Advertisement
ಸಿದ್ಧಾರೂಢ ಮಠ ಸುತ್ತಮುತ್ತಲಿನ ಶಾಲೆಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕಲಿತಿರುವವರೇ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕು ಹಾಗೂ ಬಡ-ಅಂಗವಿಕಲ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಉತ್ಕಟ ಇಚ್ಛೆ, ಗುರಿ ಇಟ್ಟುಕೊಂಡು “ಶ್ರೀ ಸದ್ಗುರು ಸಿದ್ಧಾರೂಢ ಹಳೇ ವಿದ್ಯಾರ್ಥಿಗಳ ಸಂಘ’ ಸ್ಥಾಪಿಸಿದ್ದಾರೆ. ಆ ಮೂಲಕ 3 ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.
Related Articles
Advertisement
ಹೆಗ್ಗೇರಿಯ ಶ್ರೀ ಮಂಜುನಾಥ ಪ್ರೌಢಶಾಲೆ ಹಾಗೂ ಗೋಕುಲ ರಸ್ತೆ ಬಸವೇಶ್ವರ ನಗರದ ಸರಕಾರಿ ಶಾಲೆಯ ಕಟ್ಟಡವನ್ನು ಬಣ್ಣ ಹಚ್ಚಿ ಕಂಗೊಳಿಸಿದ್ದಾರೆ. ಬಸವೇಶ್ವರ ನಗರದಲ್ಲಿ ಬಿದ್ದಿದ್ದ ಶಾಲೆಯ ಕಾಂಪೌಂಡ್ ಅನ್ನು ಕಟ್ಟಿದ್ದಾರೆ. ಹೆಗ್ಗೇರಿಯ ಮಂಜುನಾಥ ಹೈಸ್ಕೂಲ್ ಹಾಗೂ ಹಳೇಹುಬ್ಬಳ್ಳಿ ಸರಕಾರಿ ಶಾಲೆ ನಂ. 1ರ ಆವರಣ ಗೋಡೆಗಳನ್ನು ಅಭಿವೃದ್ಧಿಗೊಳಿಸಲು ಮುಂದಾಗಿದ್ದಾರೆ.
ಶ್ರಮದಾನ ಮೂಲಕ ಶಾಲೆ ಅಭಿವೃದ್ಧಿ: ಶ್ರೀ ಸದ್ಗುರು ಸಿದ್ಧಾರೂಢ ಹಳೇ ವಿದ್ಯಾರ್ಥಿಗಳ ಸಂಘದಲ್ಲಿ ಪೇಂಟರ್, ಗುತ್ತಿಗೆದಾರರು ಇರುವುದರಿಂದ ಅವರೇ ಆ ಶಾಲೆಯಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸರ್ವೇ ಮಾಡಿ, ಅಂದಾಜು ವೆಚ್ಚ ಸಿದ್ಧಪಡಿಸಿ ಸ್ವತಃ ತಾವೇ ಶ್ರಮದಾನದ ಮೂಲಕ ಕಡಿಮೆ ವೆಚ್ಚದಲ್ಲಿ ಗುಣಮಟ್ಟದಲ್ಲಿ
ಶಾಲೆ ಅಭಿವೃದ್ಧಿ ಪಡಿಸುತ್ತಿದ್ದಾರೆ. ಸಂಘದವರು ಮಾಡುತ್ತಿರುವ ಕಾರ್ಯ ಮನಗಂಡ ಇನ್ನಿತರೆ ಸರಕಾರಿ ಶಾಲೆಯವರು ತಮ್ಮ ಶಾಲೆಯನ್ನು ಅಭಿವೃದ್ಧಿಗೊಳಿಸಿ ಕೊಡಿ ಎಂದು ಸಂಘದವರಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಈಗಾಗಲೇ ಈ ಸಂಘದವರಿಗೆ ಹುಬ್ಬಳ್ಳಿ, ಕಲಘಟಗಿ, ಚವರಗುಡ್ಡ, ಕೊಪ್ಪಳ ಜಿಲ್ಲೆ ಯಲಬುರ್ಗಾ ಸೇರಿದಂತೆ ಇನ್ನಿತರೆ ಭಾಗಗಳಿಂದ 15ಕ್ಕೂ ಅಧಿಕ ಶಾಲೆಯವರು ಮನವಿ ಮಾಡಿಕೊಂಡಿದ್ದಾರೆ. ಅವುಗಳನ್ನು ಒಂದೊಂದಾಗಿ ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ.
ಸಂಘದ ಸದಸ್ಯರು 2020ರಲ್ಲಿ ಎಸ್.ಎಂ. ಕೃಷ್ಣ ನಗರದ ಸರಕಾರಿ ಕನ್ನಡ ಮಾಧ್ಯಮ ಶಾಲೆ, ಹಳೇಹುಬ್ಬಳ್ಳಿ ಕಿಲ್ಲಾದ ಉರ್ದು ಶಾಲೆ, ಹೆಗ್ಗೇರಿ ಫತೇಶಾ ನಗರದ ಎಲ್‌ಪಿಯುಜಿಸ್ ಉರ್ದು ಶಾಲೆ ಸೇರಿದಂತೆ ಐದು ಶಾಲೆಗಳನ್ನಾದರೂ ಅಭಿವೃದ್ಧಿ ಪಡಿಸಬೇಕೆಂಬ ಗುರಿ ಹೊಂದಿದ್ದಾರೆ.
ಕಲಾ ಪ್ರದರ್ಶನದ ಗಳಿಕೆಯೂ ಸಾಥ್: ಸದ್ಗುರು ಶ್ರೀ ಸಿದ್ಧಾರೂಢ ಹಳೇ ವಿದ್ಯಾರ್ಥಿಗಳ ಸಂಘದವರಲ್ಲಿ ಕೆಲವರು ಹಾಡುಗಾರರಿದ್ದಾರೆ. ಮೆಲೋಡಿ ತಂಡ ರಚಿಸಲಾಗಿದೆ. ಅವರು ಸಭೆ-ಸಮಾರಂಭ, ಮದುವೆ, ಇನ್ನಿತರೆ ಕಾರ್ಯಕ್ರಮಗಳಲ್ಲಿ ರಸಮಂಜರಿ ಕಾರ್ಯಕ್ರಮ ನಡೆಸಿ ಅದರಿಂದ ಬರುವ 8-10 ಸಾವಿರ ರೂ. ಹಣವನ್ನು ಸಂಘದಿಂದ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತದೆ. ಅಲ್ಲದೆ ಸಂಘದ ಕಚೇರಿಯಲ್ಲಿ ಮಕ್ಕಳಿಗೆ ಪ್ರತಿದಿನ ಹಾಡು, ನೃತ್ಯ ಕಲಿಸಲಾಗುತ್ತದೆ. ಸಂಘದಲ್ಲಿ ಸದ್ಗುರು ಸಿದ್ಧಾರೂಢ ಶಾಲೆಯಲ್ಲಿ ಕಲಿತವರೆ ಹೆಚ್ಚಿನ ಸದಸ್ಯರಿದ್ದಾರೆ. ಹಳೆಹುಬ್ಬಳ್ಳಿ ಸರ್ಕಾರಿ ಶಾಲೆ ನಂ. 1ರಲ್ಲಿ ಡಿ. 29ರಂದು ಶಾಲೆಯ 120ನೇ ವಾರ್ಷಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ ಸಂಘದವರು ಶಾಲೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
-ಶಿವಶಂಕರ ಕಂಠಿ