ನವದೆಹಲಿ : ಬಾಲಿವುಡ್ ಸಿನಿಮಾ ನಿರ್ದೇಶಕ ರೋಹಿತ್ ಶೆಟ್ಟಿ ಕೋವಿಡ್ ರೋಗಿಗಳ ಆರೈಕೆ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಕೋವಿಡ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.
ದೇಶವನ್ನು ಕಾಡುತ್ತಿರುವ ಕೋವಿಡ್ ಎರಡನೇ ಅಲೆಗೆ ಜನ-ಸಾಮಾನ್ಯರು ನಲುಗುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್‍ಗಳು ಸಿಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ದುಸ್ಥಿತಿ ಸಂದರ್ಭದಲ್ಲಿ ರೋಹಿತ್ ಶೆಟ್ಟಿ ನೆರವಿಗೆ ಧಾವಿಸಿದ್ದಾರೆ. ಅವರು ನವದೆಹಲಿಯಲ್ಲಿ ಆಕ್ಸಿಜನ್ ಸಹಿತ 25 ಬೆಡ್‍ಗಳ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿದ್ದಾರೆ. ಆಸ್ಪತ್ರೆ ಬಿಲ್ ಕಟ್ಟಲಾಗದ ಬಡ ರೋಗಿಗಳಿಗೆ ಇಲ್ಲಿ ಬೆಡ್ ವ್ಯವಸ್ಥೆ ಮಾಡಲಾಗಿದೆ. ಊಟ ಸೇರಿದಂತೆ ಹಲವು ಸೌಲಭ್ಯವಗಳನ್ನು ಉಚಿತವಾಗಿ ನೀಡಲಾಗುತ್ತಿದೆ.
ರೋಹಿತ್ ಶೆಟ್ಟಿಯವರ ಈ ಸಾಮಾಜಿಕ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪುರ ಹರಿದು ಬರುತ್ತಿದೆ. ರಾಜಕೀಯ ನಾಯಕ ಮಂಜಿಂದರ್ ಸಿಂಗ್ ಅವರು ರೋಹಿತ್ ಶೆಟ್ಟಿಯವರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ರೋಹಿತ್ ಶೆಟ್ಟಿಯಂತೆ ಹಲವು ಬಾಲಿವುಡ್ ತಾರೆಯರು ಕೋವಿಡ್ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದದಾರೆ. ನಟ ಅಕ್ಷಯ್ ಕುಮಾರ್, ಸಲ್ಮಾನ್ ಖಾನ್,ಸೋನು ಸೂದ್, ತಾಪ್ಸಿ ಪನ್ನು, ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಸಾಕಷ್ಟು ನಟ-ನಟಿಯರು ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.
ಇನ್ನು ರೋಹಿತ್ ಶೆಟ್ಟಿಯವರು ಆ್ಯಕ್ಷನ್ ಕಟ್ ಹೇಳಿರುವ ‘ಸೂರ್ಯವಂಶಿ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕೋವಿಡ್ ಕಾರಣವಾಗಿ ಈಗಾಗಲೇ ಈ ಸಿನಿಮಾ ಬಿಡುಗಡೆ ದಿನಾಂಕ ಎರಡು ಬಾರಿ ಮುಂದಕ್ಕೆ ಹೋಗಿದೆ. ಎರಡನೇ ಅಲೆ ಸಂಪೂರ್ಣವಾಗಿ ಶಮನವಾದ ಬಳಿಕ ಸೂರ್ಯವಂಶಿ ಚಿತ್ರ ತೆರೆಗೆ ಬರಬಹುದು. ಈ ಸಿನಿಮಾದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಕತ್ರಿನಾ ಕೈಫ್ ನಟಿಸಿದ್ದಾರೆ.