣೆಯಲ್ಲಿ ಹೊರಗಿನ ಗಾಳಿ ಬೆಳಕು ನಿಯಮಿತವಾಗಿ ಇರುವುದರಿಂದ ಮತ್ತು ಮಗುವನ್ನು ನೋಡಲು ಬರುವ ಸಂಬಂಧಿಕರ ಸಂಖ್ಯೆ ಕಡಿಮೆ ಇದ್ದ ಕಾರಣ ಯಾವುದೇ ರೀತಿಯ ಸೋಂಕು ಹರಡುವ ಸಾಧ್ಯತೆ ಕಡಿಮೆ ಇರುತಿತ್ತು. ಆದರೆ, ಈಗ ಕಾಲ ಬದಲಾಗಿದೆ. ಅವಧಿಪೂರ್ವ ಜನನ ಶಿಶುಗಳು ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಆದ್ದರಿಂದ ಮಗುವಿನೊಂದಿಗೆ ಕಿಕ್ಕಿರಿದ ಸಾಮಾಜಿಕ ಸ್ಥಳಗಳಿಗೆ ಭೇಟಿ ನೀಡದಿರುವುದು, ಮನೆಗೆ ಮಗುವನ್ನು ನೋಡಲು ಬರುವ ಸಂಬಂಧಿಕರ ಸಂಖ್ಯೆಯನ್ನು ಮಿತಗೊಳಿಸುವುದು ಉತ್ತಮ. ಬಂದ ಜನರಿಂದ ಮಗುವಿಗೆ ಸೋಂಕು ಅಥವಾ ಅಲರ್ಜಿ ಉಂಟಾಗಬಹುದು.
ಮಗುವನ್ನು ಮುಟ್ಟುವ ಅಥವಾ ಆರೈಕೆ ನೀಡುವ ಪ್ರತಿಯೊಬ್ಬರು ಕೈ ಕಾಲುಗಳನ್ನು ತೊಳೆಯುವುದು ಹಾಗು ಸ್ವತ್ಛತೆಯನ್ನು ಕಾಪಾಡುವುದು ಒಳ್ಳೆಯದು.
ನಿಮ್ಮ ಮಗುವು ಬೆಳವಣಿಗೆಯ ಮೈಲುಗಲ್ಲುಗಳನ್ನು ಸಾಧಿಸಲು ನಿಧಾನವಾಗಿದ್ದರೆ ಚಿಂತಿಸಬೇಡಿ. ಅವಧಿಪೂರ್ವ ಜನಿಸಿದ ಶಿಶುಗಳಿಗೆ ಬೆಳವಣಿಗೆಯ ಮೈಲುಗಲ್ಲುಗಳನ್ನು ಸಾಧಿಸಲು ಸ್ವಲ್ಪ ಸಮಯ ಹೆಚ್ಚಾಗಿ ಬೇಕಾಗಬಹುದು.
ಆದರೆ ನಿಮ್ಮ ಮಗು ಗಮನಾರ್ಹ ವಿಳಂಬವನ್ನು ತೋರಿಸುತ್ತಿದ್ದರೆ ಉದಾ: ಯಾವುದೇ ವಸ್ತುವನ್ನು ದೃಷ್ಟಿ ನೀಡಲು ಸಾಧ್ಯವಿಲ್ಲದಿದ್ದರೆ, ದೊಡ್ಡ ಶಬ್ದಗಳಿಗೆ ಪ್ರತಿಕ್ರಿಯೆಸದಿದ್ದರೆ, ಸಮಾಧಾನ ಮಾಡಲು ಸಾಧ್ಯವಾಗದಿದ್ದರೆ, ತನ್ನ ತಲೆಯನ್ನು ಸಹಾಯವಿಲ್ಲದೆ ಎತ್ತಲು ಸಾಧ್ಯವಾಗದಿದ್ದರೆ, ಮುಖದ ಭಾವನೆಗಳನ್ನು ಗುರುತಿಸದಿದ್ದರೆ, ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರೆ, ಅತಿಯಾಗಿ ಬೆನ್ನನ್ನು ಹಿಂದೆ ಬಾಗಿಸುತ್ತಿದ್ದರೆ ಹಾಗೂ ಅಂಗೈಯನ್ನು ಯಾವಾಗಲೂ ಮುಷ್ಠಿ ಹಿಡಿದಿದ್ದರೆ, ಯಾವುದೇ ರೀತಿಯ ಶಬ್ದಗಳನ್ನು ಮಾಡಲು ಸಾಧ್ಯವಿಲ್ಲದಿದ್ದಾಗ ಅಥವಾ ಬೇರೆ ಯಾವುದೇ ಅಸಹಜ ನಡುವಳಿಕೆಯನ್ನು ನೀವು ಗುರುತಿಸಿದರೆ, ನೀವು ಮಕ್ಕಳ ವೈದ್ಯಕೀಯ ವಿಭಾಗ/ ಮಕ್ಕಳ ಫಿಸಿಯೋಥೆರಪಿ ವಿಭಾಗಕ್ಕೆ ಭೇಟಿ ನೀಡಬಹುದು.
-ಮಾನಸ ಕೆ.ಆರ್.
ಪಿಎಚ್.ಡಿ ಸಂಶೋಧನ ವಿದ್ಯಾರ್ಥಿನಿ
ಫಿಸಿಯೋಥೆರಪಿ ವಿಭಾಗ, ಎಂಸಿಎಚ್‌ಪಿ,
ಮಾಹೆ, ಮಣಿಪಾಲ
-ಡಾ| ಭಾಮಿನಿ ಕೃಷ್ಣ ರಾವ್
ಪ್ರೊಫೆಸರ್, ಮಕ್ಕಳ ಫಿಸಿಯೋಥೆರಪಿ
ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ
–
ಡಾ| ಲೆಸ್ಲಿ ಎಡ್ವರ್ಡ್ ಲೆವಿಸ್
ಪ್ರೊಫೆಸರ್, ಮುಖ್ಯಸ್ಥರು, ಮಕ್ಕಳ
ವೈದ್ಯಕೀಯ ವಿಭಾಗ, ಕಸ್ತೂರ್ಬಾ ಆಸ್ಪತ್ರೆ,
ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಮಕ್ಕಳ ಫಿಸಿಯೋಥೆರಪಿ ಮತ್ತು ಪೀಡಿಯಾಟ್ರಿಕ್ಸ್ ವಿಭಾಗ, ಕೆಎಂಸಿ ಆಸ್ಪತ್ರೆ, ಮಾಹೆ, ಮಣಿಪಾಲ)