Advertisement

ರೋಹಿತ್‌ ಶರ್ಮ, ಕೊಹ್ಲಿಯನ್ನೇ ನಂಬಿ ಕೂರಬಾರದು: ಸಚಿನ್‌

10:51 PM Jul 11, 2019 | Sriram |

ಮ್ಯಾಂಚೆಸ್ಟರ್‌: ಜಡೇಜ-ಧೋನಿಯ “ಫೈಟಿಂಗ್‌ ಸ್ಪಿರಿಟ್‌’ ಮೆಚ್ಚಿಕೊಂಡ ಸಚಿನ್‌ ತೆಂಡುಲ್ಕರ್‌, ಯಾವತ್ತೂ ರೋಹಿತ್‌-ಕೊಹ್ಲಿಯನ್ನು ನಂಬಿ ಕುಳಿತುಕೊಳ್ಳಬಾರದು ಎಂದು ಹೇಳಿದರು.

Advertisement

“ಸೋಲಿನಿಂದ ಬಹಳ ಬೇಸರವಾಗಿದೆ. ಅನುಮಾನವೇ ಇರಲಿಲ್ಲ, 240 ರನ್‌ ಬೆನ್ನಟ್ಟಬಹುದಾದ ಮೊತ್ತವಾಗಿತ್ತು. ಇದೇನೂ ದೊಡ್ಡ ಸ್ಕೋರ್‌ ಆಗಿರಲಿಲ್ಲ. ಆದರೆ ಪಟಪಟನೆ 3 ವಿಕೆಟ್‌ ಹಾರಿಸಿದ ನ್ಯೂಜಿಲ್ಯಾಂಡ್‌ ಕನಸಿನ ಆರಂಭ ಪಡೆಯಿತು’ ಎಂಬುದಾಗಿ ತೆಂಡುಲ್ಕರ್‌ ಹೇಳಿದರು.

“ಇಲ್ಲಿ ಒಂದು ವಿಷಯ ಹೇಳಬಯಸುತ್ತೇನೆ. ಪ್ರತೀ ಸಲವೂ ರೋಹಿತ್‌ ಗಟ್ಟಿಮುಟ್ಟಾದ ಅಡಿಪಾಯ ನಿರ್ಮಿಸುತ್ತಾರೆ, ಕೊಹ್ಲಿ ಈ ಬುನಾದಿಯ ಮೇಲೆ ಬ್ಯಾಟಿಂಗ್‌ ನಡೆಸುತ್ತಾರೆ ಎಂದು ನಂಬಿ ಕುಳಿತುಕೊಳ್ಳುವುದು ತಪ್ಪು. ಹಾಗೆಯೇ ಧೋನಿಯೇ ಫಿನಿಶ್‌ ಮಾಡುತ್ತಾರೆ ಎಂದು ನಿರೀಕ್ಷಿಸುವುದು ಕೂಡ ತಪ್ಪೆ. ಉಳಿದ ಆಟಗಾರರೂ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಆಡಬೇಕಿದೆ’ ಎಂದರು.

“ನ್ಯೂಜಿಲ್ಯಾಂಡ್‌ ಬೌಲರ್‌ಗಳು ಅಬ್ಬಬ್ಬ ಎಂಬಂಥ ದಾಳಿಯನ್ನೇನೂ ಸಂಘಟಿಸಲಿಲ್ಲ. ಅವರ ಲೈನ್‌-ಲೆಂತ್‌ ಅಮೋಘವಾಗಿತ್ತು. ವಿಲಿಯಮ್ಸನ್‌ ನಾಯಕತ್ವ ಅಸಾ ಮಾನ್ಯ ಮಟ್ಟದಲ್ಲಿತ್ತು’ ಎಂಬುದಾಗಿ ಸಚಿನ್‌ ಹೇಳಿದರು.

ಭಾರತದ ವಿಶ್ವಕಪ್‌ ಪ್ರದರ್ಶನ ಪ್ರಶಂಸನೀಯ: ಬಿಸಿಸಿಐ
ಭಾರತದ ಸೆಮಿಫೈನಲ್‌ ಸೋಲು ಆಘಾತಕಾರಿಯಾದರೂ ತಂಡದ ಒಟ್ಟಾರೆ ಪ್ರದರ್ಶನ ಪ್ರಶಂಸನೀಯ ಎಂದು ಬಿಸಿಸಿಐ ಪ್ರತಿಕ್ರಿಯಿಸಿದೆ. ಮಂಡಳಿಯ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ, ಸಿಒಎ ಸದಸ್ಯೆ ಡಯಾನಾ ಎಡುಲ್ಜಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

“ಭಾರತ ಉತ್ತಮ ಪ್ರದರ್ಶನ ನೀಡಿದೆ. ಆದರೆ ಸೆಮಿಫೈನಲ್‌ ಪಂದ್ಯ ಎರಡನೇ ದಿನಕ್ಕೆ ಹೋದದ್ದು ದುರದೃಷ್ಟಕರ. ಮೊದಲ 3 ವಿಕೆಟ್‌ ಬೇಗನೇ ಉರುಳಿದ್ದು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು. ಜಡೇಜ-ಧೋನಿ ಹೋರಾಟದಿಂದ ಭಾರತ ಚೇತರಿಸಿಕೊಂಡಿತು. ಕೊನೆಯಲ್ಲಿ ಸಣ್ಣ ಅಂತರದಿಂದ ಸೋಲಬೇಕಾಯಿತು’ ಎಂಬುದಾಗಿ ಎಡುಲ್ಜಿ ಹೇಳಿದರು.

ಧೋನಿ ಕುರಿತು ಪ್ರತಿಕ್ರಿಯಿಸಿದ ಡಯಾನಾ ಎಡುಲ್ಜಿ, “ಇಡೀ ಕೂಟದಲ್ಲಿ ಧೋನಿ ಆಡಿದ ಆಟವನ್ನು ನಾನು ಪ್ರಶಂಸಿಸುತ್ತೇನೆ. ನಿವೃತ್ತಿ ಎಂಬುದು ಅವರ ವೈಯಕ್ತಿಕ ವಿಷಯ. ಆದರೆ ನನ್ನ ಪ್ರಕಾರ ಧೋನಿಯಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್‌ ಉಳಿದಿದೆ. ತಂಡದ ಯುವ ಆಟಗಾರರಿಗೆ ಇನ್ನೂ ಧೋನಿಯ ಮಾರ್ಗದರ್ಶನದ ಅಗತ್ಯವಿದೆ’ ಎಂದರು. “ಇದೊಂದು ಕಠಿನ ಪಂದ್ಯವಾಗಿತ್ತು. ಹುಡುಗರು ಚೆನ್ನಾಗಿಯೇ ಆಡಿದರು. ಯಾರೂ ಸೋಲಬೇಕೆಂದು ಬಯಸುವುದಿಲ್ಲ. ಆದರೆ ಇದು ನಮ್ಮ ದಿನವಾಗಿರಲಿಲ್ಲ’ ಎಂಬುದು ಸಿ.ಕೆ. ಖನ್ನಾ ಪ್ರತಿಕ್ರಿಯೆ.

ಭಾರತೀಯ ಅಭಿಮಾನಿಗಳ ಬೆಂಬಲ: ವಿಲಿಯಮ್ಸನ್‌ ವಿಶ್ವಾಸ
ಫೈನಲ್‌ ಪಂದ್ಯದಲ್ಲಿ ಕೋಟ್ಯಂತರ ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಬೆಂಬಲ ತನ್ನ ತಂಡಕ್ಕೆ ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ ನ್ಯೂಜಿಲ್ಯಾಂಡ್‌ ನಾಯಕ ಕೇನ್‌ ವಿಲಿಯಮ್ಸನ್‌.

ಸೆಮಿಫೈನಲ್‌ನಲ್ಲಿ ಭಾರತವನ್ನು ಕೆಡವಿದ ಬಳಿಕ ಪತ್ರಕರ್ತರೊಬ್ಬರು ಭಾರತೀಯ ಅಭಿಮಾನಿಗಳ ಕುರಿತಾಗಿ ಕೇಳಿದ ಪ್ರಶ್ನೆಗೆ ವಿಲಿಯಮ್ಸನ್‌ ನೀಡಿದ ಉತ್ತರ ಬಹಳ ಮಾರ್ಮಿಕವಾಗಿತ್ತು.

ಸ್ಟೇಡಿಯಂನ ಹೊರಗೆ ಆಕ್ರೋಶದಿಂದಿರುವ ಭಾರತೀಯ ಅಭಿಮಾನಿಗಳನ್ನು ಕಂಡೆ ಎಂದು ಈ ಪತ್ರಕರ್ತ ಹೇಳಿದಾಗ, “ಅವರು ಅಷ್ಟು ಆಕ್ರೋಶಗೊಂಡಿಲ್ಲ ಎಂದು ಭಾವಿಸುತ್ತೇನೆ. ಭಾರತೀಯರ ಕ್ರಿಕೆಟ್‌ ವ್ಯಾಮೋಹಕ್ಕೆ ಸರಿಸಾಟಿಯಿಲ್ಲ ಮತ್ತು ಭಾರತ ತಂಡದ ಜತೆಗೆ ಆಡುವ ಅವಕಾಶ ಸಿಕ್ಕಿರುವುದು ನಮ್ಮ ಅದೃಷ್ಟ. ಜು. 14ರ ಫೈನಲ್‌ ಪಂದ್ಯದಲ್ಲಿ ಭಾರತದ ಕ್ರಿಕೆಟ್‌ ಅಭಿಮಾನಿಗಳು ನಮ್ಮನ್ನು ಬೆಂಬಲಿಸುವ ವಿಶ್ವಾಸವಿದೆ’ ಎಂದು ವಿಲಿಯಮ್ಸನ್‌ ಉತ್ತರವಿತ್ತರು. ಇದು “ಚಾಣಾಕ್ಷತನ’ದ ಮತ್ತು “ಸ್ವರಕ್ಷಣೆ’ಯ ಹೇಳಿಕೆಯೇ ಆಗಿರಬಹುದು. ಆದರೆ ಎದುರಾಳಿ ತಂಡದ ನಾಯಕನಾಗಿಯೂ ವಿಲಿಯಮ್ಸನ್‌ ಮಾತಿನಲ್ಲಿದ್ದ ವಿನಮ್ರತೆ ಎಲ್ಲರ ಹೃದಯ ಗೆದ್ದಿದೆ.

ಕಂಗ್ರಾಟ್ಸ್‌ ವಿಲಿಯಮ್ಸನ್‌. ಸತತ 2ನೇ ಫೈನಲ್‌ ತಲುಪಿದ ನ್ಯೂಜಿಲ್ಯಾಂಡಿಗೆ ಅಭಿನಂದನೆಗಳು. ಜಡೇಜ-ಧೋನಿ ಹೋರಾಟ ಅಮೋಘ ಮಟ್ಟದಲ್ಲಿತ್ತು.
-ವಿವಿಎಸ್‌ ಲಕ್ಷ್ಮಣ್‌

ಸೋಲಿನಿಂದ ನಿರಾಸೆಯಾಗಿದೆ. ಆದರೆ ಭಾರತ ಆಡಿದ ರೀತಿ ಹೆಮ್ಮೆಪಡುವಂತಿತ್ತು. ಫೆಂಟಾಸ್ಟಿಕ್‌ ಗೇಮ್‌. ಆಲ್‌ ದಿ ಬೆಸ್ಟ್‌ ಫಾರ್‌ ಫೈನಲ್‌.
-ಗೌತಮ್‌ ಗಂಭೀರ್‌

ಹೃದಯಾಘಾತವೇ ಆಗಿದೆ. ಬ್ಲ್ಯಾಕ್‌ ಕ್ಯಾಪ್ಸ್‌ ಗೆ ಕಂಗ್ರಾಟ್ಸ್‌. ವೆಲ್‌ ಡನ್‌ ಜಡೇಜ.
– ಹರ್ಭಜನ್‌ ಸಿಂಗ್‌

ಅಮೋಘ ಗೆಲುವಿಗೆ, ಅಮೋಘ ನಾಯಕತ್ವಕ್ಕೆ ಅಭಿನಂದನೆಗಳು. ಭಾರತದ ದುರದೃಷ್ಟ‌.
– ಮೈಕಲ್‌ ಕ್ಲಾರ್ಕ್‌

ನನ್ನ ದೃಷ್ಟಿಯಲ್ಲಿ ಭಾರತ ಚಾಂಪಿ ಯನ್ನರಿಗಿಂತ ಯಾವ ರೀತಿಯಲ್ಲೂ ಕಡಿಮೆ ಇಲ್ಲ. ಏಳನ್ನು ಗೆದ್ದಿದ್ದೇವೆ, ಎರಡರಲ್ಲಷ್ಟೇ ಸೋತಿದ್ದೇವೆ. ವೆಲ್‌ ಡನ್‌ ಇಂಡಿಯಾ.
– ಸಂಜಯ್‌ ಮಾಂಜ್ರೆàಕರ್‌

ಆಘಾತಕಾರಿ ಫ‌ಲಿತಾಂಶ. ನಾನು ಇಂಗ್ಲೆಂಡ್‌-ಭಾರತ ಫೈನಲ್‌ ನಿರೀಕ್ಷಿಸಿದ್ದೆ. ಭಾರತದ ಬ್ಯಾಟಿಂಗ್‌ ಸರದಿ ಯನ್ನು ಸಣ್ಣ ಮೊತ್ತಕ್ಕೆ ನಿಯಂತ್ರಿಸಿದ ನ್ಯೂಜಿಲ್ಯಾಂಡ್‌ ಪ್ರದರ್ಶನ ಅದ್ಭುತವಾಗಿತ್ತು. ಜಡೇಜ ಅವರದು ಗ್ರೇಟ್‌ ಗೇಮ್‌, ಭಾರತದ ದುರದೃಷ್ಟ.
– ಶಾಹಿದ್‌ ಅಫ್ರಿದಿ

Advertisement

Udayavani is now on Telegram. Click here to join our channel and stay updated with the latest news.

Next