ಮೆಲ್ಬರ್ನ್: ಐಪಿಎಲ್ 2020 ಟೂರ್ನಿ ವೇಳೆ ಸ್ನಾಯು ಸೆಳೆತದ ಸಮಸ್ಯೆಗೆ ತುತ್ತಾಗಿದ್ದ ರೋಹಿತ್ ಶರ್ಮ ಇದೀಗ ಸಂಪೂರ್ಣ ಚೇತರಿಸಿದ್ದು ಸಿಡ್ನಿಯಲ್ಲಿ 14 ದಿನಗಳ ಕ್ವಾರಂಟೈನ್ ಅವಧಿಯನ್ನು ಮುಗಿಸಿದ್ದಾರೆ. ಆದರೆ ರೋಹಿತ್ ಮೂರನೇ ಟೆಸ್ಟ್ ಪಂದ್ಯ ಆಡುವುದು ಅನುಮಾನವಾಗಿದೆ ಎಂದು ತರಬೇತುದಾರ ರವಿಶಾಸ್ತ್ರಿ ಹೇಳಿದ್ದಾರೆ.
ಅನುಭವಿ ಆಟಗಾರ ಬುಧವಾರ (ಡಿ.30) ಮೆಲ್ಬರ್ನ್ನಲ್ಲಿ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆದರೂ ಜ.7ರಂದು ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಬಗ್ಗೆ ಅನುಮಾನವಿದೆ. ರೋಹಿತ್ ದೈಹಿಕಕ್ಷಮತೆ ಯಾವ ಸ್ಥಿತಿಯಲ್ಲಿದೆ ಎನ್ನುವುದರ ಮೇಲೆ ಎಲ್ಲ ನಿರ್ಧಾರವಾಗುತ್ತದೆ
ಮೂರನೇ ಟೆಸ್ಟ್‌ಗೆ ವಾರ್ನರ್
ಒಂದು ಕಡೆ ಭಾರತ ತಂಡ ಮೂರನೇ ಟೆಸ್ಟ್‌ನಲ್ಲೂ ರೋಹಿತ್ ಶರ್ಮ ಆಡುವುದು ಅನುಮಾನ ಎಂದು ಹೇಳುತ್ತಿದೆ. ಮತ್ತೂಂದು ಕಡೆ ಆಸ್ಟ್ರೇಲಿಯ ತಂಡ ತನ್ನ ಪ್ರಮುಖ ಎಡಗೈ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ತಂಡಕ್ಕೆ ಮರಳುವ ಭರವಸೆಯಲ್ಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಆಸೀಸ್ ನಾಯಕ ಟಿಮ್ ಪೇನ್, ಡೇವಿಡ್ ವಾರ್ನರ್ ಅಭ್ಯಾಸ ಆರಂಭಿಸಿದ್ದಾರೆ. ಅವರು ವಿಕೆಟ್ ನಡುವೆ ಓಡುತ್ತಿದ್ದಾರೆ. ಸದ್ಯ ಅವರ ಸ್ಥಿತಿ ಉತ್ತಮವಾಗಿ ಕಾಣುತ್ತಿದೆ. ಅವರು ಮರಳಿದರೆ ತಂಡಕ್ಕೆ ಬಹಳ ಸಹಾಯವಾಗಲಿದೆ ಎಂದಿದ್ದಾರೆ.
ತೊಡೆಸಂದು ನೋವಿನಿಂದ ವಾರ್ನರ್ ಭಾರತ ವಿರುದ್ಧದ ಮೂರನೇ ಏಕದಿನ ಪಂದ್ಯದಿಂದ ಹೊರನಡೆದಿದ್ದರು. ಆಮೇಲೆ ಮೂರು ಟಿ20, ಮೊದಲೆರಡು ಟೆಸ್ಟ್‌ಗಳಿಗೆ ಗೈರಾಗಿದ್ದಾರೆ. ಇನ್ನೊಬ್ಬ ಪ್ರಮುಖ ಬ್ಯಾಟ್ಸ್‌ಮನ್ ವಿಲ್ ಪುಕೋವ್‌ಸ್ಕಿ ಕೂಡಾ ಮರಳುವ ನಿರೀಕ್ಷೆಯಿದೆ.