ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಈ ಬಾರಿ ಐಪಿಎಲ್ ನಲ್ಲಿ ಕೇವಲ ಆಟಗಾರನಾಗಿ ಆಡುತ್ತಿದ್ದಾರೆ. ಕಳೆದೊಂದು ದಶಕದಿಂದ ಅವರು ಮುನ್ನಡೆಸುತ್ತಿದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಬದಲಾವಣೆ ಮಾಡಲಾಗಿದೆ. ರೋಹಿತ್ ಬದಲಿಗೆ ಹಾರ್ದಿಕ್ ಪಾಂಡ್ಯ ಅವರಿಗೆ ಮುಂಬೈ ತಂಡದ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ.
ಐಪಿಎಲ್ ಆರಂಭವಾಗಿ ಒಂದು ತಿಂಗಳು ಕಳೆದುಹೋಗಿದೆ. ಇದೀಗ ಮೊದಲ ಬಾರಿ ರೋಹಿತ್ ಶರ್ಮಾ ನಾಯಕತ್ವ ಕಳೆದುಕೊಂಡ ಬಗ್ಗೆ ಮಾತನಾಡಿದ್ದಾರೆ.
ಟಿ20 ವಿಶ್ವಕಪ್ ಗೆ ಭಾರತ ತಂಡದ ಆಯ್ಕೆಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ರೋಹಿತ್ ಅವರಿಗೆ ಮುಂಬೈ ನಾಯಕತ್ವದ ಬಗ್ಗೆ ಕೇಳಿದಾಗ, “ಎಲ್ಲವೂ ನೀವೆಂದುಕೊಂಡಂತೆ ನಡೆಯುವುದಿಲ್ಲ” ಎಂದರು.
“ಇದು ಬದುಕಿನ ಒಂದು ಭಾಗ. ಎಲ್ಲವೂ ನೀವು ಎಂದುಕೊಂಡಂತೆ ನಡೆಯುವುದಿಲ್ಲ. ಇದು ಒಂದು ಒಳ್ಳೆಯ ಅನುಭವವಾಗಿದೆ” ಎಂದು ರೋಹಿತ್ ಹೇಳಿದರು.
“ಈ ಹಿಂದೆಯೂ ನಾನು ನಾಯಕನಾಗಿರಲಿಲ್ಲ, ಹಲವರು ನಾಯಕರ ಅಡಿಯಲ್ಲಿ ಆಡಿದ್ದೇನೆ. ಇದರಲ್ಲಿ ಹೊಸತೇನು ಇಲ್ಲ” ಎಂದರು.
“ಆಟಗಾರನಾಗಿ ತಂಡಕ್ಕೆ ಏನು ಮಾಡಬೇಕು ಅದನ್ನು ಮಾಡುತ್ತಿದ್ದೇನೆ. ನಾನು ಕಳೆದ ಒಂದು ತಿಂಗಳ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಅದನ್ನು ಮಾಡಲು ಪ್ರಯತ್ನಿಸಿದೆ” ಎಂದು ರೋಹಿತ್ ಹೇಳಿದರು.