ಶಾರ್ಜಾ: ಗಾಯದಿಂದ ಸುಧಾರಿಸಿಕೊಳ್ಳುತ್ತಿರುವುದರಿಂದ ಗಡಿಬಿಡಿಯಲ್ಲಿ ಮತ್ತೆ ಮೈದಾನಕ್ಕಿಳಿಯಬೇಡಿ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಂಗಳವಾರ ಸಲಹೆ ನೀಡಿದ ಬೆನ್ನಲ್ಲೇ, ರೋಹಿತ್ ಶರ್ಮ ಮುಂಬೈ ಪರ ಐಪಿಎಲ್ ಆಡಿದ್ದರು! ಅದೂ ನಾಲ್ಕು ಪಂದ್ಯಗಳ ನಂತರ. ಆದರೆ ರೋಹಿತ್ ಮತ್ತೊಂದು ಹೇಳಿಕೆ ನೀಡಿದ್ದು, ಚರ್ಚೆಗೆ ಕಾರಣವಾಗಿದೆ.
ಒಂದು ವೇಳೆ ರೋಹಿತ್ ಶರ್ಮ ತಮ್ಮ ದೈಹಿಕ ಸಾಮರ್ಥ್ಯ ಸಾಬೀತು ಮಾಡಿದರೆ, ಮತ್ತೆ ಆಸ್ಟ್ರೇಲಿಯ ಪ್ರವಾಸಕ್ಕೆ ಆಯ್ಕೆಯಾಗುತ್ತಾರೆ, ಅದರಲ್ಲಿ ಸಂಶಯವೇ ಇಲ್ಲ ಎಂದು ಗಂಗೂಲಿ ಭರವಸೆ ನೀಡಿದ್ದರು. ಈ ಬಗ್ಗೆ ಎದುರಾದ ಪ್ರಶ್ನೆಗೆ ಮಂಗಳವಾರ ಐಪಿಎಲ್ ಪಂದ್ಯಾನಂತರ ಉತ್ತರಿಸಿದ ರೋಹಿತ್ ತಾನು ಸಂಪೂರ್ಣವಾಗಿ ಸುಧಾರಿಸಿಕೊಂಡಿದ್ದೇನೆ. ಮಂಡಿನೋವಿನ ಸಮಸ್ಯೆ ಕಾಣಿಸುತ್ತಿಲ ಎಂದು ಹೇಳಿದ್ದಾರೆ.
ಇದು ಅವರು ಭಾರತ ತಂಡದೊಂದಿಗೆ ಆಸ್ಟ್ರೇಲಿಯಕ್ಕೆ ತೆರಳುವ ಸಾಧ್ಯತೆಯನ್ನು ಹೆಚ್ಚಿಸಿದೆ. ಅಷ್ಟು ಮಾತ್ರವಲ್ಲ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇದನ್ನೂ ಓದಿ:ಮೊದಲ ಫೈನಲ್ ಕನಸಲ್ಲಿ ಡೆಲ್ಲಿ ಕ್ಯಾಪಿಟಲ್ಸ್
ರೋಹಿತ್‌ಗೆ ಆಗಿರುವ ಗಾಯದ ತೀವ್ರತೆಯನ್ನು ಪತ್ತೆ ಹಚ್ಚುವಲ್ಲಿ ಬಿಸಿಸಿಐ ವಿಫಲವಾಯಿತೇ? ಇಲ್ಲಿ ರೋಹಿತ್‌ರನ್ನು ಕಡೆಗಣಿಸುವ ಉದ್ದೇಶವೇನಾದರೂ ಇತ್ತೇ? ಇದು ನಿಜಕ್ಕೂ ಕೊಹ್ಲಿ-ರೋಹಿತ್ ನಡುವಿನ ಒಳಜಗಳದ ಫಲವೇ? ಹೀಗೆಲ್ಲ ಚರ್ಚೆಗಳು ಕ್ರಿಕೆಟ್ ವಲಯದಲ್ಲಿ ನಡೆಯುತ್ತಿದೆ.
ಮುಂಬರುವ ಆಸೀಸ್ ಸರಣಿಗೆ ಆಯ್ಕೆಯಾದ ತಂಡದಲ್ಲಿ ರೋಹಿತ್ ಗೆ ಜಾಗ ನೀಡಿಲ್ಲ. ಗಾಯದ ಕಾರಣ ನೀಡಿ ಮೂರು ಮಾದರಿ ಕ್ರಿಕೆಟ್ ನಿಂದಲೂ ರೋಹಿತ್ ರನ್ನು ಕೈಬಿಡಲಾಗಿದೆ. ಏಕದಿನ ಮತ್ತು ಟಿ 20 ತಂಡಕ್ಕೆ ರೋಹಿತ್ ಬದಲು ಕೆ ಎಲ್ ರಾಹುಲ್ ಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ.