ಅಹಮದಾಬಾದ್: ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ ಅವರು ಸೋಲಿನ ಆರಂಭ ಪಡೆದರು. ರವಿವಾರ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈಗೆ ಆರು ರನ್ ಸೋಲಾಗಿದೆ. ಗುಜರಾತ್ ನೀಡಿದ್ದ 169 ರನ್ ಗುರಿಯನ್ನು ಬೆನ್ನಟ್ಟಲು ಮುಂಬೈ ವಿಫಲವಾಯಿತು.
ಆಟದ ಉದ್ದಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಹಾರ್ದಿಕ್ ಅವರನ್ನು ಟ್ರೋಲ್ ಮಾಡಲಾಯಿತು. ಡೀಪ್‌ನಲ್ಲಿ ಫೀಲ್ಡಿಂಗ್ ಮಾಡಲು ರೋಹಿತ್ ಗೆ ಹಾರ್ದಿಕ್ ಗೆ ಹೇಳಿದ ರೀತಿಯಿಂದ ಮುಂಬೈ ಹೊಸ ನಾಯಕ ಟ್ರೋಲ್ ಗೆ ಒಳಗಾದರು. ರೋಹಿತ್ ಹಿರಿತನಕ್ಕೆ ಮೈದಾನದಲ್ಲಿ ಗೌರವ ಕೊಡಲಿಲ್ಲ ಎಂದು ಹಾರ್ದಿಕ್ ಗೆ ರೋಹಿತ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿದರು.
ಮೈದಾನದಲ್ಲಿಯೂ ಹಾರ್ದಿಕ್ ವಿರುದ್ಧ ಅಭಿಮಾನಿಗಳು ಸಾಕಷ್ಟು ಕಿರುಚಾಡಿದರು. ಕಳೆದೆರಡು ಸೀಸನ್ ನಲ್ಲಿ ಗುಜರಾತ್ ಪರ ಆಡಿದ್ದ ಹಾರ್ದಿಕ್ ಈ ಬಾರಿ ಮುಂಬೈ ಪಾಳಯ ಸೇರಿದ್ದರು. ಅಚ್ಚರಿಯ ರೀತಿಯಲ್ಲಿ ರೋಹಿತ್ ಅವರನ್ನು ನಾಯಕತ್ವದಿಂದ ಇಳಿಸಿ ಹಾರ್ದಿಕ್ ಗೆ ಜವಾಬ್ದಾರಿ ನೀಡಲಾಗಿತ್ತು.
ಪಂದ್ಯ ಮುಗಿದ ಬಳಿಕ ರೋಹಿತ್ ಕೆಲವು ಮುಂಬೈ ಮತ್ತು ಗುಜರಾತ್ ಆಟಗಾರರೊಂದಿಗೆ ಮಾತನಾಡುತ್ತಿದ್ದಾಗ, ಹಾರ್ದಿಕ್ ಅವರು ರೋಹಿತ್ ರನ್ನು ಹಿಂದಿನಿಂದ ತಬ್ಬಿಕೊಳ್ಳಲು ಬಂದರು. ಆದರೆ ಇದು ಇಬ್ಬರು ಆಟಗಾರರ ನಡುವೆ ಅನಿಮೇಟೆಡ್ ವಾದಕ್ಕೆ ಕಾರಣವಾಗುತ್ತದೆ. ರೋಹಿತ್ ಹಾರ್ದಿಕ್ ಜೊತೆ ಅಸಮಾಧಾನದಿಂದ ಮಾತನಾಡುವುದನ್ನು ಕಾಣಬಹುದು.
ಮೊದಲ ಪಂದ್ಯದಲ್ಲಿ ಹಾರ್ದಿಕ್ ಅವರು ಬೌಲಿಂಗ್, ಬ್ಯಾಟಿಂಗ್ ಮತ್ತು ನಾಯಕತ್ವ ಹೀಗೆ ಮೂರು ವಿಭಾಗದಲ್ಲಿಯೂ ವಿಫಲರಾದರು. ಮೂರು ಓವರ್ ಬೌಲಿಂಗ್ ಮಾಡದ ಹಾರ್ದಿಕ್ 30 ರನ್ ನೀಡಿದರೆ, ಬ್ಯಾಟಿಂಗ್ ನಲ್ಲಿ ಕೊನೆಯಲ್ಲಿ ತಂಡವನ್ನು ಗುರಿ ತಲುಪಿಸಲು ವಿಫಲರಾದರು.