ಹೊಸದಿಲ್ಲಿ: ಭಾರತದ ಏಕದಿನ ಮತ್ತು ಟಿ20 ಕ್ರಿಕೆಟ್ ತಂಡದ ಉಪ ನಾಯಕ ರೋಹಿತ್ ಶರ್ಮಾ, ಸ್ಟಾರ್ ಕುಸ್ತಿಪಟು ವಿನೇಶ್ ಫೋಗಾಟ್, ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಹಾಗೂ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಹೈಜಂಪ್ ಪಟು ಮರಿಯಪ್ಪನ್ ತಂಗವೇಲು ಅವರನ್ನು ಈ ವರ್ಷದ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಕ್ರೀಡಾ ಸಚಿವಾಲಯದ ಆಯ್ಕೆ ಸಮಿತಿಯು ಮಂಗಳವಾರ ಶಿಫಾರಸು ಮಾಡಿದೆ.
2016ರ ಬಳಿಕ ಎರಡನೇ ಬಾರಿ ನಾಲ್ವರು ಕ್ರೀಡಾಪಟುಗಳನ್ನು ದೇಶದ ಅತ್ಯುನ್ನತ ಕ್ರೀಡಾಗೌರವ ಖೇಲ್ ರತ್ನ ಪ್ರಶಸ್ತಿಯ ಅಂತಿಮ ಪಟ್ಟಿಗೆ ಆಯ್ಕೆ ಮಾಡಲಾಗಿದೆ.
ವೀರೇಂದ್ರ ಸೆಹವಾಗ್ ಹಾಗೂ ಮಾಜಿ ಹಾಕಿ ನಾಯಕ ಸರ್ದಾರ್ ಸಿಂಗ್ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಕ್ರೀಡಾ ಪ್ರಾಧಿಕಾರ (ಸಾಯ್)ಕೇಂದ್ರ ಕಚೇರಿಯಲ್ಲಿ ಸಭೆ ಸೇರಿ ಶಿಫಾರಸು ಮಾಡಿದೆ.
ಇದನ್ನೂ ಓದಿ: 222 ಕೋಟಿ ರೂ. ಗೆ ಬಿಡ್ ಗೆದ್ದ ಡ್ರೀಮ್ ಇಲೆವೆನ್ ಪಾಲಿಗೆ ಐಪಿಎಲ್ 2020 ಪ್ರಾಯೋಜಕತ್ವ
2016ರಲ್ಲಿ ಪಿ.ವಿ.ಸಿಂಧು, ದೀಪಾ ಕರ್ಮಾಕರ್, ಜಿತು ರಾಯ್ ಹಾಗೂ ಸಾಕ್ಷಿ ಮಲಿಕ್‌ಗೆ ಜಂಟಿಯಾಗಿ ಖೇಲ್‌ರತ್ನ ಪ್ರಶಸ್ತಿ ನೀಡಲಾಗಿತ್ತು. ಕಳೆದ ವರ್ಷದ ಖೇಲ್ ರತ್ನ ಪ್ರಶಸ್ತಿ ದೀಪಾ ಮಲಿಕ್ ಮತ್ತು ಬಜರಂಗ್ ಪೂನಿಯಾ ಗೆ ನೀಡಿ ಪುರಸ್ಕರಿಸಲಾಗಿತ್ತು.
ನಾಲ್ಕನೇ ಕ್ರಿಕೆಟಿಗ ರೋಹಿತ್: ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾದ ನಾಲ್ಕನೇ ಕ್ರಿಕೆಟಿಗ ಎಂಬ ಹಿರಿಮೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಈ ಹಿಂದೆ ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಗೆ ನೀಡಿ ಪುರಸ್ಕರಿಸಲಾಗಿತ್ತು.