Advertisement

ಸಂಘಟಿತ ಪ್ರಯತ್ನ ಅಗತ್ಯ: ರೋಹಿತ್‌ ಶರ್ಮ

11:58 PM Apr 08, 2022 | Team Udayavani |

ಮುಂಬಯಿ: ಐದು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡ ಈ ಐಪಿಎಲ್‌ನಲ್ಲಿ ನೀರಸ ಪ್ರದರ್ಶನ ನೀಡಿದೆ.

Advertisement

ಆಡಿದ ಮೂರು ಪಂದ್ಯಗಳಲ್ಲಿ ಅನುಕ್ರಮವಾಗಿ ಡೆಲ್ಲಿ, ರಾಜಸ್ಥಾನ್‌ ಮತ್ತು ಕೋಲ್ಕತಾ ವಿರುದ್ಧ ಸೋತಿರುವ ಮುಂಬೈ ಇದೀಗ ಗೆಲುವಿನ ನಿರೀಕ್ಷೆಯಲ್ಲಿದೆ.

ಮುಂಬೈ ಶನಿವಾರ ಆರ್‌ಸಿಬಿಯನ್ನು ಎದುರಿಸಲಿದ್ದು, ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸಲಿದೆ. “ನಾವು ಸಂಘಟಿತರಾಗಿ ಹೋರಾಡುವ ಅಗತ್ಯವಿದೆ. ನಾವು ಎಲ್ಲರೂ ಜತೆಯಾಗಿ ಆಡಬೇಕಾಗಿದೆ. ಒಬ್ಬರು ಅಥವಾ ಇಬ್ಬರು ಆಟಗಾರ ರನ್ನು ನಂಬಿಕೊಂಡಿರುವುದು ಸಾಧ್ಯ ವಿಲ್ಲ. ಪ್ರತಿಯೊಬ್ಬರು ಸಂಘಟಿತ ಪ್ರಯತ್ನಕ್ಕೆ ಮುಂದಾಗಬೇಕು. ಆಗ ತಂಡ ಗೆಲ್ಲುವ ಸಾಧ್ಯತೆಯಿದೆ’ ಎಂದು ಮುಂಬೈ ನಾಯಕ ರೋಹಿತ್‌ ಶರ್ಮ ಹೇಳಿದ್ದಾರೆ.

ಯಾರನ್ನೂ ದೂಷಿಸುವುದಿಲ್ಲ
ತಂಡದ ನೀರಸ ನಿರ್ವಹಣೆಗೆ ಯಾರನ್ನೂ ದೂಷಿಸುವುದು ಸರಿ ಯಲ್ಲ. ಆದರೆ ಮುಂಬರುವ ಪಂದ್ಯದಲ್ಲಿ ತಂಡವು ಗೆಲುವಿನ ಗೆರೆ ದಾಟಲು ಪ್ರತಿಯೊಬ್ಬರು ಸ್ವಲ್ಪಮಟ್ಟಿನ ಹತಾಶೆ ಮತ್ತು ಹಸಿವು ಇರುವುದನ್ನು ತೋರ್ಪಡಿಸಬೇಕು ಎಂದು ರೋಹಿತ್‌ ತಿಳಿಸಿದರು.

ಪಂದ್ಯದ ಫ‌ಲಿತಾಂಶದ ಕುರಿತು ನಾವು ಗಂಭೀರವಾಗಿ ಯಾರನ್ನೂ ದೂಷಿಸುವ ಸಾಧ್ಯತೆಯಿಲ್ಲ. ಇದು ನಮ್ಮೆಲ್ಲರ ಪಂದ್ಯವಾಗಿದೆ. ನಾವು ಇಲ್ಲಿ ಜತೆಯಾಗಿ ಗೆಲ್ಲುತ್ತೇವೆ ಅಥವಾ ಸೋಲುತ್ತೇವೆ. ಇದು ತಂಡದ ಎಲ್ಲ ಸದಸ್ಯರಿಗೆ ಅನ್ವಯವಾಗುತ್ತದೆ ಎಂದು ರೋಹಿತ್‌ ವಿವರಿಸಿದರು.

Advertisement

ಇದನ್ನೂ ಓದಿ:ಐಪಿಎಲ್‌: ಶುಭಮನ್‌ ಗಿಲ್‌ ಶತಕ ವಂಚಿತ; ಕೊನೆಯ ಎಸೆತದಲ್ಲಿ ಗೆದ್ದ ಗುಜರಾತ್ ಟೈಟಾನ್ಸ್‌

“ಪ್ರತಿಯೊಬ್ಬರೂ ಸ್ವಲ್ಪ ಮಟ್ಟಿನ ಹತಾಶೆ, ಬೇಸರ ವ್ಯಕ್ತಪಡಿಸುವ ಅಗತ್ಯವಿದೆ ಎಂಬುದು ನನ್ನ ಭಾವನೆ. ಐಪಿಎಲ್‌ನಂತಹ ಕೂಟದಲ್ಲಿ ಆಡುವ ವೇಳೆ ಇಂತಹ ಹತಾಶೆ, ಬೇಸರ ಅಗತ್ಯವಾಗಿ ಬೇಕಾಗಿದೆ. ಆಗ ನಮಗೆ ಗೆಲ್ಲುವ ಹಠ ಬರುತ್ತದೆ. ಇಲ್ಲಿ ಎದುರಾಳಿ ಬೇರೆ ಬೇರೆ ಇರುತ್ತಾರೆ. ಅವರೆಲ್ಲ ಹೊಸ ಹೊಸ ಯೋಜನೆ ರೂಪಿಸಿಕೊಂಡು ಬರುತ್ತಾರೆ. ಹಾಗಾಗಿ ನಾವು ಅವರಿಗಿಂತ ಮೇಲುಗೈ ಹೊಂದಲು ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಮೂಲಕ ಹಠಕಟ್ಟಿ ಗೆಲ್ಲುವ ಹಸಿವಿನಿಂದ ಹೋರಾಡುವ ಅಗತ್ಯವಿದೆ’ ಎಂದರು.

“ಪಂದ್ಯದ ವೇಳೆ ನಾವು ಯಾವುದೇ ಹಂತದಲ್ಲೂ ಭಯಪಡುವ ಅಗತ್ಯವಿಲ್ಲ. ನಾವು ಸಂಘಟಿತವಾಗಿ ಆಡಿದರೆ ಯಾವುದೇ ಸಂಕಷ್ಟದ ಕ್ಷಣವನ್ನು ಸುಲಭವಾಗಿ ನಿಭಾಯಿಸಬಹುದು. ಈ ಮೂಲಕ ಪಂದ್ಯದ ಫ‌ಲಿತಾಂಶವನ್ನು ಬದಲಾಯಿಸಬಹುದು’ ಎಂದು ರೋಹಿತ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next