Advertisement

ಪಂತ್‌ ನಿರ್ಧಾರಗಳ ಬಗ್ಗೆ ಟೀಕೆ ಬೇಡ: ರೋಹಿತ್‌

09:52 AM Nov 05, 2019 | Team Udayavani |

ಹೊಸದಿಲ್ಲಿ: ಟಿ20 ಇತಿಹಾಸದಲ್ಲಿ ಭಾರತ ಮೊದಲ ಸಲ ಬಾಂಗ್ಲಾದೇಶಕ್ಕೆ ಶರಣಾಗಿದೆ. ರವಿವಾರ ರಾತ್ರಿ ಇಲ್ಲಿ ನಡೆದ ಮುಖಾಮುಖೀಯಲ್ಲಿ ಬಾಂಗ್ಲಾ ಎಲ್ಲ ವಿಭಾಗಗಳಲ್ಲೂ ಆತಿಥೇಯರನ್ನು ಮೀರಿಸಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

Advertisement

ಭಾರತದ ಸೋಲಿಗೆ ಕಾರಣಗಳು ಹಲವು. ಮೊದಲನೆಯದು ಅನನುಭವಿಗಳ ಪಡೆ. ನಿಧಾನ ಗತಿಯ ಬ್ಯಾಟಿಂಗ್‌, ಕಳಪೆ ಫೀಲ್ಡಿಂಗ್‌ ಮತ್ತು ಕಳಪೆ ಬೌಲಿಂಗ್‌, ಜತೆಗೆ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅವರ ಡಿಆರ್‌ಎಸ್‌ ನಿರ್ಧಾರಗಳೂ ಉಲ್ಟಾ ಹೊಡೆದದ್ದು ಕೂಡ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಕೀಪರ್‌ ನಿರ್ಧಾರ ನಿರ್ಣಾಯಕ
ಲೆಗ್‌ ಬಿಫೋರ್‌, ಕಾಟ್‌ ಬಿಹೈಂಡ್‌ಗಳಂಥ ಸೂಕ್ಷ್ಮ ತೀರ್ಮಾನಗಳ ಹಿಂದೆ ಕೀಪರ್‌ ನಿರ್ಣಯ ಮಹತ್ವದ ಪಾತ್ರ ವಹಿಸುತ್ತದೆ. ಡಿಆರ್‌ಎಸ್‌ಗೆ ಮೊರೆಹೋಗಬೇಕೋ ಬೇಡವೋ ಎಂಬ ವಿಚಾರದಲ್ಲಿ ಕೀಪರ್‌ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಮುಂದಿನ ಹೆಜ್ಜೆ ಇಡಲಾಗುತ್ತದೆ. ಇದು ಯಶಸ್ವಿಯಾದರೆ ಲಾಭ, ಇಲ್ಲವಾದರೆ ತಂಡಕ್ಕೆ ಭಾರೀ ನಷ್ಟ.

ದಿಲ್ಲಿ ಪಂದ್ಯದ ವೇಳೆ ಪಂತ್‌ ತೆಗೆದುಕೊಂಡ ಡಿಆರ್‌ಎಸ್‌ ತೀರ್ಮಾನಗಳು ವಿಫ‌ಲವಾಗಿ ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಹಾಗೆಯೇ ಡಿಆರ್‌ಎಸ್‌ ತೆಗೆದುಕೊಳ್ಳದ ಸಂದರ್ಭದಲ್ಲಿ ಎದುರಾಳಿಗೆ ಬಂಪರ್‌ ಹೊಡೆದದ್ದೂ ಸುಳ್ಳಲ್ಲ!

ಇದರಿಂದ ರಿಷಭ್‌ ಪಂತ್‌ ವಿರುದ್ಧ ಭಾರೀ ಟೀಕೆಗಳು ಕೇಳಿಬಂದಿವೆ. ಆದರೆ ಉಸ್ತುವಾರಿ ನಾಯಕ ರೋಹಿತ್‌ ಶರ್ಮ ಅವರು ಪಂತ್‌ ಪರವಾಗಿ ನಿಂತಿದ್ದಾರೆ.

Advertisement

“ರಿಷಭ್‌ ಪಂತ್‌ ಇನ್ನೂ ಯುವ ಆಟಗಾರ. ಅವರಿಗೆ ಇಂಥ ವಿಷಯಗಳು ಅರ್ಥವಾಗಬೇಕಾದರೆ ಇನ್ನೂ ಸ್ವಲ್ಪ ಸಮಯ ಬೇಕು. ಅವರು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಅವಸರದ ತೀರ್ಮಾನ ತೆಗೆದುಕೊಳ್ಳುವುದು, ಟೀಕೆ ಮಾಡುವುದು ಸರಿಯಲ್ಲ. ಇದರಲ್ಲಿ ಬೌಲರ್‌ಗಳ ಪಾಲೂ ಇರುತ್ತದೆ. ನಾಯಕ ಔಟ್‌ಫೀಲ್ಡ್‌ನಲ್ಲಿ ದೂರದಲ್ಲಿದ್ದಾಗ ಬೌಲರ್‌-ಕೀಪರ್‌ ಸೇರಿ ಡಿಆರ್‌ಎಸ್‌ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ರೋಹಿತ್‌ ಹೇಳಿದರು.

ರಹೀಂಗೆ ಲಾಭ
ಬಾಂಗ್ಲಾದ ಗೆಲುವಿನ ರೂವಾರಿ ಮುಶ್ಫಿಕರ್‌ ರಹೀಂ ಕೇವಲ 6 ರನ್‌ ಮಾಡಿದ್ದಾಗ ಅವರ ವಿರುದ್ಧ ಬಂದ ಲೆಗ್‌ ಬಿಫೋರ್‌ ಮನವಿಯನ್ನು ಅಂಪಾಯರ್‌ ತಳ್ಳಿಹಾಕಿದ್ದರು. ಆಗ ಭಾರತ ಡಿಆರ್‌ಎಸ್‌ಗೆ ಮುಂದಾಗಲಿಲ್ಲ. ಟೀವಿ ರೀಪ್ಲೆಯಲ್ಲಿ ಇದು ಲೆಗ್‌ ಬಿಫೋರ್‌ ಆದದ್ದು ಸ್ಪಷ್ಟವಾಗಿತ್ತು.

ಯಜುವೇಂದ್ರ ಚಹಲ್‌ ಎಸೆದ ಇನ್ನಿಂಗ್ಸಿನ 10ನೇ ಓವರಿನ 3ನೇ ಎಸೆತದಲ್ಲಿ ಈ ಘಟನೆ ಸಂಭವಿಸಿತ್ತು. ಇದರ ಲಾಭವೆತ್ತಿದ ರಹೀಂ ಅಜೇಯ 60 ರನ್‌ ಬಾರಿಸಿ ತಂಡವನ್ನು ಗೆಲ್ಲಿಸಿದ್ದು ಈಗ ಇತಿಹಾಸ.

18ನೇ ಓವರಿನಲ್ಲಿ ಕೃಣಾಲ್‌ ಪಾಂಡ್ಯ ಬಿಟ್ಟ ಕ್ಯಾಚ್‌ ಕೂಡ ರಹೀಂಗೆ ಲಾಭ ತಂದಿತ್ತಿತು. ಇದರ ಫ‌ಲವೇ, ಖಲೀಲ್‌ ಅಹ್ಮದ್‌ ಪಾಲಾದ ಮುಂದಿನ ಓವರಿನಲ್ಲಿ ಸಿಡಿಸಿದ ಸತತ 4 ಬೌಂಡರಿ!

Advertisement

Udayavani is now on Telegram. Click here to join our channel and stay updated with the latest news.

Next